ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಕ್ಷಣಿಕ ಬಿಕ್ಕಟ್ಟಿಗೆ ಆನ್‌ಲೈನ್ ಪಾಠ ಪರಿಹಾರ’

ಕೆ-ಸೆಟ್ ಪರೀಕ್ಷೆಗೆ ಆನ್‍ಲೈನ್ ತರಬೇತಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ
Last Updated 3 ಜೂನ್ 2020, 14:58 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್-19 ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಆನ್‍ಲೈನ್ ಪಾಠಗಳ ಮೂಲಕ ಪರಿಹರಿಸಿಕೊಳ್ಳಲು ನಡೆಸಿರುವ ಪ್ರಯತ್ನಗಳು ಯಶಸ್ವಿಯಾಗುತ್ತಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆನ್‍ಲೈನ್ ಎಜುಕೇಷನ್ ರಿಸೋರ್ಸ್ ಸೆಂಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಕೋಚಿಂಗ್ ಅಕಾಡೆಮಿ ಜಂಟಿಯಾಗಿ ಕೆ-ಸೆಟ್-2020 ಪರೀಕ್ಷೆಗಾಗಿ ಸಿದ್ಧತೆ ಮಾಡುತ್ತಿರುವ ಅಭ್ಯರ್ಥಿಗಳಿಗಾಗಿ ಹಮ್ಮಿಕೊಂಡಿರುವ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಬುಧವಾರ ಆನ್‍ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ಆನ್‍ಲೈನ್ ತರಬೇತಿ ಕಾರ್ಯಕ್ರಮಕ್ಕೆ ಈಗಾಗಲೇ ರಾಜ್ಯದ 30 ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿರುವುದು ಸಂತೋಷದ ಸಂಗತಿ. ಎಲ್ಲರೂ ಈ ಆನ್‍ಲೈನ್ ಪಾಠಗಳನ್ನು ಸದುಪಯೋಗ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತಾಗಲಿ ಎಂದರು.

ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ನಡೆಸುವ ಕೆಸೆಟ್ ಪರೀಕ್ಷೆ ತರಬೇತಿಯನ್ನು ಕೈಬಿಡದೇ ಈ ವರ್ಷವೂ ಆನ್‍ಲೈನ್ ಮೂಲಕ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಮಾತನಾಡಿ, ವರ್ತಮಾನದ ಬಿಕ್ಕಟ್ಟುಗಳನ್ನು ಎದುರುಗೊಳ್ಳುವ ಹಲವು ದಾರಿಗಳಲ್ಲಿ ಆನ್‍ಲೈನ್ ಕ್ಲಾಸ್‌ಗಳು ಮತ್ತು ಆನ್‍ಲೈನ್ ಸೆಮಿನಾರ್‌ ಹಾಗೂ ತರಬೇತಿ ಕಾರ್ಯಾಗಾರಗಳು ಒಂದು ಬಗೆ. ಆನ್‍ಲೈನ್ ಶಿಕ್ಷಣದ ಪರಿಮಿತಿಗಳು ಏನೇ ಇದ್ದರೂ ಏಕಕಾಲದಲ್ಲಿ ರಾಜ್ಯದ 11 ಸಾವಿರಕ್ಕೂ ಅಧಿಕ ಸಂಖ್ಯೆಯ ಅಭ್ಯರ್ಥಿಗಳು ತರಬೇತಿಯ ಪ್ರಯೋಜನಕ್ಕೆ ಭಾಜನರಾಗುವುದು ದೊಡ್ಡ ವಿಷಯ ಎಂದರು.

‘ಒಂದು ಬಾಗಿಲು ಮುಚ್ಚಿತು ಎಂದು ಅಳುತ್ತಾ ಕೂತರೆ, ತೆರೆದಿರುವ ಇನ್ನೊಂದು ಬಾಗಿಲು ಅರಿವಿಗೆ ಬರುವುದಿಲ್ಲ’ ಎಂಬಮಾತಿನ ಅರ್ಥ ಸದ್ಯದ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿದೆ. ಅದೇ ರೀತಿಯಲ್ಲಿ ಎಂತಹ ಬಿಕ್ಕಟ್ಟುಗಳೂ ಮನುಷ್ಯರನ್ನು ಹೊಸ ಶೋಧಕ್ಕೆ, ಸಾಧ್ಯತೆಯ ಹುಡುಕಾಟಕ್ಕೆ ಹಚ್ಚುತ್ತವೆ. ಅದು ಶಿಕ್ಷಣ ರಂಗದಲ್ಲಿ ಕೂಡಾ ನಿಜವಾಗಿದೆ. ಹೀಗಾಗಿ ಆನ್‍ಲೈನ್ ಪಾಠಗಳಿಗೆ ಹೆಚ್ಚಿನ ಮಹತ್ವ ಬಂದಿದೆ’ ಎಂದರು.

ಆನ್‍ಲೈನ್ ಎಜುಕೇಷನ್ ರಿಸೋರ್ಸ್ ಸೆಂಟರ್‌ನ ನಿರ್ದೇಶಕ ಪ್ರೊ.ಓಂಕಾರ ಕಾಕಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಸ್ವಾಗತಿಸಿದರು. ತರಬೇತಿ ಕಾರ್ಯಕ್ರಮದ ಸಂಯೋಜಕ ಡಾ.ಪ್ರಕಾಶ ಬಡಿಗೇರ ವಂದಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT