ಮಂಗಳವಾರ, ಮೇ 24, 2022
25 °C

ಪರಿಷತ್‌ ಚುನಾವಣೆ: ಬಿರಾದಾರ ಅಸಮಾದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಧಾನ ಪರಿಷತ್‌ ವಾಯವ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಕ್ಕೆ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷವು ಬೆಳಗಾವಿ ಜಿಲ್ಲೆಯ ಇಬ್ಬರಿಗೆ ಟಿಕೆಟ್‌ ನೀಡುವ ಮೂಲಕ ವಿಜಯಪುರ, ಬಾಗಲಕೋಟೆಯನ್ನು ಕಡೆಗಣಿಸಿರುವುದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಬಸವನ ಬಾಗೇವಾಡಿ ತಾಲ್ಲೂಕು ಮನಗೂಳಿಯ ಟಿಕೆಟ್‌ ವಂಚಿತ ಕಾಂಗ್ರೆಸ್‌ ಮುಖಂಡ ಡಾ.ಬಸವರಾಜ ಎಂ.ಬಿರಾದಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಹಲವು ಕಾಂಗ್ರೆಸ್‌ ಮುಖಂಡರು ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಇದ್ದರೂ ಸಹ ಪರಿಗಣಿಸಿದೇ ಬೆಳಗಾವಿಗೆ ಆದ್ಯತೆ ನೀಡಿರುವುದು ಸರಿಯಲ್ಲ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಸಕರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಯಶವಂತರಾಯಗೌಡ ‍ಪಾಟೀಲ ಅವರು ಜಿಲ್ಲೆಗೆ ಅವಕಾಶ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿದ್ದಾರೆ. ಇದರ ಪರಿಣಾಮ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪಕ್ಷಕ್ಕೆ ಹೊಸಬರ ಅಗತ್ಯವಿಲ್ಲ ಎಂಬುದು ಟಿಕೆಟ್‌ ಹಂಚಿಕೆಯಿಂದ ಸಾಬೀತಾಗಿದೆ. ಈ ಬಾರಿ ವಾಯವ್ಯ ಪದವೀಧರ, ಶಿಕ್ಷಕ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಗೆಲವು ಸುಲಭವಾಗಿತ್ತು. ಆದರೆ, ಟಿಕೆಟ್‌ ಹಂಚಿಕೆಯಲ್ಲಿ ಅನುಸರಿಸಿದ ನೀತಿಯಿಂದ ಬಿಜೆಪಿಗೆ ಹೆಚ್ಚು ಅನುಕೂಲವಾಗಿದೆ. ಬಿಜೆಪಿ ಅಭ್ಯರ್ಥಿಗಳ ಗೆಲುವು ಸುಲಭವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರದ ಟಿಕೆಟ್‌ ಬಯಸಿ ನಾನೂ ಅರ್ಜಿ ಸಲ್ಲಿಸಿದ್ದೆ. ಟಿಕೆಟ್‌ ಸಿಗುವ ವಿಶ್ವಾಸವಿತ್ತು. ಆದರೆ, ಕೊನೇ ಕ್ಷಣದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಈ ಸಂಬಂಧ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು