ಬುಧವಾರ, ಸೆಪ್ಟೆಂಬರ್ 22, 2021
24 °C

ಪೊಲೀಸರಿಂದ ಜನಸ್ನೇಹಿ ಕಾರ್ಯಕ್ಕೆ ಆದ್ಯತೆ; ಎಚ್‌.ಡಿ.ಆನಂದಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪೊಲೀಸರು ಜಿಲ್ಲೆಯಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ಹಿಸಲು ಆದ್ಯತೆ ನೀಡಲಾಗುವುದು ಎಂದು ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು, ಸಹಾಯ ಕೇಳಿ ಬರುವವರಿಗೆ ಅಗತ್ಯ ಪೊಲೀಸ್‌ ನೆರವು ನೀಡಲು ಹೆಚ್ಚು ಒತ್ತು ನೀಡುವಂತೆ ಎಲ್ಲ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ಜನರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ, ಪೊಲೀಸ್‌ ಇಲಾಖೆಯಲ್ಲಿ ಕೆಲಸಗಳಿದ್ದರೆ ಮುಕ್ತವಾಗಿ ತಮ್ಮನ್ನು ಭೇಟಿಯಾಗಬಹುದು. ಕಾನೂನು ಸುವ್ಯವಸ್ಥೆ ಬಗ್ಗೆಯೂ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಪರಾಧ, ಅಕ್ರಮ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮಕೈಗೊಳ್ಳಲಾಗುವುದು. ಬೇರು ಸಹಿತ ಕಿತ್ತುಹಾಕಲಾಗುವುದು. ಈ ವಿಷಯದಲ್ಲಿ ಯಾರೊಂದಿಗೂ ರಾಜಿ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಬೈಕ್‌ ಕಳ್ಳರ ಬಂಧನ:

ಬೈಕ್‌ ಕಳವು ಮಾಡಿ ಅವುಗಳ ನಂಬರ್‌ ಪ್ಲೇಟ್‌ ಬದಲಾಯಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‌ ರಾಜ್ಯ ಬೈಕ್‌ ಕಳ್ಳರನ್ನು ಬಂಧಿಸಲಾಗಿದೆ ಎಂದು ಎಸ್‌.ಪಿ. ಆನಂದಕುಮಾರ್‌ ತಿಳಿಸಿದರು.

ಜೀರಂಕಲಗಿಯ ರೇವಣಸಿದ್ದ ಬಿರಾದಾರ(21) ಮತ್ತು ಇಂಡಿ ತಾಲ್ಲೂಕಿನ ಕೂಡಗಿಯ ಸುರೇಶ ಬಿರಾದಾರ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಸುಮಾರು ₹9.30 ಲಕ್ಷ ಮೌಲ್ಯದ 20 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಚಡಚಣ, ಝಳಕಿ, ಇಂಡಿ, ವಿಜಯಪುರ ಹಾಗೂ ಮಹಾರಾಷ್ಟ್ರದ ಕರಾಡ, ಜತ್‌ಗಳಲ್ಲಿ ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.

ಇಂಡಿ ಡಿಎಸ್‌ಪಿ ಶ್ರೀಧರ ದೊಡ್ಡಿ, ಚಡಚಣ ಸಿಪಿಐ ಎಸ್.ಎಂ.ಪಾಟೀಲ, ಚಡಚಣ ಪಿಎಸ್‌ಐ ಎಂ.ಎ.ಸತಿಗೌಡರ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದು, ಇವರಿಗೆ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಜೋಡಿ ಕೊಲೆ ಆರೋಪಿಗಳ ಸೆರೆ:

ಕಲಕೇರಿ ಸಮೀಪದ ಸಲಾದಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಪ್ರೇಮಿಗಳಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಂದಗೀಸಾಬ ತಂಬದ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌.ಪಿ.ತಿಳಿಸಿದರು.

ಬಸವರಾಜ ಬಡಿಗೇರ(21) ಹಾಗೂ ದಾವಲಬಿ ತಂಬದ(15) ಪರಸ್ಪರ ಪ್ರೀತಿಸಿ ಮದುವೆಯಾಗಲು ತೀರ್ಮಾನಿಸಿದ್ದರು. ಇದನ್ನು ಸಹಿಸದ ಬಾಲಕಿಯ ತಂದೆ ಮತ್ತು ಸಂಬಂಧಿಕರು ಇಬ್ಬರನ್ನು ಸಲಾದಹಳ್ಳಿ ಹೊರವಲಯದಲ್ಲಿ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿದ್ದರು.

ಇಂಡಿ ಡಿಎಸ್‌ಪಿ ಶ್ರೀಧರ ದೊಡ್ಡಿ ನೇತೃತ್ವದ ತನಿಖಾ ತಂಡ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿಯಾದ ಬಾಲಕಿಯ ತಂದೆ ಬಂದಗೀಸಾಬ ಕಾಶಿಂ ಸಾಬ್‌ ತಂಬದನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ, ಇಂಡಿ ಡಿಎಸ್‌ಪಿ ಶ್ರೀಧರ ದೊಡ್ಡಿ ಮತ್ತು ಸಿಬ್ಬಂದಿ ಇದ್ದರು. 

****

ಲಾಕ್‌ಡೌನ್‌ ತೆರವಾಗಿರುವುದರಿಂದ ಅಂತರರಾಜ್ಯ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು
–ಎಚ್.ಡಿ.ಆನಂದಕುಮಾರ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು