ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮರಣ ಶಾಸನ ಬರೆದ ಮೋದಿ ಸರ್ಕಾರ: ಸುನೀತ್ ಕುಮಾರ್ ಆರೋಪ

Last Updated 14 ಜುಲೈ 2021, 14:32 IST
ಅಕ್ಷರ ಗಾತ್ರ

ವಿಜಯಪುರ: ಪ್ರಧಾನಿ ಮೋದಿ ಅವರು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರ ಮರಣ ಶಾಸನ ಬರೆದಿದ್ದಾರೆ ಎಂದು ರೈತ–ಕೃಷಿ ಕಾರ್ಮಿಕರ ಸಂಘಟನೆ (ಆರ್.ಕೆ.ಎಸ್) ರಾಜ್ಯ ಘಟಕದ ಅಧ್ಯಕ್ಷ ಡಾ.ಟಿ.ಎಸ್.ಸುನೀತ್ ಕುಮಾರ್ ಆರೋಪಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಗೆ ಏಳು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್‌ ಸಂಘಟನೆ ಫೇಸ್‌ಬುಕ್‌ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಪ್ರತಿರೋಧ ಸಪ್ತಾಹದಲ್ಲಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಮೋದಿ ಅವರು ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ತಾವು ಕೊಟ್ಟ ಮಾತನ್ನು ಕಡೆಗಣಿಸಿದ್ದಾರೆ ಎಂದರು.

ದೇಶದಲ್ಲಿ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟವನ್ನು ಹತ್ತಿಕ್ಕುವಲ್ಲಿ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಅವುಗಳೆಲ್ಲವನ್ನೂ ಮೀರಿ ರೈತ ಚಳವಳಿ ಎರಡು ನೂರು ದಿನಗಳನ್ನು ಪೂರೈಸಿ ಮುಂದುವರೆದಿದೆ ಎಂದರು.

ಕೊರೊನಾ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಜನತೆ ಮನೆಯಿಂದ ಹೊರಬಂದು ಯಾವುದೇ ಅನ್ಯಾಯವನ್ನು ಪ್ರತಿರೋಧಿಸಲು ಸಾಧ್ಯವಿಲ್ಲದ ಈ ಸಂದರ್ಭದಲ್ಲಿ ಈ ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ಕೇದ್ರ ಸರ್ಕಾರ ರೈತರನ್ನು ಹೂತು ಸಮಾದಿ ಮಾಡಲು ಸಜ್ಜಾಗಿದೆ ಎಂದು ಹೇಳಿದರು.

ದೇಶದಾದ್ಯಂತ ರೈತರು ತೀವ್ರ ಸಂಕಷ್ಟದ ನಡುವೆ ಬದುಕುತ್ತಿದ್ದಾರೆ. ಕೃಷಿ ದುಬಾರಿಯಾಗಿದೆ. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ಕೃಷಿಗಾಗಿ ರೈತರು ತಾವು ಮಾಡಿದ ಖರ್ಚನ್ನು ವಾಪಾಸ್‌ ಪಡೆಯಲಾಗದೆ ತತ್ತರಿಸುತ್ತಿದ್ದಾರೆ. ಕೃಷಿ ಮಾಡಲು ಬೇಕಾದ ಬೀಜ, ಗೊಬ್ಬರ, ಕೀಟನಾಶಕಗಳಿಗಾಗಿ ರೈತರು ಸಾಲ ಮಾಡುತ್ತಾರೆ. ಬೆಳೆ ಬಂದ ಮೇಲೆ ಮಾಡಿದ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗದೆ ಕಂಗಾಲಾಗುತ್ತಾರೆ. ಅದೆಷ್ಟೋ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಆರ್.ಕೆ.ಎಸ್ ಕರ್ನಾಟಕದ ರಾಜ್ಯ ಖಜಾಂಚಿ ವಿ.ನಾಗಮ್ಮಾಳ್‍,ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದರೂ ಪ್ರಸ್ತುತ ಅಧಿಕಾರದಲ್ಲಿರುವ ಕೆಂದ್ರ ಬಿಜೆಪಿ ಸರ್ಕಾರ ಪ್ರಜಾತಂತ್ರದ ಎಲ್ಲ ನೀತಿಗಳನ್ನು ಗಾಳಿಗೆ ತೂರಿ ಸುಗ್ರಿವಾಜ್ಞೆಗಳ ಮೂಲಕ ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿದೆಹಲಿಯಲ್ಲಿ ರೈತರು ತಮ್ಮ ಎಳೆಯ ಮಕ್ಕಳು, ವಯಸ್ಸಾದ ತಂದೆ, ತಾಯಿಯರೊಡನೆ ಅಲ್ಲಿ ಸೇರಿದ್ದಾರೆ. ಈಗಾಗಲೇ ಹೋರಾಟ ನಿರತ ಸುಮಾರು 500ಕ್ಕಿಂತ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ. ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸೋಣ ಎಂದರು.

ಆರ್‌.ಕೆ.ಎಸ್ ವಿಜಯಪುರ ಜಿಲ್ಲಾ ಸಂಚಾಲಕ ಬಾಳು ಜೇವೂರ ಇದ್ದರು.

***

ರೈತರಿಗೆ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟಾದರು ಬೆಲೆ ದೊರೆಯಬೇಕು. ಸರ್ಕಾರವೇ ರಚಿಸಿದ ಸ್ವಾಮಿನಾಥನ್ ಆಯೋಗದ ಶಿಫಾರಸ್ಸು ಜಾರಿಮಾಡಬೇಕು.
-ಡಾ.ಟಿ.ಎಸ್.ಸುನೀತ್ ಕುಮಾರ್, ಅಧ್ಯಕ್ಷ, ಆರ್.ಕೆ.ಎಸ್. ರಾಜ್ಯ ಘಟಕದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT