ಸೋಮವಾರ, ಸೆಪ್ಟೆಂಬರ್ 26, 2022
24 °C
ಮಹಾರಾಷ್ಟ್ರ ಮುಖ್ಯಮಂತ್ರಿಯಿಂದ ಶ್ಲಾಘನೆ: ಬಿಜೆಪಿ ಮುಖಂಡ ಉಮೇಶ ಕೋಳಕೂರ

ಜಲಾಶಯ ನಿರ್ವಹಣೆ: ಕಾರಜೋಳ ಕಾರ್ಯಕ್ಕೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭಾರೀ ಮಳೆಯಾದರೂ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ತಡೆಯುವಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಇಲಾಖೆಯ ಅಧಿಕಾರಿಗಳು ಯೋಜಿತವಾಗಿ ಕಾರ್ಯನಿರ್ವಹಣೆ ಮಾಡಿರುವುದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಪ್ರಶಂಸೆಗೆ ಕಾರಣವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಉಮೇಶ ಕೋಳಕೂರ ತಿಳಿಸಿದರು. 

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಉಂಟಾಗುವ ನೆರೆಹಾವಳಿಗೆ ಆಲಮಟ್ಟಿ ಜಲಾಶಯದ ನೀರು ನಿರ್ವಹಣೆಯೇ
ಕಾರಣ ಎಂಬ ಆರೋಪದಿಂದ ರಾಜ್ಯವನ್ನು ಮುಕ್ತಗೊಳಿಸುವಲ್ಲಿ ಕಾರಜೋಳ ಅವರ ಕಾರ್ಯವೈಕರಿ ಶ್ಲಾಘನೀಯ ಎಂದರು. 

ಈ ಬಾರಿ ಭಾರೀ ಮಳೆಯಾಗಿದ್ದರೂ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆಯಲ್ಲಿ ಜಲಸಂಪನ್ಮೂಲ ಸಚಿವರು, ಅಧಿಕಾರಿಗಳು ಯೋಜನಾ ಬದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಸ್ವತಃ ಮಹಾರಾಷ್ಟ್ರ ಮುಖ್ಯಮಂತ್ರಿಯೇ ಕೊಲ್ಹಾಪುರದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಮತ್ತಿತರ ಕಡೆಗಳಲ್ಲಿ ಪ್ರತಿ ವರ್ಷ ಉಂಟಾಗುವ ಪ್ರವಾಹಕ್ಕೆ ಆಲಮಟ್ಟಿಯಲ್ಲಿ ಸಂಗ್ರಹವಾಗುವ ನೀರು ಕಾರಣವಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ನೀರಾವರಿ ತಜ್ಞರ ಸಮಿತಿಯು ಕಳೆದ ವರ್ಷವಷ್ಟೇ ವರದಿ ನೀಡಿತ್ತು. ಈಗ ಅಲ್ಲಿಯ
ಮುಖ್ಯಮಂತ್ರಿಗಳೇ ಸಚಿವ ಕಾರಜೋಳ ಮತ್ತು ಆಲಮಟ್ಟಿ ಅಧಿಕಾರಿಗಳ ಕಾರ್ಯನಿರ್ವಹಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಗಮನಾರ್ಹವಾಗಿದೆ ಎಂದರು. 

ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ಪ್ರವಾಹ ಪರಿಸ್ಥಿತಿಯ ವಾಸ್ತವ ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದು ಕಾರಜೋಳ ಅವರ ಯೋಜಿತ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ ಎಂದರು. 

ರಾಜ್ಯದ ಇತರೆ ಜಲಾಶಯಗಳ ವ್ಯಾಪ್ತಿಯಲ್ಲೂ ಈ ಬಾರಿ ಪ್ರವಾಹ ಪರಿಸ್ಥಿತಿ ತಲೆದೋರದಂತೆ ಕಾರಜೋಳ ಅಗತ್ಯ ಕ್ರಮಕೈಗೊಂಡಿರುವುದಕ್ಕೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಮಾತನಾಡಿ, ಕಾರಜೋಳ ಅವರು ಜಲಸಂಪನ್ಮೂಲ ಸಚಿವರಾದ ಬಳಿಕ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ನೀರು ಹರಿಯುತ್ತಿದೆ. ರೈತರಿಗೆ, ಜನರಿಗೆ ಬೇಸಿಗೆಯ ಅನುಭವ ಆಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಟ್ಟ ನಿರ್ವಹಣೆ ಪರಿಣಾಮ 2017ರಲ್ಲಿ ಆಲಮಟ್ಟಿ ಜಲಾಶಯ ಬರಿದಾಗಿ ವಿಜಯಪುರ ನಗರಕ್ಕೆ ಕುಡಿಯವ ನೀರಿನ ಕೊರತೆ ಉಂಟಾಗಿತ್ತು. ಆದರೆ, ಈಗ ಕಾರಜೋಳ ಅವರಿಂದಾಗಿ ಪರಿಸ್ಥಿತಿ ಸಂಪೂರ್ಣ ಸುಧಾರಣೆಯಾಗಿದೆ ಎಂದು ಹೇಳಿದರು. 

ಜಿ.ಪಂ. ಮಾಜಿ ಸದಸ್ಯರಾದ ನವೀನ್‌ ಅರಕೇರಿ, ಭೀಮನಗೌಡ ಬಿರಾದಾರ, ಮಲ್ಲಿಕಾರ್ಜುನ ಕನ್ನೂರು ಮತ್ತು ಬಿಜೆಪಿ ಮಾಧ್ಯಮ ವಕ್ತಾರ ವಿಜಯ್‌ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

*****

ಡೋಣಿ ಪ್ರವಾಹ ತಡೆಗೆ ಕಾರಜೋಳ ಕ್ರಮ 

ವಿಜಯಪುರ: ಜಿಲ್ಲೆಯಲ್ಲಿ ಪ್ರತಿ ವರ್ಷ ಪ್ರವಾಹಕ್ಕೆ ಕಾರಣವಾಗುತ್ತಿರುವ ಡೋಣಿ ನದಿಯ ಹೂಳು ತೆಗೆದು, ಅಕ್ಕಪಕ್ಕದ ಜಾಲಿ ಗಿಡಗಳನ್ನು ಸ್ವಚ್ಛಗೊಳಿಸಿ ಯಾವುದೇ ಅಡೆತಡೆ ಇಲ್ಲದಂತೆ ನದಿ ಸರಾಗವಾಗಿ ಹರಿಯುವಂತೆ ಮಾಡಲು ಜಲಸಂಪನ್ಮೂಲ ಸಚಿವ ಕಾರಜೋಳ ಅವರು ಇಲಾಖೆಯ ತಜ್ಞರೊಂದಿಗೆ ಈಗಾಗಲೇ ಚರ್ಚಿಸಿ ಅಗತ್ಯ ಯೋಜನೆ ರೂಪಿಸಿದ್ದಾರೆ ಎಂದು ಉಮೇಶ ಕೋಳಕೂರ ತಿಳಿಸಿದರು.

ಈ ಹಿಂದೆ ಐದು ವರ್ಷ ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದವರೂ ಡೋಣಿ ಪುನರುಜ್ಜೀವನಕ್ಕೆ ಕಿಂಚಿತ್ತೂ ಆದ್ಯತೆ ನೀಡಲಿಲ್ಲ. ಇದೀಗ ಕೋಶಿ ಮಾದರಿ ಡೋಣಿ ನದಿಯಲ್ಲಿ ಪ್ರವಾಹ ತಡೆಗೆ ಕ್ರಮಕೈಗೊಳ್ಳಬೇಕು ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ ವಿರುದ್ಧ ಆರೋಪ ಮಾಡಿದರು.

ಡೋಣಿ ಪ್ರವಾಹಕ್ಕೆ ಪ್ರತಿ ವರ್ಷ ತುತ್ತಾಗುತ್ತಿರುವ ನದಿ ತೀರದ ನಮ್ಮ ರೈತರೇ ಸಾಕಷ್ಟು ಅನುಭವ ಉಳ್ಳವರಿದ್ದಾರೆ. ಅವರ ಸಲಹೆ ಹಾಗೂ ಜಲಸಂಪನ್ಮೂಲ ಇಲಾಖೆಯ ತಜ್ಞರ ಸಲಹೆ ಪರಿಗಣಿಸಿ ಕಾರಜೋಳ ಅವರು ಡೋಣಿ ನದಿ ಪ್ರವಾಹ ತಡೆಗೆ ಅಗತ್ಯ ಕ್ರಮಕೈಗೊಳ್ಳಲಿದ್ದಾರೆ ಎಂದರು.

***

ಕಾರಜೋಳ ಅವರ  ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರವಾಹ ನಿರ್ವಹಣೆ ಮಾಡಿರುವುದು ಏಕನಾಥ ಶಿಂಧೆ ಅವರ ಪ್ರಶಂಸೆಗೆ ಕಾರಣವಾಗಿದೆ

–ಉಮೇಶ ಕೋಳಕೂರ, ಬಿಜೆಪಿ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು