ಕೊಲ್ಹಾರ: ಒಣಮೇವು ತುಂಬಿದ್ದ ಜೋಡೆತ್ತಿನ ಬಂಡಿ ತಾಲ್ಲೂಕಿನ ಕವಲಗಿ ಗ್ರಾಮದಲ್ಲಿ ಶುಕ್ರವಾರ ತೋಟದ ಬಾವಿಯಲ್ಲಿ ಪಲ್ಟಿಯಾಗಿ ಬಿದ್ದು ಎರಡೂ ಎತ್ತುಗಳು ಮೃತಪಟ್ಟಿವೆ.
ತಾಲ್ಲೂಕಿನ ಕವಲಗಿ ಗ್ರಾಮದ ರೈತ ಹನುಮಂತ ರಾಮಣ್ಣ ದಳವಾಯಿ ಅವರು ಸಾಗಿಸುತ್ತಿದ್ದ ಒಣ ಮೇವಿನ ಜೋಡೆತ್ತಿನ ಗಾಡಿಗೆ ನಾಯಿ ಅಡ್ಡ ಬಂದಿದ್ದರಿಂದ ಎತ್ತುಗಳು ಬೆದರಿ ಬಂಡಿ ಆಯತಪ್ಪಿ ತೋಟದಲ್ಲಿದ್ದ ರಸ್ತೆಪಕ್ಕ ತೆರೆದ ಬಾವಿಗೆ ಬಿದ್ದು ಈ ಅವಘಡ ಸಂಭವಿಸಿದೆ.
ಎತ್ತಿನ ಬಂಡಿ ಬಾವಿಗೆ ಬೀಳುವ ವೇಳೆ ರೈತ ಹನುಮಂತ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಎತ್ತುಗಳ ಕಳೆಬರಹ ಹಾಗೂ ಎತ್ತಿನಗಾಡಿ ಹೊರ ತೆಗೆದು ಎರಡೂ ಎತ್ತುಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ್ ಎಸ್. ಎಸ್. ನಾಯಕಲಮಠ ಹಾಗೂ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಾವಿಗೆ ಬಿದ್ದು ಮೃತಪಟ್ಟ ಎತ್ತುಗಳ ಮಾಲೀಕರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.