ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ | ಇಲಾಖೆಗಳ ನಡುವೆ ಸಮನ್ವಯ ಕೊರತೆ: ಪಾಳು ಬಿದ್ದ ಶಾಲೆ

ಪುರಸಭೆ 1975 ರಲ್ಲಿ ಕಟ್ಟಿಸಿದ ಶಾಲೆಗೆ ಇಲ್ಲಿಯವರೆಗೂ ರಿಪೇರಿ ಇಲ್ಲ
Published 22 ಮೇ 2024, 6:06 IST
Last Updated 22 ಮೇ 2024, 6:06 IST
ಅಕ್ಷರ ಗಾತ್ರ

ಇಂಡಿ: ಪುರಸಭೆ ಮತ್ತು ಶಿಕ್ಷಣ ಇಲಾಖೆಗಳ ನಡುವಿನ ಕಲಹದಿಂದಾಗಿ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತದಲ್ಲಿರುವ ಮತ್ತು ಪುರಸಭೆಯ ಸಮೀಪವೇ ಇರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ– 1 ನಿರ್ವಹಣೆ ಮತ್ತು ಅಭಿವೃದ್ದಿ ಇಲ್ಲದೇ ಪಾಳು ಬಿದ್ದಿದೆ.

ಇಂಡಿ ಪುರಸಭೆಯು ಶಾಲೆಯ ಕಟ್ಟಡವನ್ನು 1975 ರಲ್ಲಿ ಕಟ್ಟಿಸಿತ್ತು. ಆಗಿನ ಪುರಸಭೆಯ ಅಧ್ಯಕ್ಷ ಅಣ್ಣಪ್ಪ ದೇವರ ಅವರು ಶಿಕ್ಷಣ ಇಲಾಖೆಗೆ ಬಾಡಿಗೆಗೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಶಿಕ್ಷಣ ಇಲಾಖೆ ಪ್ರತಿ ವರ್ಷ ₹ 32 ಸಾವಿರ ಬಾಡಿಗೆ ಪಾವತಿ ಮಾಡುತ್ತಿದೆ. ಆದರೆ ಅಂದಿನಿಂದ ಇಂದಿನವರೆಗೆ ಪುರಸಭೆಯವರು ಈ ಕಟ್ಟಡದ ರಿಪೇರಿ ಮಾಡಿಲ್ಲ. ಈ ಬಗ್ಗೆ ಸಾರ್ವಜನಿಕರು ಕೇಳಿದರೆ ನಾವು ಕಟ್ಟಡ ಕಟ್ಟಿ ಶಿಕ್ಷಣ ಇಲಾಖೆಗೆ ನೀಡಿದ್ದೇವೆ. ಅದರ ನಿರ್ವಹಣೆಯ ಜವಾಬ್ದಾರಿ ಶಿಕ್ಷಣ ಇಲಾಖೆಯದ್ದು ಎಂದು ಪುರಸಭೆಯ ಅಧಿಕಾರಿಗಳು ಉತ್ತರಿಸುತ್ತಾರೆ. ಶಿಕ್ಷಣ ಇಲಾಖೆಗೆ ಕೇಳಿದರೆ ಈ ಶಾಲೆಯ ಕಟ್ಟಡ ನಮ್ಮದಲ್ಲ. ಇದು ಪುರಸಭೆಯವರದ್ದು, ನಾವು ಇದನ್ನು ಬಾಡಿಗೆಗೆ ಪಡೆದುಕೊಂಡಿದ್ದೇವೆ. ಪ್ರತಿ ವರ್ಷ ಬಾಡಿಗೆ ಕಟ್ಟುತ್ತೇವೆ. ಇದರ ನಿರ್ವಹಣೆಯನ್ನು ಪುರಸಭೆಯೇ ಮಾಡಬೇಕು ಎಂದು ಹೇಳುತ್ತಿದೆ. ಇವರಿಬ್ಬರ ನಡುವಿನ ಕಲಹದಿಂದ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 270 ವಿದ್ಯಾರ್ಥಿಗಳಿಗೆ ಸೂಕ್ತ ಸೌಕರ್ಯ ದೊರೆಯದಂತಾಗಿದೆ.

ಈ ಶಾಲಾ ಕಟ್ಟಡದಲ್ಲಿ 16 ಕೊಠಡಿಗಳಿವೆ. ಇವುಗಳಲ್ಲಿ 12 ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಇವುಗಳಲ್ಲಿ ಕೆಲವು ಕೊಠಡಿಗಳ ಚಾವಣಿಯೇ ಬಿದ್ದಿದ್ದು, ಕೊಠಡಿಗಳ ಗೋಡೆಗಳು ಕೂಡ ಶಿಥಿಲಾವಸ್ಥೆಯಲ್ಲಿವೆ. ಶಾಲೆಯ ಒಳಗೆ ಹೋಗಲು ಮುಖ್ಯ ದ್ವಾರವಿದ್ದು, ಚಾವಣಿ ತುಂಡಾಗಿ ಬಿಳುವ ಭಯದಲ್ಲಿ ಆ ದ್ವಾರ ಬಂದ್‌ ಮಾಡಿ ಬೇರೆ ಬಾಗಿಲಿನಿಂದ ಮಕ್ಕಳು ಶಾಲೆಯ ಒಳಗೆ ಹೋಗುತ್ತಿದ್ದಾರೆ.
ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಇದ್ದು, 11 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಮೊದಲು ಇಲ್ಲಿ 500 ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2021-22 ರಲ್ಲಿ 312, 2022-23 ರಲ್ಲಿ 279 ವಿದ್ಯಾರ್ಥಿಗಳಿದ್ದರೆ, 2024ನೇ ಸಾಲಿನಲ್ಲಿ 230 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಆಟದ ಮೈದಾನವಿಲ್ಲ, ಕಾಂಪೌಂಡ್‌ ಗೋಡೆಯಿಲ್ಲ, ಗ್ರಂಥಾಲಯವಿಲ್ಲ, ಶೌಚಾಲಯವಿಲ್ಲ. ಮಕ್ಕಳಿಗೆ ಯಾವುದೇ ರೀತಿಯ ಅನುಕೂಲವಿಲ್ಲ.

ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತ ಬರುತ್ತಿವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಬಹುದೆಂದು ಪೋಷಕರು ಚಿಂತಿಸುತ್ತಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಬಡ ಪೋಷಕರು ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿ ಬಡ ಕುಟುಂಬದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಪಾಲಕರು ಮನವಿ ಮಾಡಿಕೊಂಡಿದ್ದಾರೆ.

ಈದೀಗ ಪುರಸಭೆಗೆ ಇಂಡಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಆಡಳಿತಾಧಿಕಾರಿಯಾಗಿದ್ದು, ಈ ಶಾಲೆಯ ಸಮಸ್ಯೆ ಬಗೆಹರಿಸಿ, ಬಡ ಮಕ್ಕಳು ಓದುತ್ತಿರುವ ಈ ಶಾಲೆಯನ್ನು ರಿಪೇರಿ ಮಾಡಿಸಿ, ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಿ ಜೀವ ತುಂಬುವರೇ ಎಂದು ಕಾದು ನೋಡಬೇಕಿದೆ.

ಇಂಡಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಚಾವಣಿ ಉದುರಿ ಬಿದ್ದಿರುವುದು 
ಇಂಡಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್‌ ವೃತ್ತದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಚಾವಣಿ ಉದುರಿ ಬಿದ್ದಿರುವುದು 
ಈ ಶಾಲಾ ಕಟ್ಟಡ ಪುರಸಭೆ ಅಧೀನದಲ್ಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಈ ಕಟ್ಟಡ ದುರಸ್ತಿಗೆ ಹಣ ನೀಡಲು ಅವಕಾಶಗಳಿಲ್ಲ. ರಿಪೇರಿಗಾಗಿ ಪುರಸಭೆಗೆ ಪತ್ರ ಬರೆಯಲಾಗಿದೆ.
–ಎಸ್.ಬಿ. ಪಾಟೀಲ ಇಂಡಿ ಶಿಕ್ಷಣ ಇಲಾಖೆಯ ಇಸಿಒ
ಶಾಲೆಯ ದುಸ್ಥಿತಿ ಬಗ್ಗೆ ಗಮನಕ್ಕೆ ಬಂದಿದೆ. ಅದರ ರಿಪೇರಿಗಾಗಿ ಪುರಸಭೆಯಿಂದ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ.
–ಅಬೀದ್ ಗದ್ಯಾಳ ಪುರಸಭೆಯ ಆಡಳಿತಾಧಿಕಾರಿ ಮತ್ತು ಎಸಿ
ಇಂಡಿ ಪಟ್ಟಣದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ದುರಸ್ತಿಗೆ ಕ್ರಮ ಜರುಗಿಸಲಾಗುವುದು.
–ಮಹಾಂತೇಶ ಹಂಗರಗಿ ಪುರಸಭೆಯ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT