ವಿಜಯಪುರ: ಕಳೆದ 25 ವರ್ಷಗಳಿಂದ ಶಿವಾನಂದ ರಾಮು ಹೂಗಾರ ಅವರು ವಿಜಯಪುರದ ವಿವಿಧ ಬಡಾವಣೆಗಳಲ್ಲಿ ಪ್ರಜಾವಾಣಿ ಸೇರಿದಂತೆ ವಿವಿಧ ಪತ್ರಿಕೆಗಳನ್ನು ವಿತರಿಸುತ್ತಿದ್ದಾರೆ.
ಬೆಳಿಗ್ಗೆ 4ಕ್ಕೆ ತಮ್ಮ ವಿತರಣಾ ನಾಲ್ಕೈದು ಹುಡುಗರೊಂದಿಗೆ ಕೆಲಸವನ್ನು ಆರಂಭಿಸುವ ಇವರು ಎಂಟು ಗಂಟೆವರೆಗೆ ಬಡಾವಣೆಯ ವಿವಿಧ ಶಾಲಾ ಕಾಲೇಜು, ಮನೆ, ಕಚೇರಿ, ಬ್ಯಾಂಕುಗಳಿಗೆ ಪತ್ರಿಕೆ ಹಂಚಿಕೆ ಮಾಡುತ್ತಾರೆ.
ಮಳೆ, ಚಳಿ ಎನ್ನದೇ ಇವರು ನಿರಂತರವಾಗಿ ವಿತರಣಾ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕೋವಿಡ್ ಸಮಯದಲ್ಲೂ ಪತ್ರಿಕೆ ವಿತರಣೆಯನ್ನು ತಪ್ಪಿಸಿಲ್ಲ. ಕೆಲವೊಮ್ಮೆ ಹುಡುಗರು ಕೈಕೊಟ್ಟಾಗ ಇವರೇ ಎಲ್ಲ ಓದುಗರಿಗೆ ಪತ್ರಿಕೆ ತಲುಪಿಸುತ್ತಾರೆ. ಮೈಕೊರೆಯುವ ಚಳಿ ಇದ್ದರೂ ಜರ್ಕಿನ್ ಹಾಕಿಕೊಂಡು ತಮ್ಮ ಕೆಲಸವನ್ನು ಕರ್ತವ್ಯ ಎಂಬಂತೆ ನಡೆಸಿಕೊಂಡು ಬರುತ್ತಿದ್ದಾರೆ.
ನಮ್ಮ ಕಷ್ಟದ ಸಮಯದಲ್ಲಿ ಪತ್ರಿಕೆ ವಿತರಣೆ ಕೈ ಹಿಡದಿದೆ. ನಮ್ಮ ಅಣ್ಣ ಮೊದಲು ಪತ್ರಿಕೆ ವಿತರಣೆ ಮಾಡುತ್ತಿರುವವಾಗ ನಾವು ಅವರಿಗೆ ಸಹಾಯ ಮಾಡುತ್ತಿದೆ. ನಂತರ ನಮ್ಮ ಅಣ್ಣನಿಗೆ ಸರ್ಕಾರಿ ಉದ್ಯೋಗ ಅರಿಸಿ ಬಂದ ನಂತರ ಪತ್ರಿಕೆ ವಿತರಣೆಯನ್ನು ನಾಲ್ಕೈದು ಹುಡುಗರೊಂದಿಗೆ ಮುನ್ನಡಿಸಿಕೊಂಡು ಹೊರಟಿದ್ದೇನೆ ಎನ್ನುತ್ತಾರೆ ಶಿವಾನಂದ.