ಪುಲ್ವಾಮಾದಲ್ಲಿ ಕಾರ್ಯಾಚರಣೆ: ಉಕ್ಕಲಿ ಯೋಧ ಕಾಶಿರಾಯ ಹುತಾತ್ಮ

ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಶಂಕರಪ್ಪ ಬೊಮ್ಮನಹಳ್ಳಿ(44) ಶುಕ್ರವಾರ ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಕಾಶಿರಾಯ ಅವರು 2005 ರಲ್ಲಿ ಭಾರತೀಯ ಸೇನೆ ಸೇರಿದ್ದರು. ಕಾಶ್ಮೀರ, ಪಂಜಾಬ್ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಪತ್ನಿ, ಪುತ್ರ, ಪುತ್ರಿ, ತಂದೆ, ತಾಯಿ, ಇಬ್ಬರು ಸಹೋದರರು ಇದ್ದಾರೆ.
ಹುತಾತ್ಮ ಯೋಧರ ಪಾರ್ಥಿವ ಶರೀರವು ಜು.3 ರಂದು ಬೆಳಿಗ್ಗೆ ಬೆಳಗಾವಿಗೆ ವಾಯುಪಡೆ ವಿಮಾನದ ಮೂಲಕ ಬರಲಿದೆ. ನಂತರ ಉಕ್ಕಲಿ ಗ್ರಾಮಕ್ಕೆ ಬರುತ್ತದೆ ಎಂದು ತಹಶೀಲ್ದಾರ್ ಎಂ.ಎನ್.ಬಳಿಗಾರ ಮಾಹಿತಿ ನೀಡಿದರು.
‘ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಕಾಶಿರಾಯ ಅವರ ಅಂತ್ಯ ಸಂಸ್ಕಾರ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ
‘ನಮ್ಮ ಬೊಮ್ಮನಹಳ್ಳಿ ಮನೆತನದಲ್ಲಿ ಇವನೊಬ್ಬ ಸೇನೆಗೆ ಸೇರಿದ್ದು ನಮಗೆಲ್ಲ ಹೆಮ್ಮೆಯಾಗಿತ್ತು. ಜು.7 ರಂದು ರಜೆ ಮೇಲೆ ಗ್ರಾಮಕ್ಕೆ ಬರುವವನಿದ್ದನು. ಈಗ ಹುತಾತ್ಮನಾಗಿರುವುದು ನಮಗೆ ತುಂಬಾ ದುಃಖವಾಗಿದೆ’ ಎಂದು ಹುತಾತ್ಮ ಯೋಧನ ಚಿಕ್ಕಪ್ಪ ನಿಂಗಪ್ಪ ಬೊಮ್ಮನಹಳ್ಳಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.