ಮಂಗಳವಾರ, ನವೆಂಬರ್ 24, 2020
22 °C
ಬೆಳೆ ಹಾನಿ; ಡ್ರೋಣ್‌ ಮೂಲಕ ಏರಿಯಲ್‌ ಸರ್ವೆ: ಜಿಲ್ಲಾಧಿಕಾರಿ ಸುನೀಲ್‌ ಕುಮಾರ್‌

ಮತ್ತೆ ಮಳೆ ಮುನ್ನೆಚ್ಚರಿಕೆ; ವಿಜಯಪುರದಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತವಾಗಿರುವುದರಿಂದ ಜಿಲ್ಲೆಯಲ್ಲಿ ಅ.20ರಂದು ಮತ್ತೆ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಳೆದ ವಾರ ಸುರಿದ ಮಳೆಯಿಂದ ಉಂಟಾದ ಪ್ರವಾಹದಿಂದ ಈಗಾಗಲೇ ಸಮಸ್ಯೆ ಎದುರಿಸಿರುವ ಜಿಲ್ಲೆಯ ಭೀಮಾ ಮತ್ತು ಡೋಣಿ ನದಿ ತೀರದ ಜನತೆ, ಅದರಲ್ಲೂ ರೈತಾಪಿ ವರ್ಗ ಮಳೆ ಮುನ್ಸೂಚನೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಏರಿಯಲ್‌ ಸರ್ವೆ: ಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ ಈಗಾಗಲೇ ಆಗಿರುವ ಹಾನಿ ತಿಳಿಯಲು ಡ್ರೋಣ್‌ ಮೂಲಕ ಏರಿಯಲ್‌ ಸರ್ವೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ 16 ಸಿಬ್ಬಂದಿ ಇರುವ ಎರಡು ಎನ್‌ಡಿಆರ್‌ಎಫ್‌ ತಂಡಗಳು ಸಿಂದಗಿ ತಾಲ್ಲೂಕಿನ ಭೀಮಾ ನದಿ ತೀರ ಪ್ರದೇಶದಲ್ಲಿ ತಲೆದೋರಿರುವ ಪ್ರವಾಹದಲ್ಲಿ ಸಿಲುಕಿರುವ ಜನ, ಜಾನುವಾರು ರಕ್ಷಣೆಯ ಕಾರ್ಯಾಚರಣೆಯಲ್ಲಿ ನಿರತವಾಗಿದ್ದಾರೆ. 

ಬೆಳಗಾವಿಯ ಮರಾಠಾ ಲೈಫ್‌ ಇನ್ಫೆಂಟರಿಯ 80 ಯೋಧರನ್ನು ಒಳಗೊಂಡ ಪ್ರವಾಹ ರೆಸ್ಕ್ಯೂ ತಂಡವೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಇವರ ಜೊತೆಗೆ 25 ಸಿಬ್ಬಂದಿಯನ್ನು ಒಳಗೊಂಡಿರುವ ಎಸ್‌ಡಿಆರ್‌ಎಫ್‌ ತಂಡವೂ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಸೋಮವಾರ ಸ್ವಲ್ಪ ಇಳಿಕೆಯಾಗಿದ್ದರೂ ಹೊಲ, ಮನೆಗಳಿಗೆ ನುಗ್ಗಿರುವ ನೀರು ಪೂರ್ಣವಾಗಿ ಖಾಲಿಯಾಗಿಲ್ಲ.  

ಸದ್ಯ ಜಿಲ್ಲೆಯ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ ಸೋಮವಾರ 327 ಮನೆಗಳು ಜಲಾವೃತವಾಗಿವೆ. ಜಲಾವೃತವಾಗಿರುವ ಮನೆಗಳಲ್ಲಿ ಇದ್ದ 121 ಜನರನ್ನು ರಕ್ಷಣೆ ಮಾಡಲಾಗಿದೆ. 1844 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಭೀಮಾ ನದಿ ತೀರದ ಚಡಣಚ, ಇಂಡಿ, ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸದ್ಯ 39 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 4431 ಜನರಿಗೆ ಆಶ್ರಯ ನೀಡಲಾಗಿದೆ ಎಂದು ಹೇಳಿದರು. 

ಅ.13ರಿಂದ 19ರ ವರೆಗೆ ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ 2445 ಮನೆಗಳಿಗೆ ಹಾನಿಯಾಗಿದೆ. 28 ಗ್ರಾಮಗಳ ವ್ಯಾಪ್ತಿಯ 2543 ಮನೆಗಳು ಜಲಾವೃತವಾಗಿವೆ. 1516 ಜನರನ್ನು ರಕ್ಷಣೆ ಮಾಡಲಾಗಿದೆ. 12,217 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಭೀಮಾ ನದಿ ಪ್ರವಾಹದಿಂದ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ರೈತ ಪಂಚಾಕ್ಷರಿ ಮಲ್ಲಪ್ಪ ಗುಬ್ಯಾಡ ಅವರ ಕಬ್ಬು ಸಂಪೂರ್ಣ ನೀರಿನಲ್ಲಿ ನಿಂತು ಹಾನಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು