ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗೆ ವಿರೋಧ: ವಿಜಯಪುರದಲ್ಲಿ ರೈಲು ತಡೆಗೆ ಮುಂದಾದ ರೈತರ ಬಂಧನ, ಬಿಡುಗಡೆ

ಸಂಯುಕ್ತ ಕಿಸಾನ್‌ ಮೊರ್ಚಾ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ
Last Updated 18 ಫೆಬ್ರುವರಿ 2021, 10:50 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿನಗರದಲ್ಲಿ ರೈಲು ತಡೆ ನಡೆಸಲು ಮುಂದಾದ ರೈತ ಮುಖಂಡರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ಸಂಯುಕ್ತ ಕಿಸಾನ್‌ ಮೊರ್ಚಾ ರೈತ ಸಂಘರ್ಷ ಸಮನ್ವಯ ಸಮಿತಿ ಕರೆಯ ಮೇರೆಗೆ ವಿಜಯಪುರ ರೈಲು ನಿಲ್ದಾಣಕ್ಕೆ ಬೆಂಗಳೂರಿನಿಂದ ಬರುತ್ತಿರುವ ಬಸವ ಎಕ್ಸ್‌ಪ್ರೆಸ್ ರೈಲು ತಡೆಯಲುಪ್ರತಿಭಟನಾಕಾರರು ನಿಲ್ದಾಣದ ಒಳಗಡೆ ನುಗ್ಗುತ್ತಿರುವಾಗ ಪೊಲೀಸರು ಅಡ್ಡಗಟ್ಟಿ ರೈತರನ್ನು ತಡೆಯಲು ಯತ್ನಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಮತ್ತು ನೂಕುನುಗ್ಗಲು ನಡೆಯಿತು.

ರೈಲು ನಿಲ್ದಾಣದ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಭೀಮಶಿ ಕಲಾದಗಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ರೈತರ ವಿರುದ್ಧ ಮೂರು ಕರಾಳ ಕಾನೂನುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರದ ಕೃಷಿ ಕಾನೂನುಗಳು ಜನ ಸಾಮನ್ಯರಿಗೆ ಬಿಸಿ ತಟ್ಟುವ ಕಾನೂನುಗಳಾಗಿವೆ. ಈಗಾಗಲೆ ಬೆಲೆ ಏರಿಕೆಯಿಂದ ಜನ ಕಷ್ಟ ಪಡುತ್ತಿದ್ದಾರೆ. ಮುಂದೆ ಇದಕ್ಕಿಂತ ಕಷ್ಟದ ದಿನಗಳು ಬರಲಿವೆ ಎಂದರು.

ಆರ್‌ಕೆಎಸ್ ರಾಜ್ಯ ಉಪಾಧ್ಯಕ್ಷ ಬಿ. ಭಗವಾನರೆಡ್ಡಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಪಾದಸೇವೆ ಮಾಡಿತ್ತಾ ಕಾರ್ಪೊರೇಟ್ ಕಂಪನಿಗಳ, ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿ ಈ ದೇಶದ ಜನಸಾಮನ್ಯರನ್ನು ಬೀದಿಗೆ ತಳ್ಳುತ್ತಿದೆ ಎಂದು ಕಿಡಿಕಾರಿದರು.

ಗುತ್ತಿಗೆ ಕೃಷಿಯ ಹೆಸರಿನಲ್ಲಿ ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ. ಕೃಷಿಯನ್ನು ಖಾಸಗಿ ಬೃಹತ್ ಕಂಪನಿಗಳ ನಿಯಂತ್ರಣಕ್ಕೆ ತರಲಾಗುತ್ತದೆ. ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ನಡೆದಾಡುವ ಹೆಣಗಳಾಗಿ ಬಿಡುತ್ತಾರೆ ಎಂದರು.

ಬಂಡವಾಳಶಾಹಿ ಉದ್ಯಮಿಗಳು ರೈತರ ಭೂಮಿಯನ್ನು ಖರೀದಿ ಮಾಡಿ ಸಮಸ್ತ ಸಂಪತ್ತಿನ ಒಡೆಯರಾಗುತ್ತಾರೆ. ಹಳ್ಳಿ-ಹಳ್ಳಿಗಳಲ್ಲಿರುವ ಕೃಷಿ ಸಂಪತ್ತನ್ನು ರೈತರಿಂದ ಕಿತ್ತು ಶ್ರೀಮಂತ ಬಂಡವಾಳಿಗರಿಗೆ ಧಾರೆಯೆರೆಯಲು ಸರ್ಕಾರ ಈ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಕೆಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ ಸರ್ಕಾರವು ಹತ್ತಾರೂ ಸುತ್ತು ರೈತ ನಾಯಕರೊಂದಿಗೆ ಕಾಟಾಚಾರದ ಮಾತುಕತೆ ನಡೆಸಿದೆ. ಆದರೆ, ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡಲು ತಯಾರಿಲ್ಲ ಎಂದರು.

ಅಕ್ರಂ ಮಾಶ್ಯಾಳಕರ ಮಾತನಾಡಿ, ಪ್ರತಿಯೊಬ್ಬ ಅನ್ನ ತಿನ್ನುವ ನಾಗರಿಕ ರೈತರ ಹೋರಾಟ ಬೆಂಬಲಿಸಬೇಕಾಗಿದೆ ಎಂದು ಮನವಿ ಮಾಡಿದರು.

ರೈಲು ತಡೆ ಚಳವಳಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ರೈತ ಕೃಷಿಕಾರ್ಮಿಕರ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರಗತಿಪರ ಸಂಘಟನೆಗಳ ವೇದಿಕೆ, ಎಐಡಿವೈಒ, ಟಿಪ್ಪು ಕ್ರಾಂತಿ ಸೇನೆ, ಜನವಾದಿ ಮಹಿಳಾ ಸಂಘ, ಜನಶಕ್ತಿ, ಸಿಐಟಿಯು, ಎಐಯುಟಿಯುಸಿ, ಎಐಂಎಸ್‍ಎಸ್ ಸಂಘಟನೆಗಳ ಮುಖಂಡರಾದ ಮಲ್ಲಿಕಾರ್ಜುನ್ ಎಚ್.ಟಿ. ಸದಾನಂದ ಮೋದಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್ ಟಿ, ಅಣ್ಣಾರಾಯ ಈಳಗೇರ, ಲಕ್ಷಣ ಹಂದ್ರಾಳ, ಸುನೀಲ ಸಿದ್ರಾಮಶೆಟ್ಟಿ, ದಸ್ತಗೀರ್ ಉಕ್ಕಲಿ ಸಂಗಪ್ಪ ಕಪಾಳೆ, ರೇಣುಕಾ, ಪವಿತ್ರಾ, ತಿಪರಾಯ ಹತ್ತರಕಿ, ಮಹಾದೇವ ಲಿಗಾಡೆ, ಆಕಾಶ, ಪ್ರಶಾಂತ್,ರಿಜ್ವಾನ್ ಮುಲ್ಲಾ, ಸುರೇಖಾ ರಜಪೂತ, ಸುಜಾತಾ ಶಿಂಧೆ ಭಾಗವಹಿಸಿದ್ದರು.

***

ಕೇಂದ್ರ ಸರ್ಕಾರ ರೈತರ ಹೋರಾಟವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಹೋರಾಟದ ದಿಕ್ಕು ತಪ್ಪಿಸಲು ಎಲ್ಲ ಕುತಂತ್ರಗಳನ್ನು ಮಾಡುತ್ತಿದೆ

- ಬಾಳು ಜೇವೂರ, ಜಿಲ್ಲಾ ಸಂಚಾಲಕ,ಆರ್‌ಕೆಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT