ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ‘ಮಿಷನ್‌ ವಿದ್ಯಾಪುರ’

ವಿಜಯಪುರ ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಪರಿಕಲ್ಪನೆ
Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಜಿಲ್ಲೆಯ ವಿವಿಧ ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಹಾಗೂ ಉತ್ತಮ ಫಲಿತಾಂಶಕ್ಕಾಗಿ ‘ಮಿಷನ್‌ ವಿದ್ಯಾಪುರ’ ಎಂಬ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ರಾಹುಲ್‌ ಶಿಂಧೆ ಅವರು ರೂಪಿಸಿರುವ ‘ಮಿಷನ್‌ ವಿದ್ಯಾಪುರ’ ಅಥವಾ ‘ಚೇತನ ಸಂಜೆ’ ಯೋಜನೆಯಡಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಪ‍್ರತಿ ದಿನ ಸಂಜೆ ಒಂದು ಗಂಟೆ ವಿಷಯತಜ್ಞರಿಂದಆನ್‌ಲೈನ್‌ ಮೂಲಕ ಪಾಠ ಹೇಳಿಕೊಡಲಾಗುತ್ತದೆ.

ಸೋಮವಾರ, ಮಂಗಳವಾರ ಮತ್ತು ಬುಧವಾರದಂದು 9ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಗುರುವಾರ, ಶುಕ್ರವಾರ ಮತ್ತು ಶನಿವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಆಯ್ದ 25 ಶಿಕ್ಷಕರು ಪಾಠ ಮಾಡುತ್ತಾರೆ. ಈ ಯೋಜನೆ ಅನುಷ್ಠಾನದಲ್ಲಿ ಅಗಸ್ತ್ಯ ಫೌಂಡೇಷನ್‌ ಕೂಡ ಕೈಜೋಡಿಸಿದೆ.

ಸದ್ಯ ಜಿಲ್ಲೆಯ 16 ಹಾಸ್ಟೆಲ್‌ಗಳಲ್ಲಿ ಒಂದೂವರೆ ತಿಂಗಳಿಂದ ಪ್ರಾಯೋಗಿಕವಾಗಿ ‘ಮಿಷನ್‌ ವಿದ್ಯಾಪುರ’ ಯೋಜನೆ ಜಾರಿಯಲ್ಲಿದೆ. ಸುಮಾರು 400 ವಿದ್ಯಾರ್ಥಿಗಳು ಈ ಆನ್‌ಲೈನ್‌ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಆಯಾ ಹಾಸ್ಟೆಲ್‌ ವಾರ್ಡನ್‌ಗಳ ಮೇಲ್ವಿಚಾರಣೆಯಲ್ಲಿ ‘ಮಿಷನ್‌ ವಿದ್ಯಾಪುರ’ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲಾಗಿದೆ.ಪ್ರತಿ ಹಾಸ್ಟೆಲ್‌ನಲ್ಲಿ ಬೃಹತ್‌ ಎಲ್‌ಇಡಿ ಪರದೆ, ಸ್ಮಾರ್ಟ್‌ ಕ್ಲಾಸ್‌ ಬೋರ್ಡ್‌ ವ್ಯವಸ್ಥೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗೆ ಹಾಜರಾಗುವಂತೆ ಕ್ರಮಕೈಗೊಳ್ಳಲಾಗಿದೆ. ಹಾಸ್ಟೆಲ್‌ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರಗಿನ ವಿದ್ಯಾರ್ಥಿಗಳು ಈ ವಿಶೇಷ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ, ಸದ್ಯ ಪ್ರಾಯೋಗಿಕವಾಗಿ ‘ಮಿಷನ್‌ ವಿದ್ಯಾಪುರ’ ಜಾರಿಗೆ ತರಲಾಗಿದೆ. ಆಗಸ್ಟ್‌ 15ರಿಂದ ಜಿಲ್ಲೆಯ ಎಲ್ಲ 107 ಹಾಸ್ಟೆಲ್‌ಗಳಲ್ಲೂ ಈ ಯೋಜನೆ ಜಾರಿಗೆ ಕ್ರಮಕೈಗೊಳ್ಳಲಾಗಿದೆ. ಆಗ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ದೊರೆಯಲಿದೆ’ ಎಂದರು.

ಶಿಕ್ಷಕರಿಗೆ ಗೌರವ ಧನವನ್ನು ಜಿಲ್ಲಾ ಪಂಚಾಯ್ತಿಯಿಂದ ನೀಡಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಅಗತ್ಯ ಹಣಕಾಸಿನ ನೆರವನ್ನು ಜಿಲ್ಲೆಯ ಶಾಸಕರು ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನಗರ ಪ್ರದೇಶದ ಮಕ್ಕಳು ಶಾಲೆಯ ಬಳಿಕ ಟ್ಯೂಷನ್‌ಗಳಿಗೆ ಹೋಗುತ್ತಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಈ ಸೌಲಭ್ಯ ಇರುವುದಿಲ್ಲ. ಹೀಗಾಗಿ ಹಾಸ್ಟೆಲ್‌ಗಳಲ್ಲಿ ಇರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಟ್ಯೂಷನ್‌ ಬದಲಿಗೆ ವಿಶೇಷ ತರಗತಿ ವ್ಯವಸ್ಥೆ ಮಾಡಲಾಗಿದೆ. ಇದು ಕೇವಲ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಆಸಕ್ತ ಹಾಸ್ಟೆಲ್‌ಯೇತರ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಮುಕ್ತ ಅವಕಾಶ ಇದೆ ಎಂದರು.

ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಭದ್ರ ಬುನಾದಿ ಹಾಕಬೇಕು ಹಾಗೂ ಉತ್ತಮ ಫಲಿತಾಂಶ ಬರಬೇಕು, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ‘ಮಿಷನ್‌ ವಿದ್ಯಾಪುರ’ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಮೂರು ಜನ ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

***

‘ಮಿಷನ್‌ ವಿದ್ಯಾಪುರ’ ಯೋಜನೆ ಕೇವಲ ಪಠ್ಯಪುಸ್ತಕದ ಪಾಠಕ್ಕೆ ಸೀಮಿತವಾಗದೇ ಮುಂದಿನ ದಿನಗಳಲ್ಲಿ ಕ್ವಿಜ್‌, ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ನಿರ್ಮಾಣದ ಬಗ್ಗೆಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶವಿದೆ.
–ರಾಹುಲ್‌ ಶಿಂಧೆ, ಸಿಇಒ, ಜಿಲ್ಲಾ ಪಂಚಾಯ್ತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT