ಸೋಮವಾರ, ಅಕ್ಟೋಬರ್ 18, 2021
23 °C
ವಿಜಯಪುರದಲ್ಲಿ ಐದು ದಶಕಗಳಿಂದ ದೇವಿ ಪ್ರತಿಷ್ಠಾಪನೆ

ವಿಜಯಪುರ: ದಸರಾ ‘ಆದಿಶಕ್ತಿ’ ಆರಾಧನೆಗೆ ಮಠಪತಿಗಲ್ಲಿ ಸಜ್ಜು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಐತಿಹಾಸಿ ‘ಗುಮ್ಮಟನಗರಿ’ಯ ಮಠಪತಿ ಗಲ್ಲಿಯಲ್ಲಿ ಆದಿಶಕ್ತಿ ತರುಣ ಸಂಘ ಐದು ದಶಕಗಳಿಂದ ‘ಆದಿಶಕ್ತಿ’ಯನ್ನು ಭಕ್ತಿ, ಸಂಭ್ರಮದಿಂದ ಆರಾಧಿಸುವ ಮೂಲಕ ದಸರಾ ಮಹೋತ್ಸವವನ್ನು ಅರ್ಥಪೂರ್ಣಗೊಳಿಸಿದೆ. ಅಂತೆಯೇ, ಈ ವರ್ಷವೂ ಅ.7ರಿಂದ 15ರ ವರೆಗೆ ಆದಿಶಕ್ತಿ ಪ್ರತಿಷ್ಠಾಪನೆಗೆ ಭವ್ಯ ವೇದಿಕೆ ಸಜ್ಜುಗೊಂಡಿದೆ.

ಒಂಬತ್ತು ದಿನಗಳ ಕಾಲ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಬಗೆಬಗೆಯ ಆಲಂಕಾರ ಮಾಡಿ ಪೂಜಿಸಲಾಗುತ್ತದೆ. ಜೊತೆಗೆ ಮುತ್ತೈದೆಯರಿಗೆ ಮತ್ತು ಬಾಲಮುತ್ತೈದೆಯರಿಗೆ ಉಡಿ ತುಂಬುವ, ಪ್ರಸಾದ ವಿತರಣೆ, ಮಕ್ಕಳಿಗೆ ಅಕ್ಷರಾಭ್ಯಾಸ, ಕುಂಕುಮಾರ್ಚನೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.

ಭಕ್ತರು ಬೇಡಿದ ವರಗಳನ್ನು ಕರುಣಿಸುವ ಮೂಲಕ ಕರುಣಾಮಯಿ ಎಂಬ ಖ್ಯಾತಿಗೆ ಆದಿಶಕ್ತಿ ಪಾತ್ರಳಾಗಿದ್ದಾಳೆ. ಹೀಗಾಗಿಯೇ ಭಕ್ತರು ತಮ್ಮ ಕೈಲಾದ ಧನ, ಕನಕವನ್ನು ದೇವಿಗೆ ಪ್ರತಿ ವರ್ಷ ಸಮರ್ಪಿಸುತ್ತಿದ್ದಾರೆ.

ಆಕರ್ಷಕ ಉತ್ಸವ ಮೂರ್ತಿ: ಕೊಲ್ಹಾಪುರದಿಂದ 1972ರಲ್ಲಿ ಪಿಒಪಿಯಿಂದ ಮಾಡಿಸಿಕೊಂಡು ತಂದಿರುವ 6.5 ಅಡಿ ಎತ್ತರದ ದೇವಿಯ ಆಕರ್ಷಕ ಸುವರ್ಣ ಉತ್ಸವ ಮೂರ್ತಿಯನ್ನೇ ಇಂದಿಗೂ  ಪೂಜಿಸಲಾಗುತ್ತಿದೆ. ದೇವಿ ಮೂರ್ತಿಗೆ ಅಂದು ಹಚ್ಚಿರುವ ಬಣ್ಣ ಇಂದಿಗೂ ಮಾಸದೇ ಇರುವುದು ವಿಶೇಷ ಎನ್ನುತ್ತಾರೆ ಆದಿಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಬಿಜ್ಜರಗಿ.

1963ರಲ್ಲಿ ಮಠಪತಿ ಗಲ್ಲಿಯ ನಿವಾಸಿಗಳಾದ ನರಸಿಂಹ ಜಾದವ್‌, ಪಾರ್ಶ್ವನಾಥ ಕೇಶಿ, ಸಿದ್ದಪ್ಪ ಅಳಗುಂಡಗಿ, ಸಿದ್ರಾಮಪ್ಪ ಮದಭಾವಿ ಮತ್ತು ಲಕ್ಷ್ಮಣ ಶಿವಪ್ಪ ಸಜ್ಜನ ಅವರು ಆದಿಶಕ್ತಿ ತರುಣ ಸಂಘ ಸ್ಥಾಪಿಸಿದರು. ಆರಂಭದಲ್ಲಿ ಕಾಗದದ ರಟ್ಟಿನ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು. ಇಂದು ತರುಣ ಸಂಘ ಹೆಮ್ಮರವಾಗಿ ಬೆಳೆದೆ. ದೇವಿಗಾಗಿ ಶಾಶ್ವತ ಗುಡಿ ಕಟ್ಟಲಾಗಿದೆ. ಜೊತೆಗೆ ಸಮುದಾಯ ಭವನ ನಿರ್ಮಿಸಲಾಗಿ್ರ. ಇದಕ್ಕೆಲ್ಲ ದೇವಿಯ ಆಶೀರ್ವಾದವೇ ಕಾರಣ ಎನ್ನುತ್ತಾರೆ ಅವರು.

ಗುಡಿ ನಿರ್ಮಾಣ: 2016ರಲ್ಲಿ ಅರಭಾವಿಯ ಕೆಂಪು ಕಲ್ಲು ತಂದು ಆಕರ್ಷಕ ಗುಡಿಯನ್ನು ಗಲ್ಲಿಯಲ್ಲಿ ನಿರ್ಮಿಸಿ, ಅದರಲ್ಲಿ ಕಾರ್ಕಳದ ಕೃಷ್ಣ ಶಿಲೆಯಲ್ಲಿ ತಯಾರಾಗಿರುವ ಆದಿಶಕ್ತಿ ಮೂರ್ತಿಯನ್ನು ತಂದು, ಭಕ್ತರ ಕಾಯಂ ದರ್ಶನಕ್ಕೆ ಅನುಕೂಲವಾಗುವಂತೆ ಪ್ರತಿಷ್ಠಾಪಿಸಲಾಗಿದೆ ಎನ್ನುತ್ತಾರೆ ಶ್ರೀ ಆದಿಶಕ್ತಿ ತರುಣ ಸಂಘದ ಅಧ್ಯಕ್ಷ ಸಂಗನ ಬಸಪ್ಪ ಸಜ್ಜನ ಹಾಗೂ ನಿರ್ದೇಶಕರಾದ ಸಿದ್ರಾಮಪ್ಪ ದುಬಲಗುಂಡಿ, ಎಂ.ಐ.ಕುಟಗಿ ಮತ್ತು ಕಾರ್ಯದರ್ಶಿ ಬಸವರಾಜ ಮಧಬಾವಿ.

ಗುರುಬಸಯ್ಯ ಹಿರೇಮಠ ಅವರು ಪಿಒಪಿ ಮೂರ್ತಿಯನ್ನು 35 ವರ್ಷಗಳಿಂದ ಪೂಜಿಸುತ್ತಾ ಬಂದಿದ್ದಾರೆ. ಅದೇ ರೀತಿ ಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಶಿಲೆಯ ಮೂರ್ತಿಯನ್ನು ಮುರುಗಯ್ಯ ಗಚ್ಚಿನಮಠ ಅವರು ಪ್ರತಿ ದಿನ ಪೂಜಿಸುತ್ತಾ ಬರುತ್ತಿದ್ದಾರೆ.

ಆಕರ್ಷಕ ಡೆಕೋರೇಷನ್‌: ಪ್ರತಿ ವರ್ಷ ದಸರಾ ಆಚರಣೆ ವೇಳೆ ಒಂದೊಂದು ಬಗೆಯ ಮಂಟಪ(ಡೆಕೋರೇಷನ್‌) ನಿರ್ಮಿಸಲಾಗುತ್ತದೆ. ಈ ಹಿಂದಿನ ವರ್ಷಗಳಲ್ಲಿ ಅಕ್ಷರಧಾಮ, ಸೋಮನಾಥ ದೇವಾಲಯ, ಶ್ರೀಕೃಷ್ಣ ದಶಾವತಾರ, ಫಂಡರಾಪುರ ದಿಂಡಿಯಾತ್ರೆ, ನರಸಿಂಹ ಅವತಾರ, ಚಂದ್ರಯಾನ, ವಟಸಾವಿತ್ರಿ ಆರಾಧನೆಯ ಮಂಟಪಗಳನ್ನು ನಿರ್ಮಿಸಿಸಲಾಗಿತ್ತು. ಈ ವರ್ಷ ತಮಿಳುನಾಡಿನ ವೆಲ್ಲೂರು ಸ್ವರ್ಣ ಮಂದಿರ ಮಾದರಿಯನ್ನು ಪೈಬರ್‌ನಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ ತರುಣ ಸಂಘದ ಪ್ರಮುಖ ಸನ್ನಿ ಗವಿಮಠ.

ಪ್ರತಿ ವರ್ಷ ರೂ 10 ಲಕ್ಷದಿಂದ ರೂ 15 ಲಕ್ಷ ಖರ್ಚು ಮಾಡಿ ಡೆಕೋರೇಷನ್‌ ಮಾಡಲಾಗುತ್ತದೆ. ರಾಜ್ಯದ ಬೇರೆಲ್ಲೂ ಕಾಣದ ಡೆಕೋರೇಷನ್‌ ಅನ್ನು ವಿಜಯಪುರದಲ್ಲಿ ಕಾಣಬಹುದಾಗಿದೆ. ಇದನ್ನು ನೋಡಲೆಂದೇ ಪ್ರತಿದಿನ ಸಾವಿರಾರು ಜನರು ದಸರಾ ವೇಳೆ ಮಠಪತಿ ಗಲ್ಲಿಗೆ ಭೇಟಿ ನೀಡುತ್ತಾರೆ ಎನ್ನುತ್ತಾರೆ ಅವರು.

ಮಠಪತಿಗಲ್ಲಿ ದಸರಾ ಮಹೋತ್ಸವ ಕೇವಲ ಗಲ್ಲಿಗೆ ಸೀಮಿತವಾಗದೇ ಇಡೀ ನಗರ, ಜಿಲ್ಲೆ, ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿ ಗಳಿಸಿದೆ. ಅಷ್ಟೇ ಅಲ್ಲ, ಹಿಂದೂ, ಮುಸ್ಲಿಮರು ಈ ದೇವಿಯ ಭಕ್ತರಾಗಿದ್ದಾರೆ.

- ರವೀಂದ್ರ ಬಿಜ್ಜರಗಿ, ಅಧ್ಯಕ್ಷ, ಆದಿಶಕ್ತಿ ಉತ್ಸವ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.