ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೈಕ್ಷಣಿಕ ಕ್ರಾಂತಿ’ಯ ಹರಿಕಾರ ಬಂಥನಾಳ ಶ್ರೀ

ಭಕ್ತರ ಕಾಣಿಕೆಯಲ್ಲೆ ಉತ್ತರ ಕರ್ನಾಟಕದ ವಿವಿಧೆಡೆ ವಿದ್ಯಾಕೇಂದ್ರ ಸ್ಥಾಪನೆ
Published 10 ಮಾರ್ಚ್ 2024, 5:34 IST
Last Updated 10 ಮಾರ್ಚ್ 2024, 5:34 IST
ಅಕ್ಷರ ಗಾತ್ರ

ತಾಂಬಾ: ‘ವಿದ್ಯಾರ್ಥಿಗಳೇ ದೇವರು;ವಿದ್ಯಾಲಯಗಳೇ ದೇವಾಲಯ’ಎಂಬ ಸಿದ್ಧಾಂತ ರೂಪಿಸಿ, ಭಕ್ತರ ಕಾಣಿಕೆಯಲ್ಲೇ ಉತ್ತರ ಭಾಗದ ಎಲ್ಲೆಡೆ ಬಡ ಮಕ್ಕಳ ಜ್ಞಾನಾರ್ಜನೆಗಾಗಿ ವಿದ್ಯಾಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಬಂಥನಾಳದ ಸಂಗನಬಸವ ಶ್ರೀಗಳು ಇಂದಿಗೂ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಪಾಲಿನ ಹೊಂಬೆಳಕು.

ಮೂರು ಶತಮಾನಗಳ ಹಿಂದೆ ಕಲ್ಯಾಣ ನಾಡಿನಿಂದ ಬಂದ ವೃಷಭಲಿಂಗ ಶ್ರೀಗಳಗಳಿಂದ ಸ್ಥಾಪಿತವಾದ ಸುಕ್ಷೇತ್ರ ಬಂಥನಾಳ ಮಠ ಸಮಾಜಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ.

ಮಠದ ಈ ಹಿಂದಿನ ಪೀಠಾಧಿಪತಿಗಳಾದ ಶಂಕರಲಿಂಗ ಶ್ರೀಗಳು, ಚನ್ನಬಸವ ಶ್ರೀಗಳು ಕುಗ್ರಾಮವನ್ನು ಸುಕ್ಷೇತ್ರವನ್ನಾಗಿಸುವಲ್ಲಿ ಬಸವಾದಿ ಪ್ರಮಥರದಾರಿ ಕ್ರಮಿಸಿದರು. ಇವರ ನಂತರ ಪೀಠಾಧಿಪತಿಗಳಾದ ಸಂಗನಬಸವ ಶ್ರೀಗಳು ಸಮಾಜಮುಖಿ ಕಾರ್ಯಗಳಿಂದ ಮಠದ ಕೀರ್ತಿಯನ್ನು ಮುಗಿಲೆತ್ತರಕ್ಕೇರಿಸಿ, ಬಂಥನಾಳ ಶ್ರೀಗಳು ಎಂದೇ ತಾವೂ ಖ್ಯಾತರಾದವರು.

ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದ ಕೀರ್ತಿ ಸಂಗನಬಸವ ಶ್ರೀಗಳದ್ದು.  ವಿವಿಧಡೆ ಇವರು ಆರಂಭಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಇಂದಿಗೂ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

1923ರಲ್ಲಿ ಸ್ವಾತಂತ್ರ ಚಳವಳಿ ಸಂದರ್ಭದಲ್ಲಿ ‘ಕರ್ನಾಟಕದ ಗಾಂಧಿ’ ಹರ್ಡೇಕರ್ ಮಂಜಪ್ಪನವರಿಂದ ಬಂಥನಾಳ ಮಠದಲ್ಲಿ ಭಕ್ತ ಸಮುದಾಯದ ಸಮ್ಮುಖದಲ್ಲಿ ರಾಷ್ಟ್ರೀಯ ದೀಕ್ಷೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಗಾಂಧಿ ಹರ್ಡೇಕರ್, ಸಂಗನಬಸವ ಶ್ರೀಗಳಿಂದ್ದ ಧರ್ಮ ದೀಕ್ಷೆ ಪಡೆದರು. ಅಂದಿನಿಂದಲೂ ಶ್ರೀಗಳು ಖಾದಿ ವಸ್ತ್ರಧಾರಿಗಳಾದರು. ಮಠದ ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರ ಧ್ವಜಾರೋಹಣಕ್ಕೆ ಪ್ರಾಶಸ್ತ್ಯವಿಟ್ಟು ದೇಶಾಭಿಮಾನ ಮೂಡಿಸಿದರು.

1925ರಲ್ಲಿ ವಚನ ಪಿತಾಮಹ ಫ.ಗು.ಹಳಕಟ್ಟಿ ಸ್ಥಾಪಿಸಿದ ಬಿ.ಎಲ್.ಡಿಇ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯ ಹಾಗೂ ಸಿದ್ಧೇಶ್ವರ ಸಂಸ್ಥೆ, ಜೊತೆಗೆ ಉಚಿತ ಪ್ರಸಾದ ನಿಲಯದ ಬಲವರ್ಧನೆಗೆ ಕಂಕಣತೊಟ್ಟರು.

ಲಚ್ಯಾಣದಲ್ಲಿ 1950ರಲ್ಲಿ ಸರ್ವಧರ್ಮ ಸಮ್ಮೇಳನ, ಸೊನ್ನದಲ್ಲಿ 1953ರಲ್ಲಿ 63 ಪುರಾತನ ಮಂಟಪ ಪೂಜೆ, ವಿಜಯಪುರ ನಗರದಲ್ಲಿ 1954ರಲ್ಲಿ 770 ಅಮರ ಗಣಾಧೀಶ್ವರರ ಪೂಜೆ ನೆರೆವೇರಿಸಿದರು. 1955ರಲ್ಲಿ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಆಯ್ಕೆ, 1969ರಲ್ಲಿ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ 1,96,000 ಗಣಂಗಳ ಜರುಗಿಸಿದ ಕೀರ್ತಿ ಸಂಗನಬಸವ ಶ್ರೀಗಳಿಗೆ ಸಲ್ಲುತ್ತದೆ. 

ಸಂಸ್ಕೃತಿ ಮಹೋತ್ಸವ ಆರಂಭ ಸುಕ್ಷೇತ್ರ ಬಂಥನಾಳದ ವೃಷಭಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಶುಕ್ರವಾರದಿಂದ ಆರಂಭವಾಗಿರುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾರ್ಚ್‌ 11ರ ವರೆಗೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT