ಸೋಮವಾರ, ಸೆಪ್ಟೆಂಬರ್ 20, 2021
21 °C

‘ಮಳೆ ನೀರು’ ನಿಲ್ದಾಣ!: ವಿಜಯಪುರ ನಗರ ರೈಲು ನಿಲ್ದಾಣದಲ್ಲಿ ವಿನೂತ ಪ್ರಯೋಗ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಗುಮ್ಮಟನಗರಿ‘ಯ ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ಇದು ಕೇವಲ ರೈಲು ನಿಲ್ದಾಣವಲ್ಲ; ಮಳೆ ನೀರು ನಿಲ್ದಾಣವಾಗಿ(ರೈನ್‌ ನಿಲ್ದಾಣ) ಗುರುತಿಸಿಕೊಂಡಿದೆ.

ಹೌದು,  ನಗರದ ರೈಲು ನಿಲ್ದಾಣದ ಚಾವಣಿ ಮೇಲೆ ಹಾಗೂ ಆವರಣದಲ್ಲಿ ಬೀಳುವ ಒಂದು ಹನಿ ಮಳೆ ನೀರೂ ವ್ಯರ್ಥವಾಗದಂತೆ ವೈಜ್ಞಾನಿಕವಾಗಿ ಕಾಪಿಡುವ, ಬಳಸುವ ಮೂಲಕ ಸ್ವಾಲಂಬನೆ ಜೊತೆಗೆ ಹಣದ ಉಳಿತಾಯವೂ ಸಾಧ್ಯವಾಗಿದೆ.

6937 ಚದರ ಮೀಟರ್ ಸುತ್ತಳತೆಯ ವಿಜಯಪುರ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ಸುರಿಯುವ ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿರುವುದರಿಂದ ವಾರ್ಷಿಕ 29,135,40 ಲೀಟರ್ ನೀರು ಸಂಗ್ರಹವಾಗುತ್ತಿದೆ. ಈ ಮಳೆ ನೀರನ್ನು ರೈಲು ನಿಲ್ದಾಣದ ಸ್ವಚ್ಛತೆಗೆ ಹಾಗೂ ಉದ್ಯಾನ, ಗಿಡಮರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಿಲ್ದಾಣದ ಆಸುಪಾಸು ಅಂತರ್ಜಲ ಮಟ್ಟವೂ ಏರಿಕೆಯಾಗಿದೆ ಎನ್ನುತ್ತಾರೆ ಹುಬ್ಬಳಿ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗ್ಡೆ.

ಅಷ್ಟೇ ಅಲ್ಲದೇ, ನೈರುತ್ಯ ರೈಲ್ವೆ ಇಲಾಖೆಯು ವಿಜಯಪುರ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಪಾವತಿಸುತ್ತಿರುವ ನೀರಿನ ಶುಲ್ಕದಲ್ಲಿ ₹ 87,406 ಉಳಿತಾಯವಾಗಿದೆ ಎನ್ನುತ್ತಾರೆ ಅನೀಶ್‌ ಹೆಗ್ಡೆ.

ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಮಳೆಯಾದಾಗ ಹರಿದುಬರುವ ನೀರಿನ ಸಂಗ್ರಹಕ್ಕಾಗಿ (6 ಮೀಟರ್ X 3.25 ಮೀಟರ್‌ X1.70 ಮೀ) ಗುಂಡಿಯೊಂದನ್ನು ನಿರ್ಮಿಸಲಾಗಿದೆ. ಈ ಗುಂಡಿಗೆ ಮಳೆ ನೀರಿನೊಂದಿಗೆ ತೇಲಿಕೊಂಡು ಬರುವ ತ್ಯಾಜ್ಯ, ಮಣ್ಣು ಗುಂಡಿಯೊಳಗೆ ಹೋಗದಂತೆ ತಡೆಯಲು ಅಲ್ಲಲ್ಲಿ ಜಾಲರಿ ವ ್ಯವಸ್ಥೆ ಮಾಡಲಾಗಿದೆ. ಅಲ್ಲದೇ,  150 ಮೀಟರ್‌ ಆಳದ ಕೊಳವೆಬಾವಿಯಲ್ಲಿ ಮಳೆ ನೀರು ಇಂಗಲು ವ್ಯವಸ್ಥೆ ಮಾಡಲಾಗಿದೆ.‌‌

ಕಸ, ಕಡ್ಡಿ, ಮಣ್ಣು ಈ ಕೊಳವೆಬಾವಿಯೊಳಗೆ ಹೋಗದಂತೆಯೂ ಜಾಲರಿ ಅಳವಡಿಸಲಾಗಿದೆ. ಈ ಕೊಳವೆಬಾವಿ ಮತ್ತು ಗುಂಡಿಯ ಬಳಿ ಜಾನುವಾರು ಸೇರಿದಂತೆ ಜನರೂ ಬರದಂತೆ ತಪ್ಪಿಸಲು ಸುತ್ತಲೂ ತಂತಿಬೇಲಿ ಅಳವಡಿಸಲಾಗಿದೆ.

ಬರದ ನಾಡಿನ ರೈಲು ನಿಲ್ದಾಣ ಇದೀಗ ನೀರು ನಿಲ್ದಾಣದ ಖ್ಯಾತಿ ಗಳಿಸಿದೆ.

****

ರೈಲು ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿರುವುದರಿಂದ ನಿಲ್ದಾಣದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಜೊತೆಗೆ ರೈಲ್ವೆಗೆ ಹಣದ ಉಳಿತಾಯವೂ ಆಗಿದೆ

–ಅನೀಶ್ ಹೆಗ್ಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ 

ನೈರುತ್ಯ ರೈಲ್ವೆ, ಹುಬ್ಬಳಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು