ಮುದ್ದೇಬಿಹಾಳ: ತಮ್ಮ ಅಧಿಕಾರದ ಅವಧಿಯಲ್ಲಿ ಪಟ್ಟಣದ ಉದ್ಯಾನವನಗಳ ಅಭಿವೃದ್ಧಿಗೆ ಹಾಗೂ ಪಟ್ಟಣದ ಕೆರೆಯ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದಾಗಿ ಪುರಸಭೆಯ ನೂತನ ಅಧ್ಯಕ್ಷ ಮಹಿಬೂಬ ಗೊಳಸಂಗಿ ಹೇಳಿದರು.
ಪಟ್ಟಣದ ಹುಡ್ಕೊ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನದಲ್ಲಿ ಪುರಸಭೆ, ಅರಣ್ಯ ಇಲಾಖೆ ಹಾಗೂ ಹಸಿರು ತೋರಣ ಗೆಳೆಯರ ಬಳಗ ಶುಕ್ರವಾರ ಹಮ್ಮಿಕೊಂಡಿದ್ದ ‘ಸ್ವಚ್ಛತೆಯೇ ಸೇವೆ’ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುದ್ದೇಬಿಹಾಳ ಪಟ್ಟಣದ ಜೀವನಾಡಿಯಾಗಿರುವ ಕೆರೆಯ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ಕ್ರಿಯಾ ಯೋಜನೆ ರೂಪಿಸುತ್ತಿದ್ದು, ಇದಕ್ಕೆ ಶಾಸಕರು ಸಹ ಒಪ್ಪಿಗೆ ನೀಡಿದ್ದಾರೆ. ಹಸಿರು ತೋರಣ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಸದಸ್ಯರ ಸಲಹೆ ಪಡೆದು ಕೆರೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದರು.
ಪುರಸಭೆ ಉಪಾಧ್ಯಕ್ಷೆ ಪ್ರೀತಿ ಶರಣು ದೇಗಿನಾಳ, ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಹೆತ್ತ ತಾಯಿಯ ಬಗ್ಗೆ ಎಲ್ಲರಿಗೂ ಭಾವನಾತ್ಮಕ ಸಂಬಂಧ, ಪ್ರೀತಿ, ಗೌರವ ಇರುತ್ತದೆ. ಇದೇ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ತಾಯಿಯ ಹೆಸರಿನಲ್ಲಿ ಪ್ರತಿಯೊಬ್ಬರೂ ಗಿಡ ನೆಡುವ ಸಲುವಾಗಿ ‘ತಾಯಿಯ ಹೆಸರಿನಲ್ಲಿ ಗಿಡ ನೆಡಿ’ ಅಭಿಯಾನ ಹಮ್ಮಿಕೊಂಡಿದ್ದಾರೆ. ಇದಕ್ಕೆ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರಸಭೆಯ ನೂತನ ಅಧ್ಯಕ್ಷ ಮಹಿಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷೆ ಪ್ರೀತಿ ಶರಣು ದೇಗಿನಾಳ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆಯ ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಶ್ರೀಶೈಲ ಮರೋಳ, ಮುತ್ತು ರಾಯಗೊಂಡ, ವಕೀಲರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ಬಿ.ಎಸ್.ಮೇಟಿ, ರವಿ ಗೂಳಿ ಸೇರಿದಂತೆ ಹಲವರು ಇದ್ದರು.
ಅಮರೇಶ ಗೂಳಿ ಸ್ವಾಗತಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಚ್.ಬಳಬಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.