ಇಂಡಿ: ‘ಕೇಂದ್ರ ಸರ್ಕಾರದ ಕಾಮಗಾರಿಗಳ ಭೂಮಿ ಪೂಜೆಯನ್ನು ಶಾಸಕರು ಮಾಡಿ ಅವು ತಮ್ಮ ಕಾಮಗಾರಿಗಳೆಂದು ಹೆಸರು ತೆಗೆದುಕೊಳ್ಳುವ ಶಾಸಕರಿಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಭೂಮಿ ಪೂಜೆಯನ್ನು ಸಂಸದರಿಂದ ಮಾಡಿಸಿರುವುದಕ್ಕೆ ಅಸಮಾಧಾನ ಉಂಟಾಗಿ ಸಂಸದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ’ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ್ ಕಿವುಡೆ ಆರೋಪಿಸಿದರು.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಬಿಜೆಪಿ ಅವರು ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನತೆಗೆ ಗೊತ್ತಾಗಲಿ ಎಂದು ಕಾರ್ಯಕ್ರಮ ಮಾಡಿದ್ದು, ಶಾಸಕರಿಗೆ ಸಹಿಸದಂತಾಗಿದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕುರಿತು ಸಂಸದ ರಮೇಶ ಜಿಗಜಿಣಗಿ ಅವರು ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದಿದ್ದರು. ಈಗ ಅದೇ ಯೋಜನೆ ತಾವೇ ಮಾಡಿಸಿರುವಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದ’ ಎಂದರು.
‘ಸಂಸದ ರಮೇಶ ಜಿಗಜಿಣಗಿ ಅವರು ಹಾಗೂ 2008 ರಲ್ಲಿ ಶಾಸಕ ಸಾರ್ವಭೌಮ ಬಗಲಿ ಅವರು ಮಾಡಿದ ಕಾರ್ಯಗಳನ್ನು ಶೀಘ್ರವೇ ದಾಖಲೆ ಸಮೇತ ಜನತೆ ಮುಂದಿಡಲಾಗುವುದು’ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಅನೀಲ ಜಮಾದಾರ ಮಾತನಾಡಿ, ‘ಸಂಸದ ರಮೇಶ ಜಿಗಿಜಿಣಗಿ ಅವರು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಇಂಡಿ ಮತಕ್ಷೇತ್ರಕ್ಕೆ ನೀಡಿದ್ದಾರೆ. ಆದರೆ ಅವರು ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲು ಬರಲಿಲ್ಲ. ಆದರೆ ಸ್ಥಳೀಯ ಶಾಸಕರು ಅದನ್ನು ಬಳಸಿಕೊಂಡು ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿಗಳಿಗೆ ತಾವೇ ಪೂಜೆ ಮಾಡಿ ತಾವೇ ಮಾಡಿಸಿದಂತೆ ಜನತೆಯ ಮುಂದೆ ಹೇಳಿಕೊಳ್ಳುತ್ತಿದ್ದಾರೆ’ ಎಂದರು.
‘ಜನ ಯಾರ ಪರ ಇದ್ದಾರೆ ಎಂಬುದು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೊತ್ತಾಗಲಿದೆ. ನೀವು ಸವಾಲು ಹಾಕಿದ್ದನ್ನು ನಾವು ಸ್ವೀಕರಿಸಿದ್ದೇವೆ. ಜನರು ಅದಕ್ಕೆ ಪ್ರತ್ಯುತ್ತರ ನೀಡಲಿದ್ದಾರೆ’ ಎಂದು ತಿಳಿಸಿದರು.
ದೇವೆಂದ್ರ ಕುಂಬಾರ, ಹಣಮಂತ್ರಾಯಗೌಡ ಪಾಟೀಲ, ಶಾಂತು ಕಂಬಾರ, ವಜ್ರಕಾಂತ ಕೂಡಿಗನೂರ, ರಾಜಶೇಖರ ಯರಗಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.