ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರೇವಣಸಿದ್ದೇಶ್ವರ ಯೋಜನೆಗೆ ಶೀಘ್ರ ಮಂಜೂರಾತಿ

ನಾಗಠಾಣ ನೂತನ ಬಸ್ ನಿಲ್ದಾಣಕ್ಕೆ ಸಚಿವ ಕಾರಜೋಳ ಭೂಮಿ ಪೂಜೆ
Last Updated 7 ಆಗಸ್ಟ್ 2022, 11:13 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಅನೇಕ ವರ್ಷಗಳ ಬೇಡಿಕೆಯಾಗಿದ್ದ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ನೀಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.

ನಾಗಠಾಣ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯ 1.23 ಲಕ್ಷ ಹೆಕ್ಟೇರ್‌ ಭೂಮಿಗೆ ನೀರೊದಗಿಸುವ ₹ 3 ಸಾವಿರ ಕೋಟಿ ಮೊತ್ತದ ರೇವಣ ಸಿದ್ದೇಶ್ವರ ಏತನೀರಾವರಿ ಯೋಜನೆಗೆ ಪ್ರಥಮ ಹಂತವಾಗಿ ಒಂದೂವರೆ ತಿಂಗಳಲ್ಲಿ ₹ 760 ಕೋಟಿ ಮೊತ್ತದ ಟೆಂಡರ್ ಕರೆದು,ಕೃಷ್ಣಾ ನದಿಯಿಂದ ನೀರನ್ನು ಎತ್ತಲು ಅನುಮೋದನೆ ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಜಿಲ್ಲೆಗೆ ಆಹ್ವಾನಿಸಿ, ಯೋಜನೆಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು.

ನಾಗಠಾಣದಲ್ಲಿ ಒಂದೂವರೆ ವರ್ಷಗಳ ಹಿಂದೆಯೇ ಬಸ್‌ ನಿಲ್ದಾಣ ನಿರ್ಮಾಣವಾಗಬೇಕಿತ್ತು. ಆದರೆ, ಸ್ಥಳೀಯ ಶಾಸಕರು ಸಾರಿಗೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅಡೆತಡೆ ಮಾಡಿದ ಕಾರಣ ವಿಳಂಬವಾಗಿದೆ. ಮುಂದಿನ ಆರು ತಿಂಗಳ ಒಳಗಾಗಿ ಬಸ್‌ ನಿಲ್ದಾಣ ನಿರ್ಮಿಸಿ ಉದ್ಘಾಟಿಸಲಾಗುವುದು ಎಂದರು.

ನಾಗಠಾಣದಲ್ಲಿ 110 ಕೆ.ವಿ.ಹೊಸ ಸ್ಟೇಷನ್ ನಿರ್ಮಾಣ ಬದಲು ಸದ್ಯ ಇರುವ ಸ್ಟೇಷನ್ ಅನ್ನು ಅಪ್ ಗ್ರೇಡ್ ಮಾಡಲಾಗುವುದು ಎಂದು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನುಮೇಲ್ದರ್ಜೆಗೆ ಏರಿಸಲು ಕ್ರಮಕೈಗೊಳ್ಳಲಾಗುವುದು. ನಾಗಠಾಣ ಕೆರೆ ತುಂಬಿಸಲು ಆದ್ಯತೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯಲಕ್ಷ್ಮಣ ಸವದಿ ಮಾತನಾಡಿ,ಸ್ಥಳೀಯ ಶಾಸಕ ಚವ್ಹಾಣ ಅವರು ಊರ ಹೊರಗೆ ಬಸ್ ನಿಲ್ದಾಣ ಮಾಡಬೇಕು. ಊರೊಳಗೆ ಬೇಡ ಎಂದು ಹೇಳಿದ್ದರು. ಆದರೆ, ಊರ ಹೊರಗೆ ಮಾಡುವುದರಿಂದ ಜನರಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚು. ಊರೊಳಗೆ ಆದರೆ, ವೃದ್ದರಿಗೆ, ಮಹಿಳೆಯರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ ಅನುಕೂಲವಾಗಲಿದೆ‌ ಎಂಬ ಉದ್ದೇಶದಿಂದ ಕಾರಜೋಳ ಅವರ ಸಲಹೆ ಮೇರೆಗೆ ಊರೊಳಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಬಸ್ ನಿಲ್ದಾಣ ನಿರ್ಮಾಣ ವಿಳಂಬಕ್ಕೆ ಶಾಸಕ ಚವ್ಹಾಣ ಕಾರಣ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸಿದರೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಪುಲೇಕರ್ ಮಾತನಾಡಿ, ನಾಗಠಾಣದಲ್ಲಿ ಬಸ್ ನಿಲ್ದಾಣ ಇಲ್ಲದೇ ಜನರಿಗೆ ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ₹ 1.5 ಕೋಟಿ ಅನುದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಸಾರ್ವಜನಿಕರು ಸಾರಿಗೆ ಬಸ್ ನಲ್ಲೇ ಪ್ರಯಾಣಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿ.ಪಂ.ಮಾಜಿ ಸದಸ್ಯ ನವೀನ್ ಅರಕೇರಿ, ಮುಖಂಡರಾದ ಕಾಸುಗೌಡ ಬಿರಾದಾರ, ಶರಣ ಬಸವ ಪೂಜಾರಿ, ಲಿಂಗಪ್ಪಣ್ಣ ಮಸಳಿ ಇದ್ದರು.

ನಾಗಠಾಣದ ಉದಯೇಶ್ವರ ಮಠದಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕಾತ್ರಾಳದ ಅಮೃತಾನಂದ ಸ್ವಾಮೀಜಿ, ಗುರುದೇವಾನಂದ ಆಶ್ರಮದ ಅಧ್ಯಕ್ಷ ಪ್ರಜ್ಞಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.

****

ಕಾರಜೋಳ, ಸವದಿ ಮೆರವಣಿಗೆ

ವಿಜಯಪುರ: ನಾಗಠಾಣದಲ್ಲಿ ಬಸ್‌ ನಿಲ್ದಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಭಾನುವಾರ ಆಗಮಿಸಿದ ಸಚಿವ ಗೋವಿಂದ ಕಾರಜೋಳ ಮತ್ತು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರನ್ನು ಅಲಿಯಾಬಾದ್‌ನಿಂದ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

ಸಾವಿರಾರು ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ಹಾಗೂ ಜೆಸಿಬಿ ಮೇಲೆ ನಿಂತು ಗಣ್ಯರಿಗೆ ಹೂವಿನ ಅಭಿಷೇಕ ಮಾಡಿ ಸ್ವಾಗತಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಾಗಠಾಣದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಕಾರಜೋಳ ಪದ ಜಯಘೋಷಗಳು ಮುಗಿಲು ಮುಟ್ಟಿದ್ದವು.ಮುಂದಿನ ಚುನಾವಣೆಗೆ ಸಿದ್ಧತೆಯಂತೆ ಕಂಡುಬಂದಿತು. ಅಲ್ಲದೇ, ಕ್ಷೇತ್ರದಲ್ಲಿ ಕಾರಜೋಳ ಅವರ ಶಕ್ತಿ ಪ್ರದರ್ಶನದಂತೆ ತೋರಿತು.

ಸನ್ಮಾನ: ಸಚಿವ ಗೋವಿಂದ ಕಾರಜೋಳ ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರಿಗೆ
ಬೆಳ್ಳಿಯ ಖಡ್ಗ ನೀಡಿ ಸನ್ಮಾನಿಸಲಾಯಿತು.

ಶಾಸಕ ಗೈರು: ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಅವರ ಗೈರು ಹಾಜರಿ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು.

***

ನಾಗಠಾಣ ಕ್ಷೇತ್ರದ ಅಭಿವೃದ್ಧಿಗೆ ಪ್ರಸ್ತಾವನೆ ತನ್ನಿ ಮಾಡುಕೊಡುತ್ತೇನೆ ಎಂದು ಹೇಳಿದರೂ ಶಾಸಕ ಚವ್ಹಾಣ ಒಮ್ಮೆಯೂ ನನ್ನ ಬಳಿಗೆ ಬಾರದೇ ಕೇವಲ ಆರೋಪ ಮಾಡಿಕೊಂಡು ಅಡ್ಡಾಡುತ್ತಿದ್ದಾರೆ

–ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT