ಶನಿವಾರ, ಜನವರಿ 22, 2022
16 °C
ತಾಕತ್ ಇದ್ದರೆ ಮುತಾಲಿಕ್ ತಡೆಯಲಿ: ಜಿತೇಂದ್ರ ಕಾಂಬಳೆ ಸವಾಲು

ವಿಜಯಪುರ: ಬೌದ್ಧ ಧರ್ಮಕ್ಕೆ ಸಾಮೂಹಿಕ ಮತಾಂತರ ಡಿ.6ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡಿ.6 ರಂದು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರವಾಗುತ್ತೇವೆ. ವಿಜಯಪುರದಲ್ಲಿಯೇ ಸುಮಾರು 100 ಜನ ಬೌದ್ಧ ಧರ್ಮ ಸ್ವೀಕರಿಸಲಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಜಿತೇಂದ್ರ ಕಾಂಬಳೆ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಾಂತರ ಮಾಡುವವರಿಗೆ ಒದೆಯುವುದಾಗಿ ಹೇಳಿರುವ ಪ್ರಮೋದ್‌ ಮುತಾಲಿಕ್‌ಗೆ ತಾಕತ್ ಇದ್ದರೆ ಬಂದು ತಡೆಯಲಿ ಎಂದು ಸವಾಲು ಹಾಕಿದರು. 

ಧರ್ಮ ಬದಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ. ಆದರೆ, ಮುತಾಲಿಕ ಸಮಾಜಘಾತುಕ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.

ಯಾವ ಧರ್ಮ ನಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಗೌರವಿಸುತ್ತೋ ಆ ಧರ್ಮವನ್ನು ಯಾರು ಬೇಕಾದರು ಅನುಸರಿಸಬಹುದು. ಮತ್ತೊಬ್ಬರ ಹಕ್ಕು ಕಿತ್ತುಕೊಳ್ಳಲು ಮುತಾಲಿಕ್ ಯಾರು? ದೇಶದ ಸಂವಿಧಾನ 130 ಕೋಟಿ ಜನರ ಧರ್ಮಗ್ರಂಥವಿದ್ದಂತೆ ಅದನ್ನೇ ದಿಕ್ಕರಿಸಿ ಜಾತಿ, ಮತ ಪಂಥದ ಹೆಸರಿನಲ್ಲಿ ಸಮಾಜಘಾತುಕ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಪ್ರಮೋದ ಮುತಾಲಿಕ್ ಅವರನ್ನು ಸರ್ಕಾರ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಯೊಬ್ಬ ಭಾರತೀಯ ತನಗೆ ಬೇಕಾದ ಧರ್ಮವನ್ನು ಸ್ವೀಕರಿಸುವ ಹಕ್ಕನ್ನು ಹೊಂದಿದ್ದಾನೆ ಎಂದು ಡಾ.ಬಿ.ಆರ್‌. ಅಂಬೇಡ್ಕರ್ ಅವರು  ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅದರಂತೆ 1956 ರಲ್ಲಿ ಸ್ವತಃ ಡಾ.ಅಂಬೇಡ್ಕರ್ ಅವರೇ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದರು.

‘ಸಾಕಷ್ಟು ಅಧ್ಯಯನ ಮಾಡಿಯೇ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಮರುಜನ್ಮ ಪಡೆದಿದ್ದೇನೆ. ಯಾವ ಧರ್ಮದಲ್ಲಿ ನನಗೆ ಹಾಗೂ ನನ್ನ ಸಮುದಾಯಕ್ಕೆ ಗೌರವವಿಲ್ಲವೋ ಆ ಧರ್ಮವನ್ನು ನಾನು ದಿಕ್ಕರಿಸುತ್ತೇನೆ’ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದರು.

ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಕಾಂಗ್ರೆಸ್ ಬಗಲಲ್ಲಿ ಚೂರಿ ಇಟ್ಟುಕೊಂಡು ದಲಿತರನ್ನು ಮೋಸ ಮಾಡುತ್ತಾ ಬಂದಿದೆ. ಆರ್.ಎಸ್.ಎಸ್. ಬೆಳೆಯಲು ಮೂಲ ಕಾರಣ ಕಾಂಗ್ರೆಸ್ ಪಕ್ಷವೇ ಆಗಿದೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಸಂಗಪ್ಪ ಪಡಗಾರ, ಗೋವಿಂದ ದೊಡಮನಿ, ಸಂಜು ಕಂಬಾಗಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು