ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಬಿಸಿಲನಾಡಲ್ಲಿ ಮಲೆನಾಡ ಅಡಿಕೆ ಬೆಳೆದ ರೈತ

ಗರಸಂಗಿ ಗ್ರಾಮದ ಪ್ರಗತಿಪರ ರೈತ ಎಂ.ಕೆ.ಗಂಗಲ ಯಶೋಗಾಥೆ
ಕೆ.ಎಸ್.ಬಾಲಗೊಂಡ
Published 23 ಆಗಸ್ಟ್ 2024, 4:38 IST
Last Updated 23 ಆಗಸ್ಟ್ 2024, 4:38 IST
ಅಕ್ಷರ ಗಾತ್ರ

ಕೊಲ್ಹಾರ: ತಾಲ್ಲೂಕಿನ ಗರಸಂಗಿ ಗ್ರಾಮದ ಪ್ರಗತಿಪರ ರೈತ, ಪೊಲೀಸ್‌ ಅಧಿಕಾರಿ ಎಂ.ಕೆ.ಗಂಗಲ ಅವರು ನಾಲ್ಕು ಎಕರೆ ಅಡಿಕೆ ತೋಟ ಬೆಳೆಸುವ ಮೂಲಕ ಬಿಸಿಲನಾಡಲ್ಲೂ ಕರಾವಳಿ, ಮಲೆನಾಡ ಅಡಿಕೆ ಬೆಳೆಯಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ರೈತ ಕುಟುಂಬದಿಂದ ಬಂದಿರುವ ಗಂಗಲ ಅವರು ತಮ್ಮ ಪೊಲೀಸ್‌ ಕರ್ತವ್ಯದ ಜೊತೆಗೆ ರಜೆ ಅವಧಿಯಲ್ಲಿ ತೋಟಕ್ಕೆ ಬಂದು, ಕೆಲಸಗಾರರಿಗೆ ಮಾರ್ಗದರ್ಶನ ನೀಡಿ, ಅಡಿಕೆ ತೋಟವನ್ನು ಸಮೃದ್ಧವಾಗಿ ಬೆಳೆಸಿ, ಮಲೆನಾಡನ್ನು ಸೃಷ್ಟಿಸಿದ್ದಾರೆ.

ಒಟ್ಟು 22 ಎಕರೆ ಜಮೀನಿನಲ್ಲಿ 4 ಎಕರೆದಲ್ಲಿ 2000 ಅಡಿಕೆ ಸಸಿಗಳು, ಸಾಗವಾನಿ, ಮಾವು, ಹಲಸು, ಗಾಳಿಮರ, ಸೀತಾಫಲ ಹೀಗೆ ಬಗೆಬಗೆಯ ಗಿಡಮರಗಳನ್ನು ಬದುವಿನಲ್ಲಿ ಬೆಳೆದಿದ್ದಾರೆ. 18 ಎಕರೆ ಜಮೀನಿನಲ್ಲಿ ಕಬ್ಬು, ಮೆಕ್ಕೆಜೋಳ ಬೆಳೆಯುತ್ತಿದ್ದಾರೆ.

20 ವರ್ಷಗಳ ಹಿಂದೆ ನಮ್ಮ ಮಾವನವರಾದ ಎಸ್.ಎಲ್.ಪಾಟೀಲ ಅವರು ಚನ್ನಗಿರಿಯಿಂದ ಅಡಿಕೆ ಸಸಿಗಳನ್ನು ತರಿಸಿ ನಾಟಿ ಮಾಡಿ ತೋಟ ಮಾಡಿದ್ದರು. ಬಳಿಕ ನಾನು ಅವುಗಳ ಕೃಷಿಯನ್ನು ಮುಂದುವರಿಸಿದೆ ಎಂದು ಗಂಗಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯಪುರ ಜಿಲ್ಲೆಯ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚು ಇದ್ದರೂ ಈ ವಾತಾವರಣ ಅಡಿಕೆ ಕೃಷಿಗೆ ಯೋಗ್ಯವಾಗಿದೆ. ಉತ್ತಮ ನೀರು, ಕೃಷಿ ಮಾಡಿದರೆ ಎಕರೆಗೆ 4 ರಿಂದ 5 ಕ್ವಿಂಟಲ್ ಅಡಿಕೆ ಇಳುವರಿ ಬರುತ್ತದೆ’ ಎಂದು ಹೇಳಿದರು.

ನಮ್ಮಲ್ಲಿ ಅಡಿಕೆ ಮಾರುಕಟ್ಟೆ ಇಲ್ಲ. ಹೀಗಾಗಿ ನಾನು ಚನ್ನಗಿರಿ ಮಾರುಕಟ್ಟೆಗೆ ಅಡಿಕೆ ಕಳಿಸಿದೆ. ಅಲ್ಲಿ ಒಂದು ಕ್ವಿಂಟಲ್ ಗೆ ₹ 53 ಸಾವಿರಕ್ಕೆ ಮಾರಾಟವಾಗಿ ವಾರ್ಷಿಕ ₹ 10 ಲಕ್ಷದಿಂದ ₹ 11 ಲಕ್ಷ ಆದಾಯ ಪಡೆಯುತ್ತಿರುವೆ ಎಂದರು.

ಕೊಲ್ಹಾರ ತಾಲ್ಲೂಕಿನ ಗರಸಂಗಿ ಗ್ರಾಮದಲ್ಲಿರುವ  ಎಂ.ಕೆ.ಗಂಗಲ ಅವರ ಅಡಿಕೆ ತೋಟ 
ಕೊಲ್ಹಾರ ತಾಲ್ಲೂಕಿನ ಗರಸಂಗಿ ಗ್ರಾಮದಲ್ಲಿರುವ  ಎಂ.ಕೆ.ಗಂಗಲ ಅವರ ಅಡಿಕೆ ತೋಟ 

ಅಡಿಕೆ ಕೃಷಿ ವಿಧಾನ

ಸಸಿಯಿಂದ ಸಸಿಗೆ 9 ಅಡಿ ಅಂತರದಲ್ಲಿ ನೆಟ್ಟರೆ ಒಂದು ಎಕರೆ ಜಮೀನಿನಲ್ಲಿ 500 ಸಸಿಗಳನ್ನು ನಾಟಿ ಮಾಡಬಹುದು. ಪ್ರತಿ ಸಸಿಗೆ ಒಂದು ಲೀಟರ್ ಜೀವಾಮೃತ ಹಾಗೂ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರ ಹಾಕಬೇಕು. ಕಳೆಗಳ ನಿರ್ವಹಣೆ ಜೊತೆ ಸಸಿಗಳ ಮಧ್ಯದಲ್ಲಿ ರೂಟರ್ ಆಡಿಸಬೇಕು. ಹನಿನೀರಾವರಿ ಘಟಕ ಬೇಕು ಎಂದು ತಿಳಿಸಿದರು. ನನಗೆ ಸಾವಯವ ಕೃಷಿ ಮಾಡಿ ಅಡಿಕೆ ಬೆಳೆಯಲು ಆಸಕ್ತಿ ಜೊತೆಗೆ ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಕೃಷಿ ಅಳವಡಿಸಿ ಕೊಂಡಿರುವೆ. ನಾವೇ ಸ್ವತಹ ಜೀವಾಮೃತ ತಯಾರಿಸಿಕೊಳ್ಳುತ್ತೇವೆ ಎಂದರು. ಹೊಲದಲ್ಲಿ 4 ಕೊಳವೆಬಾವಿ 2 ತೆರದ ಬಾವಿ ಹಾಗೂ ಕಾಲುವೆಗಳಿಂದ ನೀರನು ಪಡೆದು ಹನಿ ನೀರಾವರಿ ಘಟಕ ಮಾಡಿಕೊಳ್ಳಲಾಗಿದೆ. ಹೀಗಾಗಿ ಬೇಸಿಗೆಯಲ್ಲೂ ನೀರಿಗೆ ಕೊರತೆ ಇಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT