ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ | ಪುರಸಭೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?

ಕಾಂಗ್ರೆಸ್ ಹೈಕಮಾಂಡ್‌ನತ್ತ ಎಲ್ಲರ ಚಿತ್ತ:  ಮೂಲ ಕಾಂಗ್ರೆಸ್ಸಿಗರಿಗೋ, ವಲಸಿಗರಿಗೆ ಮಣೆಯೋ
ಶಂಕರ ಈ.ಹೆಬ್ಬಾಳ
Published : 11 ಸೆಪ್ಟೆಂಬರ್ 2024, 4:54 IST
Last Updated : 11 ಸೆಪ್ಟೆಂಬರ್ 2024, 4:54 IST
ಫಾಲೋ ಮಾಡಿ
Comments

ಮುದ್ದೇಬಿಹಾಳ: ಇಲ್ಲಿನ ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌  ಪಕ್ಷದಲ್ಲಿಯೇ ಎರಡೂ ಸ್ಥಾನಗಳಿಗೆ ಪೈಪೋಟಿ ಕಂಡು ಬಂದಿದೆ.

ಮೂಲತಃ ಕಾಂಗ್ರೆಸ್ಸಿಗರಾಗಿರುವ ಮೈಬೂಬ ಗೊಳಸಂಗಿ ಅವರಿಗೆ ಕಾಂಗ್ರೆಸ್ ಪಕ್ಷದ ಒಲವು ದೊರೆಯಲಿದೆಯೋ ಅಥವಾ ಪಕ್ಷೇತರ ಸದಸ್ಯರಾಗಿ ಕಾಂಗ್ರೆಸ್ ಸೇರ್ಪಡೆಯಾಗಿರುವ  ರಿಯಾಜಅಹ್ಮದ ಢವಳಗಿ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮಗೊಳ್ಳಲಿದೆಯೋ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಈಗಾಗಲೇ ಐವರು ಪಕ್ಷೇತರರು ಹಾಗೂ ಇಬ್ಬರು ಜೆಡಿಎಸ್ ಸದಸ್ಯರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಅಧ್ಯಕ್ಷ ಹುದ್ದೆ ಕಾಂಗ್ರೆಸ್‌ನವರಿಗೆ ದೊರೆಯಲಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಮುದ್ದೇಬಿಹಾಳ ಪುರಸಭೆಯ ಒಟ್ಟು 23 ಸದಸ್ಯ ಬಲ ಇದ್ದು ಅದರಲ್ಲಿ ತಲಾ ಎಂಟು ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಬ್ಬರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದು ಐವರು ಪಕ್ಷೇತರ ಸದಸ್ಯರು ಇದ್ದಾರೆ.

ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಈಗಿನ ಶಾಸಕ ನಾಡಗೌಡ ಅವರು ಸಮ್ಮಿಶ್ರ ಸರ್ಕಾರದ ಪ್ರಭಾವ ಬಳಸಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ.ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗಕ್ಕೆ ಮೀಸಲು ತರಲು ಯಶಸ್ವಿಯಾಗಿದ್ದರು. ಆದರೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಹಿಂದಿನ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪುರಸಭೆಗೆ ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನ, ಹಿಂದುಳಿದ ಅ ವರ್ಗದ ಮಹಿಳೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ತರಲು ಯಶಸ್ವಿಯಾಗಿ ಪ್ರತಿಭಾ ಅಂಗಡಗೇರಿ ಅವರು ಅಧ್ಯಕ್ಷರಾಗಿದ್ದರು. ಇದೀಗ ಬದಲಾದ ಕಾಲಘಟ್ಟದಲ್ಲಿ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ತಂದಿದ್ದು ಸಾಮಾನ್ಯ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನದ ಮೀಸಲನ್ನು ಸರ್ಕಾರ ಪ್ರಕಟಿಸಿದೆ.

ಬಿಜೆಪಿ ನಡೆ : ಬಿಜೆಪಿಯಲ್ಲಿ ಅಧಿಕಾರಕ್ಕೆ ಏರುವಷ್ಟು ಬಲ ಇಲ್ಲದಿರುವುದರಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಪಕ್ಕಾ ಆಗಿದೆ. ಎಂಟು ಸದಸ್ಯರ ಬಲದ ಜೊತೆಗೆ ಇನ್ನೂ ನಾಲ್ವರು ಸದಸ್ಯರ ಅವಶ್ಯಕತೆ ಇದೆ. ಆದರೆ ಈಗಾಗಲೇ ಪಕ್ಷೇತರರು ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ತಂತ್ರಗಾರಿಕೆಗೆ ಅಷ್ಟೊಂದು ಯಶಸ್ಸು ಸಿಗುವುದು ಕಷ್ಟಸಾಧ್ಯವೆನ್ನಿಸಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
 
ಅಜ್ಞಾತ ಸ್ಥಳದಲ್ಲಿರುವ ಸದಸ್ಯರು:

ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇರ್ಪಡೆಯಾಗಿರುವ ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರು ಚುನಾವಣೆಯ ಎರಡ್ಮೂರು ದಿನಗಳಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.ಸೆ.11 ರಂದು ಚುನಾವಣೆ ನಡೆಯಲಿದ್ದು ಅಂದೇ ಪುರಸಭೆಗೆ ಕಾಲಿಡಲಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ನಮಗೆ ಯಾವ ಸೂಚನೆ ಬರುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ. ನಮ್ಮಿಬ್ಬರ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇರುವುದು ಸತ್ಯ. ಆದರೆ ಪಕ್ಷದ ಹೈಕಮಾಂಡ್ ಸೂಚನೆಗೆ ತಲೆ ಬಾಗುತ್ತೇವೆ.
ಮಹಿಬೂಬ ಗೊಳಸಂಗಿ ರಿಯಾಜ್‌ಅಹ್ಮದ ಢವಳಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು
ಅಲ್ಪಸಂಖ್ಯಾತರಿಗೆ ಆದ್ಯತೆ ಕೊಡಬೇಕು ಎಂಬ ಹಿನ್ನೆಲೆಯಲ್ಲಿ ಮೂಲ ಕಾಂಗ್ರೆಸ್ ಸದಸ್ಯರಿಗೆ ಅಥವಾ ವಲಸಿಗ ಕಾಂಗ್ರೆಸ್ ಸದಸ್ಯರಿಗೆ ಆದ್ಯತೆ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.
ಗುರು ತಾರನಾಳಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT