ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ‘ಆಕಾಶವಾಣಿ’ಗೆ ರಜತ ಸಂಭ್ರಮ

ಬಯಲುಸೀಮೆಯ ಜನರ ಬಾಂದನಿ
Last Updated 17 ಸೆಪ್ಟೆಂಬರ್ 2022, 8:35 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ, ಬಾಗಲಕೋಟೆ ಒಳಗೊಂಡ ಅವಿಭಜಿತ ಜಿಲ್ಲೆಯ ಜನತೆಯ ಬಹು ವರ್ಷಗಳ ನಿರೀಕ್ಷೆ, ಹಂಬಲ, ಹೋರಾಟದ ಫಲವಾಗಿ 1997ರ ಸೆಪ್ಟೆಂಬರ್ 18 ರಂದು ಜನ್ಮ ತಳೆದ ‘ವಿಜಯಪುರ ಆಕಾಶವಾಣಿ ಕೇಂದ್ರ’ಕ್ಕೆ ಇಂದು ರಜತ ಮಹೋತ್ಸವದ ಸಂಭ್ರಮ.

ಅಂದಿನ ರಾಜ್ಯದ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಕೇಂದ್ರವನ್ನು ಉದ್ಘಾಟಿಸಿದರು. ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ, ಕಂದಾಯ ಸಚಿವರಾದ್ದ ರಮೇಶ ಜಿಗಜಿಣಗಿ, ಅನಂತನಾಗ್‌, ಡಿ.ಡಿ.ಕೆ. ಬೆಂಗಳೂರಿನ ಎನ್.ಜಿ. ಶ್ರೀನಿವಾಸ್ ಮುಂತಾದವರು ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಅಂದಿನಿಂದ ಆಕಾಶವಾಣಿ ತನ್ನ ಮೂಲ ಧ್ಯೇಯವಾದ ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಳಿಗೆ ಅನುಗುಣವಾದ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಬರುತ್ತಿದೆ.

ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 11 ರ ವರೆಗೆ ಸುಮಾರು 17 ಗಂಟೆಗಳ ಪ್ರಸಾರದಲ್ಲಿ ಬಹುತೇಕ ಪಾಲು ಬೆಂಗಳೂರು ಹಾಗೂ ಮುಂಬೈ ವಿವಿಧ ಭಾರತಿ ಕೇಂದ್ರಗಳದ್ದಾಗಿದ್ದರೆ, ಸುಮಾರು 4 ತಾಸುಗಳಷ್ಟು ಕಾರ್ಯಕ್ರಮಗಳು ಸ್ಥಳೀಯ, ಸಂಸ್ಕೃತಿ, ಪರಂಪರೆ, ಇತಿಹಾಸ, ಸಂಗೀತ, ಸಾಹಿತ್ಯ, ಕೃಷಿ, ಮುಂತಾದ ಕಾರ್ಯಕ್ರಮಗಳ ಪ್ರಸಾರಕ್ಕೆ ಮೀಸಲಾಗಿವೆ.

ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಜನರ ಆಪ್ತ ಮಿತ್ರನಾಯಿತು. ಸ್ಫಟಿಕದಂತೆ ಸ್ವಚ್ಛ, ಶುದ್ಧ ಭಾಷೆಯ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸಾರದ ಮೂಲಕ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರ ಮನೆ, ಮನಗಳಿಗೆ ತಲುಪುತ್ತಿದೆ.

6 ಕಿಲೋ ವ್ಯಾಟ್ ಸಾಮರ್ಥ್ಯದಿಂದ ಆರಂಭವಾದ ಪ್ರಸಾರ ಈಗ ಮತ್ತಷ್ಟು ಶಕ್ತಿಶಾಲಿಯಾಗಿದ್ದು, ಅದು 10 ಕಿಲೋ ವ್ಯಾಟ್‌ಗೆಏರಿದೆ. 100 ಕಿ.ಮೀ ಇದ್ದ ವ್ಯಾಪ್ತಿ ಈಗ 200 ಕಿ.ಮೀ ಆಗಿದೆ.ಪ್ರತಿ ದಿನ ಅಂದಾಜು 15 ಲಕ್ಷ ಜನರಿಗೆ ಈ ಕೇಂದ್ರ ಪ್ರಸಾರ ಸೇವೆಯನ್ನು ಒದಗಿಸುತ್ತದೆ.

ಚಿಂತನ, ಭಕ್ತಿಗೀತೆ, ಚಿತ್ರಗೀತೆ, ವಾಟ್ಸ್‌ ಆ್ಯಪ್‌ ಮೆಚ್ಚಿನ ಹಾಡು, ಜನಪದ ಹಾಡು, ಸುದ್ದಿ, ರೂಪಕ, ನಾಟಕ, ಸಂದರ್ಶನ, ಭಾಷಣ, ನೇರ ಪ್ರಸಾರ, ಫೋನ್ – ಇನ್ ಕಾರ್ಯಕ್ರಮ, ಕಿಸಾನ್‌ವಾಣಿ, ಆರೋಗ್ಯ, ಯುವಕಾರಂಜಿ, ಯುವವಾಣಿ, ಬಾನುಲಿ ವರದಿ, ಚರ್ಚೆ, ಕವಿತೆ ವಾಚನ, ಸ್ವಾತಂತ್ರ್ಯ ಹೋರಾಟ ಹೆಜ್ಜೆಗಳು ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಕೇಂದ್ರದಿಂದ ಪ್ರತಿದಿನ ಪ್ರಸಾರವಾಗುತ್ತವೆ.

ಕಳೆದ ಕೆಲವು ವರ್ಷಗಳ ಹಿಂದೆ ರೇಡಿಯೊ ಸೆಟ್‌ ಕೇಳುಗರ ಸಂಖ್ಯೆ ಶೇ 54 ರಷ್ಟಿತ್ತು. ಆದರೆ, ಇದೀಗ ಮೊಬೈಲ್ ಫೋನ್‌ ಮೂಲಕ ಕೇಳುವ ಸೌಲಭ್ಯ ದೊರೆತಿರುವುದರಿಂದ ರೇಡಿಯೋ ಸೆಟ್ ಕೇಳುಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೊಬೈಲ್ ಮೂಲಕ ಕೇಳುವರ ಸಂಖ್ಯೆ ಶೇ 85 ರಷ್ಟಾಗಿದೆ.

‘ಡಿಜಿಟಲ್ ಕ್ರಾಂತಿ’ ಯ ಈ ಸಮಯದಲ್ಲಿNews On Air App ನಿಂದಾಗಿ ಶ್ರೋತೃಗಳು ವಿಜಯಪುರ ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ವಿಶ್ವದ ಯಾವುದೇ ಭಾಗದಲ್ಲಿಯೂ ಕೇಳಬಹುದಾಗಿದೆ.

25 ವರ್ಷಗಳಲ್ಲಿ ಅನೇಕ ಸೃಜನಶೀಲ ಹಾಗೂ ಕ್ರಿಯಾಶೀಲ ಕಾರ್ಯಕ್ರಮ, ತಾಂತ್ರಿಕ ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗ ದುಡಿದು ಈ ಕೇಂದ್ರವನ್ನು ಜನಸ್ನೇಹಿ ಹಾಗೂ ಜನಪರವಾಗಿಸಿದ್ದಾರೆ.

ವಿಜಯಪುರ ಆಕಾಶವಾಣಿ ಕೇಂದ್ರ ಸದ್ಯ ಸಿಬ್ಬಂದಿ ಕೊರತೆ, ತಾಂತ್ರಿಕ ಸೌಲಭ್ಯಗಳ ಕೊರತೆ ಅನುಭವಿಸುತ್ತಿದೆ. ಈ ಆಕಾಶವಾಣಿ ಕೇಂದ್ರವನ್ನು ಮತ್ತಷ್ಟು ಅತ್ಯಾಧುನಿಕ ಸೌಲಭ್ಯ ಒದಗಿಸುವ ಜೊತೆಗೆ ಉಳಿಸಿ, ಬೆಳೆಸುವ, ಜನಪರ ಬಾನುಲಿ ಕೇಂದ್ರವನ್ನಾಗಿಸಬೇಕಿದೆ.

****

ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಸಾಹ, ಹುರುಪುಗಳೊಂದಿಗೆ ತೊಡಗಿಕೊಂಡು ಜನಪರವಾದ, ಜನರ ಅಭಿರುಚಿಗೆ ತಕ್ಕ ಕಾರ್ಯಕ್ರಮ ರೂಪಿಸಿ, ಪ್ರಸಾರ ಮಾಡುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಇದಕ್ಕೆ ಕೇಳುಗರ ಸಹಕಾರ, ಬೆಂಬಲ ಅಗತ್ಯ

–ಬಿ.ವಿ.ಶ್ರೀಧರ, ಕಾರ್ಯಕ್ರಮ ಮುಖ್ಯಸ್ಥರು, ಆಕಾಶವಾಣಿ, ವಿಜಯಪುರ

****

ಅವಳಿ ಜಿಲ್ಲೆಯ ಯುವ ಪ್ರತಿಭೆಗಳಿಗೆ ಅವಕಾಶ, ವೇದಿಕೆ ನೀಡುತ್ತಾ ಬರಲಾಗಿದೆ, ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವರಿಗೆ ಅವಶ್ಯಕವಾದ ಕಾರ್ಯಕ್ರಮಗಳನ್ನು 25 ವರ್ಷಗಳಲ್ಲಿ ಆಕಾಶವಾಣಿ ವಿಜಯಪುರ ಕೇಂದ್ರ ಮಾಡುತ್ತಾ ಬಂದಿದೆ.

–ಡಾ.ಸೋಮಶೇಖರ ರುಳಿ, ಕಾರ್ಯಕ್ರಮ ಅಧಿಕಾರಿ, ಆಕಾಶವಾಣಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT