ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ನೀಡಲು ನಿರಾಕರಿಸಿದ ಆಸ್ಪತ್ರೆ ವಿರುದ್ಧ ಆಕ್ರೋಶ

ಕೋವಿಡ್‌ನಿಂದ ಸಾವಿಗೀಡಾದ ವ್ಯಕ್ತಿ; ಅಧಿಕ ಶುಲ್ಕ ವಸೂಲಿ ಆರೋಪ
Last Updated 23 ಸೆಪ್ಟೆಂಬರ್ 2020, 16:14 IST
ಅಕ್ಷರ ಗಾತ್ರ

ವಿಜಯಪುರ: ‘ಕೋವಿಡ್‌ನಿಂದ ಸಾವಿಗೀಡಾದ ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗುವ ಮುನ್ನಾ ಬಾಕಿ ಬಿಲ್‌ ಕಟ್ಟಬೇಕು, ಇಲ್ಲವಾದರೆ ಶವ ಕೊಡುವುದಿಲ್ಲ’ ಎಂಬ ಖಾಸಗಿ ಆಸ್ಪತ್ರೆಯ ನಡೆಯನ್ನು ಖಂಡಿಸಿ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ಡಿ.ಸಿ.ಸಿ. ಬ್ಯಾಂಕ್ ಹತ್ತಿರ ಇರುವ ‘ಕೋಟಿ’ ಆಸ್ಪತ್ರೆಗೆ 16 ದಿನಗಳ ಹಿಂದೆ ಬೆಳಗಾವಿ ಜಿಲ್ಲೆ ಸಂಕೇಶ್ವರ ಮೂಲದ ಕೋವಿಡ್‌ ಪೀಡಿತ 40 ವರ್ಷದ ವ್ಯಕ್ತಿಯೊಬ್ಬರು ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮಂಗಳವಾರ ಸಾವಿಗೀಡಾಗಿದ್ದರು.

‘ಈಗಾಗಲೇ ₹4 ಲಕ್ಷ ಚಿಕಿತ್ಸಾ ವೆಚ್ಚ ಭರಿಸಿದ್ದೇವೆ. ಇನ್ನೂ ₹3 ಲಕ್ಷ ಪಾವತಿಸಿ, ಶವ ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯವರು ಸೂಚಿಸಿದ್ದಾರೆ. ಇಷ್ಟೊಂದು ಹಣವನ್ನು ಎಲ್ಲಿಂದ ತಂದು ಕಟ್ಟುಬೇಕು’ ಎಂದು ಸಂಬಂಧಿಕರುಆಕ್ರೋಶ ವ್ಯಕ್ತಪಡಿಸಿದರು.

‘ಹಣ ನೀಡದಿದ್ದರೆ ಮೃತ ದೇಹ ಕೊಡುವುದಿಲ್ಲ ಎಂಬ ಖಾಸಗಿ ಆಸ್ಪತ್ರೆಯ ನೋಂದಾಣಿ ರದ್ದುಪಡಿಸಿ, ವೈದ್ಯರು ಹಾಗೂ ಆಸ್ಪತ್ರೆಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮಹಾನಗರ ಪಾಲಿಕೆಮಾಜಿ ಸದಸ್ಯ ಉಮೇಶ ವಂದಾಲ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದಆಗ್ರಹಿಸಿದರು. ಅಲ್ಲದೇ, ರಸ್ತೆಯ ಮೇಲೆ ಕರವಸ್ತ್ರ ಹಾಕಿ ಹಣ ಸಂಗ್ರಹಿಸಲು ಮುಂದಾದರು.

ಮುಖಂಡ ಶಿವಾನಂದ ಭುಯ್ಯಾರ ಮಾತನಾಡಿ, ಸರ್ಕಾರ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಮತ್ತು ಬಿ.ಪಿ.ಎಲ್. ಕಾರ್ಡ್‌ಗಳನ್ನು ಪರಿಗಣಿಸಿ ಚಿಕಿತ್ಸೆ ಒದಗಿಸಬೇಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತ ಕೊರೊನಾ ನಿರ್ವಹಣೆಯಲ್ಲಿ ತನ್ನ ಜವಾಬ್ದಾರಿ ಮರೆತಂತೆ ಕಾಣುತ್ತಿದೆ. ಇನ್ನಾದರೂ ಸಹ ಇಂತಹ ಪ್ರಕರಣಗಳು ಮರುಕಳಿಸದಂತೆ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ಜರುಗಿಸಬೇಕು ಹಾಗೂ ಬರುವಂತಹ ದಿನಗಳಲ್ಲಿ ಇದೇ ರೀತಿ ಖಾಸಗಿ ಆಸ್ಪತ್ರೆಗಳು ನಡೆದುಕೊಂಡಲ್ಲಿ ಆಸ್ಪತ್ರೆಗಳ ನೋಂದಣಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ ‌ಮತ್ತು ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಶವವನ್ನು ಕೊಂಡೊಯ್ಯಲು ಅನುವು ಮಾಡಿಕೊಟ್ಟರು.

ಮುಖಂಡರಾದ ಪರಶು ಜಾಧವ, ಶಂಕರ ಕವಳೆ, ಅಮೀತ್‌ ಅವಜಿ, ಪ್ರಲ್ಹಾದ ಕಾಂಬಳೆ, ಸಚಿನ್‌‌ ಸವನಳ್ಳಿ, ಸಂತೋಷ ಯಂಕಪ್ಪಗೋಳ, ಅಪ್ಪು ತೆಗ್ಗಿ, ಅಜಯ ಬೋರಗಿ, ಅನೀಲ ಬೋರಗಿ, ಸಾಗರ ಶೇರಖಾನೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಲ್ಲೆ, ದೂರು ದಾಖಲು:ಘಟನೆಕುರಿತು ಪ್ರತಿಕ್ರಿಯಿಸಿದ ಆಸ್ಪತ್ರೆ ವೈದ್ಯ ಡಾ.ಅಯ್ಯನಗೌಡ ಬಿರಾದಾರ, ಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸಾ ವೆಚ್ಚ ಭರಿಸಲಾಗಿದೆ. ಹೆಚ್ಚುವರಿ ವಸೂಲಿ ಮಾಡಿಲ್ಲ. ಮೃತ ವ್ಯಕ್ತಿಯ ಕಡೆಯವರೇ ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ರದ್ಧಾಂತ ಮಾಡಿದರು ಎಂದು ಆರೋಪಿಸಿದರು.

‘ರೋಗಿಯ ಚಿಕಿತ್ಸಾ ವೆಚ್ಚ ₹4,13,200 ಆಗಿದೆ. ಇದರಲ್ಲಿ ಕೇವಲ ₹1.82 ಲಕ್ಷ ವೈದ್ಯಕೀಯ ಶುಲ್ಕ ಪಾವತಿಸಿದ್ದಾರೆ. ಇನ್ನೂ ₹ 2.31 ಲಕ್ಷ ಪಾವತಿಸುವುದು ಬಾಕಿ ಇದೆ. ಅಲ್ಲದೇ, ಔಷಧ ವೆಚ್ಚ ₹25,360 ಪಾವತಿಸುವುದು ಬಾಕಿ ಇದೆ. ಈ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಸಹ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿದ್ದಾರೆ’ ಎಂದು ದೂರಿದರು.

‘ಬಾಕಿ ಇರುವ ಬಿಲ್‌ನಲ್ಲೂ ₹ 1 ಲಕ್ಷ ಕಡಿಮೆ ಮಾಡಲಾಗಿತ್ತು. ಶವ ಸಂಸ್ಕಾರ ಮುಗಿಸಿಕೊಂಡು ಬಂದು ಶುಲ್ಕ ಪಾವತಿಸಲು ಸಮಯ ನೀಡಲಾಗಿತ್ತು. ಆದರೆ, ಸ್ಥಳೀಯರೊಂದಿಗೆ ಸೇರಿಕೊಂಡು ರದ್ಧಾಂತ ಮಾಡಿದರು’ ಎಂದು ಹೇಳಿದರು.

‘ನರ್ಸ್‌ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಆದರ್ಶ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ’ ಎಂದರು.

ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಭೇಟಿ: ಪರಿಶೀಲನೆ

ವಿಜಯಪುರ: ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಒದಗಿಸುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಯನ್ವಯ ಶುಲ್ಕ ಆಕರಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.

ನಗರದ ಯಶೋಧಾ ಹಾಗೂ ಯಶೋಧರಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವೈದ್ಯರೊಂದಿಗೆ ಸಭೆ ಮತ್ತು ಕೊರೊನಾ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿ ಮಾತನಾಡಿದರು.

ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆಯ ಬಗ್ಗೆ, ರೋಗಿಗಳಿಗೆ ಒದಗಿಸಿರುವ ಸೌಲಭ್ಯಗಳು ಸೇರಿದಂತೆ ಇನ್ನೀತರ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಿದರು. ಸರ್ಜನ್ ಡಾ.ಕಟ್ಟಿ, ಡಾ.ಲಕ್ಕಣ್ಣನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT