ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಸೀಮೆಎಣ್ಣೆ ಪೂರೈಕೆ ಸ್ಥಗಿತ; ಜನರ ಪರದಾಟ

ಸೀಮೆಎಣ್ಣೆ ಮುಕ್ತ ವಿಜಯಪುರ ಜಿಲ್ಲೆ ಘೋಷಣೆ
Last Updated 16 ಜನವರಿ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಜನರ ಆರೋಗ್ಯ, ಪರಿಸರ ಮಾಲಿನ್ಯ ತಡೆಯುವ ಸುದುದ್ದೇಶದಿಂದ ರಾಜ್ಯ ಸರ್ಕಾರ ಕಳೆದೊಂದು ವರ್ಷದಿಂದ ಸೀಮೆಎಣ್ಣೆ ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಿದೆ.

ಸೀಮೆಎಣ್ಣೆ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ಉಜ್ವಲ‘ ಯೋಜನೆಯನ್ನು ಮಾರ್ಪಡಿಸಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕಪ್ರತಿ ಮನೆಗೆ ಉಚಿತ ಎಲ್‌ಪಿಸಿ ಸಿಲಿಂಡರ್‌ ಹಾಗೂ ‘ಬೆಳಗು’ ಯೋಜನೆಯಡಿ ಪ‍್ರತಿ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಆದ್ಯತೆ ನೀಡುವ ಮೂಲಕ ಸೀಮೆಎಣ್ಣೆ ಮೇಲಿನ ಅವಲಂಬನೆಯನ್ನು ಹಂತಹಂತವಾಗಿ ಬಿಡುವಂತೆ ಮಾಡಿದೆ.

ಆದರೆ, ವಿದ್ಯುತ್‌ ಕೈಕೊಟ್ಟಾಗ, ಅಡುಗೆ ಅನಿಲ ಸಿಲಿಂಡರ್‌ ಖಾಲಿಯಾದ ಸಂದರ್ಭದಲ್ಲಿ ಬಳಸಲಾದರೂ ಸೀಮೆ ಎಣ್ಣೆಯನ್ನು ಒದಗಿಸಬೇಕು ಎಂಬುದು ಬಡವರು, ಕೂಲಿಕಾರ್ಮಿಕರು, ಗ್ರಾಮೀಣ ಜನರ ಬೇಡಿಕೆಯಾಗಿದೆ.

ಅಲ್ಲದೇ, ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವ ಅಡುಗೆ ಅನಿಲ ದರದಿಂದ ಕಂಗೆಟ್ಟಿರುವ ಬಡವರು, ಕೂಲಿಕಾರ್ಮಿಕರು ‘ಸೀಮೆಎಣ್ಣೆ’ಯೇ ನಮಗೆ ಸಾಕಾತ್ತು ಎನ್ನುತ್ತಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರವು ಅಡುಗೆ ಅನಿಲ ಬಳಕೆದಾರರಿಗೆ ನೀಡುತ್ತಿದ್ದ ಸಹಾಯಧನವನ್ನೂ ಸ್ಥಗಿತಗೊಳಿಸಿರುವುದರಿಂದ ಬಡಜನರಿಗೆ ಆರ್ಥಿಕ ಹೊರೆ ಭಾರವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಸೀಮೆಎಣ್ಣೆ ಪೂರೈಕೆ ಪುನರಾರಂಭಿಸಿ ಎಂಬ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ.

ಗಾಳಿ–ಮಳೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಾಗ, ಟಿಸಿ ಸುಟ್ಟುವಿದ್ಯುತ್‌ ಕೈಕೊಟ್ಟಾಗ ಮನೆಯಲ್ಲಿ ದೀಪ ಬೆಳಗಿಸಲು ನೆರವಾಗುತ್ತಿದ್ದ ಸೀಮೆ ಎಣ್ಣೆ ಇದೀಗ ಎಲ್ಲಿಯೂ ಲಭಿಸದ ಕಾರಣ ಗ್ರಾಮೀಣ ಜನರು ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಗಿದೆ. ಅಲ್ಲದೇ, ರಾತ್ರಿ ವೇಳೆ ವಿದ್ಯುತ್‌ ಕೈಕೊಡುವುದರಿಂದ ವಿದ್ಯಾರ್ಥಿಗಳ ಓದಿಗೂ ಅಡಚಣೆಯಾಗುತ್ತಿದೆ. ಕೃಷಿ ಪಂಪ್‌ಸೆಟ್‌ ಬಳಕೆಗೂ ಸೀಮೆಎಣ್ಣೆ ಅನುಕೂಲವಾಗುತ್ತಿತ್ತು. ಆದರೆ, ಇದೀಗ ಕಡಿಮೆ ದರದ ಸೀಮೆಎಣ್ಣೆ ಬದಲು ಅಧಿಕ ದರದ ಡೀಸೆಲ್‌ ಬಳಕೆ ರೈತರ ಪಾಲಿಗೆ ದುಬಾರಿಯಾಗಿದೆ.

ಸರ್ಕಾರ ಪಡಿತರ ಚೀಟಿವುಳ್ಳವರಿಗೆ ಮೊದಲಿಗೆ 10 ಲೀಟರ್ ಸೀಮೆ ಎಣ್ಣೆ ವಿತರಣೆ ಮಾಡುತ್ತಿತ್ತು. ನಂತರ 5 ಲೀಟರ್, 3 ಲೀಟರ್ ಕೊನೆಗೆ ಒಂದು ಲೀಟರ್ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿತ್ತು. ಇದೀಗ ಸಂಪೂರ್ಣ ಬಂದ್ ಮಾಡಿದೆ. ಸೀಮೆ ಎಣ್ಣೆ ಬಂದ್ ಮಾಡಿದ್ದರಿಂದ ಇನ್ನೂ ಹಲವಾರು ಬಡವರ ಮನೆಗಳು ಕತ್ತಲುಮಯವಾಗಿವೆ. ಬಡ ಕೂಲಿಕಾರರು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಕಾರಣ ಅಡುಗೆಗೆ ಬಳಕೆ ಮಾಡುವ ದುಬಾರಿ ಬೆಲೆಯ ಎಣ್ಣೆಯಿಂದ ದೀಪ ಹಚ್ಚುತ್ತಿದ್ದಾರೆ.

‘ನಮ್ಮಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಸೀಮೆ ಎಣ್ಣೆ ದೀಪ ಹಚ್ಚುತ್ತಿದ್ದೆ. ಈಗ ಸರ್ಕಾರ ಪಡಿತರ ಚೀಟಿಯಿಂದ ವಿತರಿಸುತ್ತಿದ್ದ ಸೀಮೆ ಎಣ್ಣೆ ಸ್ಥಗಿತಗೊಳಿಸಿದ್ದರಿಂದ ದುಬಾರಿ ಬೆಲೆ ಒಳ್ಳೆಣ್ಣಿ ದೀಪ ಹಚ್ಚುತ್ತಿರುವೆ. ದುಡಿದ ಕೂಲಿಯಲ್ಲಿಯೇ ಚಾರ್ಜರ್ ಬ್ಯಾಟರಿ ತಂದಿರುವೆ. ಆದರೆ, ಅದನ್ನು ಚಾರ್ಜ್ ಮಾಡಲು ಮನೆ, ಮನೆಗೆ ತಿರುಗಬೇಕಾಗಿದೆ. ಸೀಮೆ ಎಣ್ಣೆ ಬಂದ್ ಮಾಡಿದ್ದರಿಂದ ತುಂಬಾ ತೊಂದರೆಯಾಗಿದೆ‘ ಎನ್ನುತ್ತಾರೆಸಿಂದಗಿವಾರ್ಡ್ ನಂ.2ರಕುರೆಟ್ಟಿ ಮಡ್ಡಿಯಕಟ್ಟಡ ಕಾರ್ಮಿಕರಾದ ಅಂಬವ್ವ ಪವಾರ.

‘ಪ್ರತಿದಿನ 4 ರಿಂದ 5 ಗಂಟೆ ವಿದ್ಯುತ್ ಕಡಿತ ಮಾಡುವುದರಿಂದ ದೀಪ ಬೆಳಗುವುದಕ್ಕೆ ಸೀಮೆ ಎಣ್ಣೆ ಬೇಕೇ ಬೇಕು. ಸೀಮೆಎಣ್ಣೆ ರಾಜ್ಯ ಸರ್ಕಾರವು ನಿಲ್ಲಿಸಿರುವುದು ಸರಿಯಲ್ಲ. ಈ ಕೂಡಲೇ ಈ ಮೊದಲು ಇದ್ದ ಹಾಗೆಯೇ ಸೀಮೆಎಣ್ಣೆ ಬಡವರಿಗೆ ವಿತರಿಸಿ ಮನೆ ಬೆಳಗಲು ಅನೂಕುಲ ಮಾಡಿಕೊಡಬೇಕು‘ ಎನ್ನುತ್ತಾರೆನಾಲತವಾಡದ ಶಾಂತವ್ವ ಅಗಸರ, ಅಮರಪ್ಪ ಅಗಸರ, ಚೇತನ ಅಗಸರ.

‘ರಾತ್ರಿ ವೇಳೆ ಮನೆಯಲ್ಲಿ ಮಕ್ಕಳು ಓದುವ ವೇಳೆಯಲ್ಲಿ ದಿಢೀರನೆ ಕರೆಂಟ್ ಕೈ ಕೊಟ್ಟರೆ ಅವರ ಓದು ನಿಂತೆ ಬಿಡುತ್ತದೆ. ಮಕ್ಕಳಿಗೆ ಓದಲು, ಬರೆಯಲು ಅನುಕೂಲವಾಗುವಂತೆ ಕನಿಷ್ಟ ಒಂದು ಕುಟುಂಬಕ್ಕೆ ಒಂದು ಲೀಟರ್ ಸೀಮೆ ಎಣ್ಣೆಯನ್ನು ಸರ್ಕಾರ ಕೊಡಬೇಕು’ ಎನ್ನುತ್ತಾರೆ ನಾಲತವಾಡ ಸಮೀಪದ ಲೊಟಗೇರಿ ಗ್ರಾಮದ ಗುರು ಕಣಕಾಲಮಠ, ಚಿದಾನಂದ ಪಾಕರಡ್ಡಿ, ಲಕ್ಕಪ್ಪ ನಾಗರಬೆಟ್ಟ, ದುರುಗಪ್ಪ.

'ಒಲಿ ಹಚ್ಚಾಕ ಒಂದ ಹನಿ ಸೀಮೆ ಎಣ್ಣೆ ಇರಲಾರ್ದಕ್ಕ ಟ್ರಾಕ್ಟರ್ ಇರೋರ ಮನಿಗೆ ಹೋಗಿ ಡೀಜಲ್ ತೊಗೊಂಡ ಬಂದು ಒಲಿ ಹಚ್ಚುವ ಪರಿಸ್ಥಿತಿ ಇದೆ. ಇಲ್ಲಂದ್ರ ಅಲ್ಲಿ ಇಲ್ಲಿ ಬಿದ್ದ ಪ್ಲಾಸ್ಟಿಕ್ ಹಾಳಿ ತೊಗೊಂಬಂದು ಒಲ್ಯಾಗ ಇಟ್ಟು ಹಚ್ಚಬೇಕಾಗೈತ್ರಿ' ಎನ್ನುತ್ತಾರೆ ನಾಲತವಾಡದ ಸಮೀಪದ ಘಾಳಪೂಜಿ ಗ್ರಾಮದ ಬಸವ್ವ ಪಾಟೀಲ, ಯಮನವ್ವ ಮಂಕಣಿ, ಶರಣವ್ವ ಬಾರಕೇರ, ಶರಣಯ್ಯ ಮಠ.

‘ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಇಸ್ತ್ರಿ ಅಂಗಡಿ ಬೆಳಿಗ್ಗೆ ಆರಂಭಗೊಳ್ಳಲು ಇದ್ದಲಿಗೆ ಸೀಮೆಎಣ್ಣೆ ಅಗತ್ಯ. ಆದರೆ, ಸೀಮೆ ಎಣ್ಣೆ ಬಂದಾದ ಕಾರಣ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ದೇವರಹಿಪ್ಪರಗಿ ಭವಾನಿ ಲಾಂಡ್ರಿ ಮಾಲೀಕ ರಾವುತ ಅಗಸರ.

‘ಬೆಳಿಗ್ಗೆ ಒಲೆ ಹೊತ್ತಿಸುವ ಮಹಿಳೆಯರ ಪಾಡು ಅವರಿಗೆ ಮಾತ್ರ ಗೊತ್ತು. ರಾತ್ರಿಯೆನೋ ಚೀಮಣೆ, ಕಂದಿಲುಗಳ ಬದಲು ಮೇಣದಬತ್ತಿ ಹಚ್ಚುತ್ತೇವೆ. ಆದರೆ, ಚೀಮಣೆ ಎಣ್ಣೆ ಇಲ್ಲದೇ ಒಲೆ ಹೊತ್ತಿಸುವುದು ಕಷ್ಟ. ಸ್ಟೌಗಳು ಮೂಲೆ ಸೇರಿವೆ’ ಎನ್ನುತ್ತಾರೆ ದೇವರ ಹಿಪ್ಪರಗಿಯ ರೈತ ಸುಭಾಸ ಅವುಟಿ.

ಮಳೆಗಾಲದಲ್ಲಿ ಅಲ್ಲಲ್ಲಿ ಗಿಡಮರ ಊರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಹಾಗೂ ಬೇಸಿಗೆ ಕಾಲ ಬಂತೆಂದರೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ವಿದ್ಯುತ್ ಸಮಸ್ಯೆ ಮತ್ತು ವಿದ್ಯುತ್ ಕಡಿತದಿಂದ ಸೀಮೆ ಎಣ್ಣೆಯಿಂದ ಚಿಮಣಿ ಬಳಸುತ್ತಾರೆ. ಹೆಣ ಸುಡಲೂ, ಒಲೆ ಹೊತ್ತಿಸಲೂ ಸೀಮೆ ಎಣ್ಣೆ ಅತ್ಯವಶ್ಯವಾಗಿದೆ ಎನ್ನುತ್ತಾರೆ ಇಂಚಗೇರಿಯ ಬಸಮ್ಮ ಭೀಮನಗೌಡ ಪಾಟೀಲ.

ಬಡವರು ಎಲ್‌ಪಿಜಿ ಗ್ಯಾಸ್ ಬಳಸುವುದು ಕಷ್ಟ ಮತ್ತು ದುಬಾರಿಯಾಗುತ್ತದೆ. ಅಲ್ಲದೇ, ಸೀಮೆ ಎಣ್ಣೆ ಬಂದ್‌ ಆಗಿದ್ದರಿಂದ ಅಲ್ಲಲ್ಲಿ ಒಣಗಿ ಬಿದ್ದ ಕಟ್ಟಿಗೆಯನ್ನು ತಂದು ನಾವು ಈಗ ನಮ್ಮ ಮನೆಯಲ್ಲಿ ಕಟ್ಟಿಗೆಯ ಒಲೆ ಹೊತ್ತಿಸಲೂ ಪ್ರಾಸ್ಟಿಕ್ ಕಾಗದ ಬಳಸಿ ರೊಟ್ಟಿ, ಚಪಾತಿ, ನೀರು ಕಾಯಿಸಲೂ ಬಳಸುತ್ತೇವೆ. ಕೇಂದ್ರ ಸರ್ಕಾರವು ಗ್ಯಾಸ್‌ಗೆ ಸಬ್ಸಿಡಿ ಕಡಿತ ಮಾಡಿರುವುದರಿಂದ ಬಳಸಲೂ ದುಬಾರಿಯಾಗುತ್ತದೆ ಎನ್ನುತ್ತಾರೆ ಹೊರ್ತಿ ಸಮೀಪದ ಕನಕನಾಳ ಗ್ರಾಮದ ಪಾರ್ವತಿ ಕರಂಡೆ ಮತ್ತು ಇಂಚಗೇರಿಯ ಭ್ಯಾಗ್ಯಶ್ರೀ ಪಾಟೀಲ.

****

ಮೆಟಿಗಿ ವಸ್ತಿಗಳಿಗೆ ಬೇಕಿದೆ ಸೀಮೆಎಣ್ಣೆ

ಇಂಡಿ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಜ್ಯೋತಿ ಅಳವಡಿಸಿರುವುದರಿಂದ ಮತ್ತು ಗ್ಯಾಸ್ ಸೌಲಭ್ಯವಿರುವುದರಿಂದ ಸೀಮೆ ಎಣ್ಣೆ ಸ್ಥಗಿತಗೊಳಿಸಿದರೂ ಜನಸಾಮಾನ್ಯರಿಗೆ ಅಷ್ಟೋಂದು ತೊಂದರೆಯಾಗಿಲ್ಲ.

ಆದರೆ, ತಾಲ್ಲೂಕಿನ ಬುಹುತೇಕ ರೈತರು ತಮ್ಮ ಜಮೀನುಗಳಲ್ಲಿ (ಮೆಟಿಗಿ ವಸ್ತಿಗಳಲ್ಲಿ) ವಾಸವಾಗಿದ್ದಾರೆ.
ಮೆಟಿಗಿ ವಸ್ತಿಯಲ್ಲಿ ನಿರಂತರ ವಿದ್ಯತ್ ಸೌಲಭ್ಯವಿಲ್ಲ ಮತ್ತು ಗ್ಯಾಸ್ ಸೌಲಭ್ಯವೂ ಕೂಡಾ ಇಲ್ಲ. ಇಲ್ಲಿ 4 ಗಂಟೆಗಳ ಕಾಲ ಸಿಂಗಲ್ ಫೇಸ್, 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಆಗುತ್ತಿದೆ. ಇದು ಹೇಳಿಕೆಯಲ್ಲಿ ಮಾತ್ರ, ಇನ್ನೂ ಕೆಲವು ಗ್ರಾಮಗಳಲ್ಲಿ ಇಷ್ಟೂ ಕೂಡಾ ವಿದ್ಯುತ್ ಸೌಲಭ್ಯವಿಲ್ಲ. ಇಂತಹ ಮೆಟಿಗಿ ವಸ್ತಿ ರೈತರಿಗೆ ಸೀಮೆ ಎಣ್ಣೆಯ ಅವಶ್ಯಕತೆ ಇದೆ.

ರಾತ್ರಿ ವೇಳೆಯಲ್ಲಿಯೇ ಸುಮಾರು 7 ರಿಂದ 8 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಮೆಟಿಗಿ ವಸ್ತಿ ರೈತರಿಗೆ ಸೀಮೆ ಎಣ್ಣೆಯ ಅಗತ್ಯವಿದೆ. ಬೆಳಕಿಗಾಗಿ, ಒಲೆ ಉರಿಯುವುದಕ್ಕಾಗಿ, ಚಳಿಯಲ್ಲಿ ಮೈಕಾಸಿಕೊಳ್ಳಲು ಮುಂತಾದ ಕೆಲಸಗಳಿಗೆ ಸೀಮೆ ಎಣ್ಣೆಯ ಅಗತ್ಯವಿದ್ದು, ಸರ್ಕಾರ ಅದರ ಸರಬರಾಜು ಸ್ಥಗಿತಗೊಳಿಸಿದ್ದರಿಂದ ಅತೀವ ತೊಂದರೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಮೆಟಿಗಿ ವಸ್ತಿ ರೈತರು ಸೂರ್ಯ ಮುಳುಗುವದರೊಳಗಾಗಿ ರಾತ್ರಿ ಊಟ ಮುಗಿಸಬೇಕಾದ ಸ್ಥಿತಿಯಿದೆ.

ಸರ್ಕಾರ ಸೀಮೆ ಎಣ್ಣೆ ಸರಬರಾಜು ಸ್ಥಗಿತಗೊಳಿಸಿರುವದರಿಂದ ಅತೀವ ತೊಂದರೆಯಾಗಿದೆ. ಮೆಟಿಗಿ ವಸ್ತಿಯ ಜನತೆ ಕಗ್ಗತ್ತಿಲಿನಲ್ಲಿ ಜೀವನ ಸಾಗಿಸಬೇಕಿದೆ. ಅವರಿಗೆ ಸೀಮೆ ಎಣ್ಣೆಯ ಅಗತ್ಯವಿದೆ ಎನುತ್ತಾರೆಇಂಡಿ ರೈತಸಿದ್ದಪ್ಪ ಹತ್ತರಕಿಹಾಳ.

ಮೈಕೊರೆಯುವ ಚಳಿಯಲ್ಲಿ ಕೃಷಿ ಕೆಲಸದಲ್ಲಿದ್ದ ರೈತರಿಗೆ ವಿದ್ಯುತ್ ಇಲ್ಲದಿದ್ದಾಗ ಸೀಮೆ ಎಣ್ಣೆಯ ಅಗತ್ಯವಿದೆ. ಸರ್ಕಾರ ಸೀಮೆ ಎಣ್ಣೆ ವಿತರಣೆ ಪ್ರಾರಂಭಿಸಬೇಕು ಎನ್ನುತ್ತಾರೆಇಂಡಿರೈತ ಶೆಂಕ್ರೆಪ್ಪ ಮಾಶ್ಯಾಳಕರ.

***

ವಿಜಯಪುರ ಜಿಲ್ಲೆಯಲ್ಲಿ 1.2 ಲಕ್ಷ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಪೂರೈಸಲಾಗುತ್ತಿತ್ತು. ಒಂದೂವರೆ ವರ್ಷದಿಂದ ಸೀಮೆಎಣ್ಣೆ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳು ವಿದ್ಯುದ್ದೀಕರಣವಾಗಿರುವುದರಿಂದ ಸೀಮೆಎಣ್ಣೆಗೆ ಬೇಡಿಕೆ ಇಲ್ಲ. ಎಲ್ಲೋ ಒಂದಷ್ಟು ಜನ ಸೀಮೆಎಣ್ಣೆ ಕೇಳುತ್ತಿದ್ದಾರೆ

–ಸಿದ್ದರಾಮ ಮಾರಿಹಾಳ,ಉಪ ನಿರ್ದೇಶಕ,ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಮಹಾಂತೇಶ ನೂಲಿನವರ, ಅಮರನಾಥ ಹಿರೇಮಠ, ಎ.ಸಿ.ಪಾಟೀಲ, ಕೆ.ಎಸ್.ಈಸರಗೊಂಡ, ಪ್ರಕಾಶ ಮಸಬಿನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT