ವಿಜಯಪುರ: ಫಲ–ಪುಷ್ಪದಲ್ಲಿ ಕಂಡ ಸಿದ್ಧೇಶ್ವರ ಶ್ರೀ

ವಿಜಯಪುರ: ನಗರದಲ್ಲಿ ತೋಟಗಾರಿಕಾ ಇಲಾಖೆಯಿಂದ ಏರ್ಪಡಿಸಿರುವ ಫಲ–ಪುಷ್ಪ ಪ್ರದರ್ಶನದಲ್ಲಿ ಜ್ಞಾನ ಯೋಗಾಶ್ರಮ ಹಾಗೂ ಸಿದ್ದೇಶ್ವರ ಶ್ರೀಗಳ ಅನಾವರಣದ ದೃಶ್ಯಗಳು ನೋಡುಗರ ಕಣ್ತುಂಬುತ್ತಿವೆ.
ಫಲ–ಪುಷ್ಪಗಳಲ್ಲಿ ಮೈದಳೆದಿರುವ ಸಿದ್ಧೇಶ್ವರ ಶ್ರೀಗಳ ಚಿತ್ರಕಥೆಗಳು ನೋಡುಗರನ್ನು ಭಕ್ತಿಭಾವದಲ್ಲಿ ತೇಲಿಸುತ್ತಿವೆ. ನೋಡುಗರನ್ನು ಒಂದು ನಿಮಿಷ ನಿಂತು ಕೈ ಮುಗಿದು ಮುಂದೆ ಸಾಗುವಂತೆ ಮಾಡಿದೆ.
ಶ್ರೀಗಳ ನುಡಿಮುತ್ತು:
ಸಿದ್ದೇಶ್ವರ ಶ್ರೀಗಳ ಬಾಲ್ಯ ಜೀವನ, ಧ್ಯಾನ, ಸೈಕಲ್ ಸವಾರಿ, ಗುರು ಮಲ್ಲಿಕಾರ್ಜುನ ಶಿವಯೋಗಿಗಳೊಂದಿಗೆ, ಗಿಡಗಳಿಗೆ ನೀರುಣಿಸುವ ಅಪರೂಪದ ಚಿತ್ರಗಳನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಟ್ಟಿಕೊಡಲಾಗಿದೆ.
‘ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲ ಹೇಳಿ ಆಗಿದೆ, ಉಳಿದಿರುವುದು ಆಚರಣೆ ಮಾತ್ರ’ ‘ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತದೆ. ಆದರೆ, ಅದು ಕೊಳಕಾಗುವುದಿಲ್ಲ’ ‘ಸಾವಿನವರೆಗೂ ಕೆತ್ತಿದ್ದರೂ, ಪರಿಪೂರ್ಣವಾಗದ ಏಕೈಕ ಶಿಲೆ ಮನುಷ್ಯ’ ಇಂತಹ ಹತ್ತಾರು ಸಿದ್ಧೇಶ್ವರ ಶ್ರೀಗಳ ನುಡಿಮುತ್ತುಗಳನ್ನು ಜನರು ಪಠಣ ಮಾಡುವ ದೃಶ್ಯ ಕಂಡುಬರುತ್ತಿವೆ.
ಪ್ರಣವ ಮಂಟಪ:
ಜ್ಞಾನಯೋಗಾಶ್ರಮದ ಪ್ರಣವ ಮಂಟಪ ಸಂಪೂರ್ಣ ಕೆಂಪು ಮತ್ತು ಬಿಳಿ ಗುಲಾಬಿಯಲ್ಲಿ ನಿರ್ಮಿಸಲಾಗಿದೆ. ವೇದಾಂತ ಕೇಸರಿ ಪ್ರಭುಲಿಂಗ ಶಿವಯೋಗಿಗಳ ಮೂರ್ತಿ ನಿರ್ಮಿಸಿ ಹೂವುಗಳಿಂದ ಅಲಂಕೃತಗೊಳಿಸಿದ್ದು, ಸಂತನ ನಡೆ ಗುರುವಿನ ಕಡೆ ಎನ್ನುವ ಸಂದೇಶ ಬಿತ್ತರಿಸಲಾಗಿದೆ.
ಕಲ್ಲಂಗಡಿಯಲ್ಲಿ ಗುರುಶಿಷ್ಯರು:
ಕಲ್ಲಂಗಡಿ ಹಣ್ಣಿನಲ್ಲಿ ಗುರು ಪ್ರಭುಲಿಂಗ ಸ್ವಾಮಿಜಿ ಹಾಗೂ ಸಿದ್ದೇಶ್ವರ ಶ್ರೀಗಳ ಸೈಕಲ್ ಪ್ರಯಾಣ, ಧ್ಯಾನ, ಪ್ರವಚನ ನೀಡುತ್ತಿರುವ ದೃಶ್ಯ, ಗಾಂಧೀಜಿ, ಅಂಬೇಡ್ಕರ್, ನೆಹರು, ಚಂದ್ರಶೇಖರ್ ಆಜಾದ್ ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳ ಚಿತ್ರಣ ನೀಡುಗರನ್ನು ಮೂಕವಿಸ್ಮಿತಗೊಳಿಸುತ್ತಿವೆ.
ಹೃದಯ, ಭಾರತ:
ಫಲಪುಷ್ಪ ಮೇಳಕ್ಕೆ ಆಗಮಿಸುವ ಸಾರ್ವನಿಕರಿಗೆ ಪೋಟೊ ಕ್ಲಿಕ್ಕಿಸಿಕೊಳ್ಳಲು ಗುಲಾಬಿ ಹೂವುಗಳಿಂದ ನಿರ್ಮಾಣ ಮಾಡಲಾದ ಹೃದಯ ಆಕೃತಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಾರುವ ಹೂಗಳಿಂದ ನಿರ್ಮಾಣವಾದ ಭಾರತ ನಕ್ಷೆ, ಜೋಡೆತ್ತುಗಳ ಜೊತೆ ಎತ್ತಿನ ಬಂಡಿ ಓಡಿಸುತ್ತಿರುವ ರೈತ, ಅಲ್ಲಲ್ಲಿ ಹೂವುಗಳಿಂದ ನಿರ್ಮಿತವಾದ ಮೂರ್ತಿಗಳು ಮೇಳಕ್ಕೆ ಜನರನ್ನು ಕೈಬೀಸಿ ಕರೆಯುತ್ತಿವೆ.
ಹಣ್ಣುಗಳ ಪ್ರದರ್ಶನ:
ಕುಂಬಳಕಾಯಿ, ದ್ರಾಕ್ಷಿ, ಲಿಂಬೆ, ಚಿಕ್ಕು, ಪಪ್ಪಾಯ, ಈರುಳ್ಳಿ, ಬಾಳೆಹಣ್ಣು, ಪೇರಲೆ, ತೆಂಗಿನಕಾಯಿಗಳ ಪ್ರದರ್ಶನ ಕೂಡ ಗಮನ ಸೆಳೆಯುತ್ತಿದೆ. ಜೊತೆಗೆ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.
****
ಫಲಪುಷ್ಪ ಮೇಳ ರೈತರಿಗೆ ಮಾಹಿತಿ ನೀಡುವುದರ ಜೊತೆಗೆ ಶ್ರೀಗಳ ಅಪರೂಪದ ಚಿತ್ರಗಳ ಪ್ರದರ್ಶನ ಸಂತಸ ತಂದಿದೆ
–ಶ್ರೀಮಂತ.ಸಿ, ರೈತ
ಅರ್ಜುಣಗಿ
****
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿಯನ್ನು ಮೇಳದಲ್ಲಿ ರೈತರಿಗೆ ನೀಡುತ್ತಿರುವುದು ಅನುಕೂಲವಾಗಿದೆ
–ಚಂದ್ರಕಾಂತ ಪವಾರ, ಪ್ರೇಕ್ಷಕ
ವಿಜಯಪುರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.