ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉಪ ಚುನಾವಣೆ: ಶೇ 69.41 ರಷ್ಟು ಮತದಾನ

ಸಿಂದಗಿ ಉಪ ಚುನಾವಣೆ; ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ, ಸೋಲು–ಗೆಲುವಿನ ಲೆಕ್ಕಾಚಾರ
Last Updated 30 ಅಕ್ಟೋಬರ್ 2021, 16:41 IST
ಅಕ್ಷರ ಗಾತ್ರ

ವಿಜಯಪುರ: ರಾಜಕೀಯ ಮೇಲಾಟಗಳಿಗೆ ಕಾರಣವಾಗಿದ್ದ ಸಿಂದಗಿ ವಿಧಾನಸಭಾ ಉಪ ಚುನಾವಣೆಯಲ್ಲಿ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ವಾಗ್ವಾದ ಮತ್ತು ಘರ್ಷಣೆ ಹಾಗೂ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ.

2018ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 70.85ರಷ್ಟು ಮತದಾನವಾಗಿತ್ತು. ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 69.41 ರಷ್ಟು ಮತದಾನವಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗಿರುವುದರಿಂದ ಇದೀಗ ಎಲ್ಲರ ಚಿತ್ತ ನವೆಂಬರ್‌ 2ರಂದು ನಡೆಯಲಿರುವ ಮತ ಎಣಿಕೆ ಮೇಲೆ ನೆಟ್ಟಿದೆ. ಸೋಲು–ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.

ಬೆಳಿಗ್ಗೆ 7ರಿಂದ 9ರ ವರೆಗೆ ಪ್ರಥಮ ಹಂತದಲ್ಲಿ ಶೇ 9.48ರಷ್ಟು ಮತದಾನವಾಯಿತು. ಬೆಳಿಗ್ಗೆ 11ರ ವರೆಗೆ ಶೇ 26.75, ಮಧ್ಯಾಹ್ನ 1ರ ವರೆಗೆ ಶೇ 32.49, ಮಧ್ಯಾಹ್ನ 3ರ ವರೆಗೆ ಶೇ 51.06ರಷ್ಟು, ಸಂಜೆ 5ರ ವರೆಗೆ ಶೇ 64.54 ರಷ್ಟು ಹಾಗೂ ದಿನದ ಅಂತ್ಯಕ್ಕೆ ಅಂದರೆ, ಸಂಜೆ 7ರ ವರೆಗೆ ಶೇ 69.41ರಷ್ಟು ಮತದಾನವಾಗಿದೆ.

ದಿನಪೂರ್ತಿ ಮೋಡ ಕವಿದ ವಾತಾವರಣ ಇದ್ದ ಕಾರಣ ಮತದಾನಕ್ಕೆ ಅನುಕೂಲವಾಯಿತು. ಆಲಮೇಲದಲ್ಲಿ ಬೆಳಿಗ್ಗೆ ಕೆಲ ಹೊತ್ತು ತುಂತುರು ಮಳೆಯೂ ಆಯಿತು. ಹೀಗಾಗಿ ಆಲಮೇಲದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನೀರಸವಾಗಿತ್ತು. ಸಂಜೆ ವೇಳೆಗೆ ಬಿರುಸಿನ ಮತದಾನವಾಯಿತು.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ತಮ್ಮ ಪತ್ನಿ ಲಲಿತಾ ಜೊತೆಗೂಡಿ ದೇವಣಗಾಂವ ಮತಗಟ್ಟೆಯಲ್ಲಿ, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಅವರು ತಮ್ಮ ಪತ್ನಿ ನಾಗರತ್ನ ಜೊತೆಗೂಡಿ ಮಲಘಾಣ ಗ್ರಾಮದಲ್ಲಿ ಹಾಗೂ ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ ಅವರು ತಮ್ಮ ಪತಿ ಶಕೀಲ್‌ ಅಂಗಡಿ ಜೊತೆಗೆ ಗಣಿಹಾರ ಗ್ರಾಮದಲ್ಲಿ ಮತ ಚಲಾಯಿಸಿದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ಅವರು ಪತ್ನಿ ಸುನೀತಾ ಚವ್ಹಾಣ ಅವರೊಂದಿಗೆ ತಾಂಬಾ ಸಮೀಪದ ನಾರಾಯಣ ಹಟ್ಟಿ ತಾಂಡಾದ ಮತಗಟ್ಟೆ ಸಂಖ್ಯೆ 93ರಲ್ಲಿ ಮತ ಚಲಾಯಿಸಿದರು.

ಮತದಾರರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಕಡೆಯಿಂದ ನೂರಾರು ವಾಹನ ವ್ಯವಸ್ಥೆ ಮಾಡಲಾಗಿತ್ತು. ಈ ನಡುವೆ ವೃದ್ಧರು ಮತ್ತು ಅಂಗವಿಕಲರ ಅನುಕೂಲಕ್ಕಾಗಿ ಆಯೋಗದಿಂದಲೂ ವಾಹನ ವ್ಯವಸ್ಥೆ ಮಾಡಲಾಗಿತ್ತು.

ಮತಗಟ್ಟೆ ಎದುರು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಬೂತ್‌ ಏಜೆಂಟರು ಮತದಾರರಿಗೆ ಚೀಟಿ ನೀಡಿ, ಮತದಾನ ಮಾಡಲು ನೆರವಾಗುತ್ತಿದ್ದ ದೃಶ್ಯ ಕಂಡುಬಂದಿತು. ಮತ ಗಟ್ಟೆ ಸಮೀಪದ ಹೋಟೆಲ್‌, ಗೂಡಂಗಡಿಗಳು ಮತದಾರರು ಮತ್ತು ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರಿಂದ ತುಂಬಿ ತುಳುಕುತಿದ್ದವು.

ಗೋವಾ, ಮಂಗಳೂರು, ಉಡುಪಿ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧೆಡೆ ದುಡಿಯಲು ವಲಸೆ ಹೋದವರಿಗೆ ವಾಹನದ ವ್ಯವಸ್ಥೆ ಕಲ್ಪಿಸಿ ಕರೆತಂದು ವೋಟ್‌ ಹಾಕಿಸುತ್ತಿರುವ ದೃಶ್ಯ ಗಣಿಹಾರದಲ್ಲಿ ಕಂಡುಬಂದಿತು.

ಬೋರಗಿ, ಕಕ್ಕಳಮೇಲಿ, ಚಾಂದಕವಟೆಯಲ್ಲಿ ಕಾಂಗ್ರೆಸ್‌ನ ಬೂತ್‌ ಏಜೆಂಟ್‌ರು ಮತದಾರರಿಗೆ ಪಕ್ಷದ ಅಭ್ಯರ್ಥಿ ಭಾವಚಿತ್ರ ಇರುವ ಚೀಟಿಯನ್ನು ವಿತರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೂತ್ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ, ಖಾಲಿ ಚೀಟಿ ನೀಡುವಂತೆ ಸೂಚಿಸಿ, ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು.

ಆಲಮೇಲದಲ್ಲಿ ಮತಗಟ್ಟೆ ಸಿಬ್ಬಂದಿಯೊಬ್ಬರು ಬಿಜೆಪಿ ಪರ ಮತ ಚಲಾಯಿಸುವಂತೆ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ, ಚುನಾವಣಾಧಿಕಾರಿಗೆ ದೂರು ನೀಡಿದರು.

ನಾಗಾವಿ ಬಿ.ಕೆ.ಯಲ್ಲಿ ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣ ಘರ್ಷಣೆ ನಡೆದಿದೆ. ಸಿಂದಗಿಯ 168ನೇ ಮತಗಟ್ಟೆಯಲ್ಲಿ ಇಬ್ಬರು ಚುನಾವಣಾ ಸಿಬ್ಬಂದಿ ಕಾಂಗ್ರೆಸ್‌ ಪರ ಮತ ಚಲಾಯಿಸುವಂತೆ ಮತದಾರರಿಗೆ ಹೇಳಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಯಿತು.

ವಿಡಿಯೊ ವೈರಲ್:ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಬಸ್ ನಿಲ್ದಾಣದ ಬಳಿ ಪಟ್ಟಣದ ಪೊಲೀಸ್ ಠಾಣೆ ಪಿ.ಎಸ್.ಐ ಜೊತೆಗೆ ವಾಗ್ವಾದ ನಡೆಸಿರುವ ವಿಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT