ಮಂಗಳವಾರ, ಡಿಸೆಂಬರ್ 7, 2021
19 °C
ಸಿಂದಗಿ ವಿಧಾನಸಭಾ ಉಪ ಚುನಾವಣೆ

ವಿಜಯಪುರ: ಬಹಿರಂಗ ಪ್ರಚಾರಕ್ಕೆ ತೆರೆ; ಮತ ಬೇಟೆಗೆ ಕೊನೆ ಕಸರತ್ತು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಜಕಾರಣಿಗಳ ಪ್ರತಿಷ್ಠೆ ಹಾಗೂ ಜಿದ್ದಾಜಿದ್ದಿಗೆ ಕಾರಣವಾಗಿರುವ ಸಿಂದಗಿ ವಿಧಾನಸಭಾ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ.

ಸುಮಾರು ಒಂದು ತಿಂಗಳಿಂದ ಭಾರೀ ಕಾವು ಪಡೆದುಕೊಂಡಿದ್ದ ಸಿಂದಗಿ ಕ್ಷೇತ್ರದಲ್ಲಿ ಬಹಿರಂಗ ಸಭೆ, ಸಮಾರಂಭ, ರ್‍ಯಾಲಿ, ಪಾದಯಾತ್ರೆ ಮೂಲಕ ಮತ ಭೇಟೆಯಲ್ಲಿ ತೊಡಗಿದ್ದ ಕಾಂಗ್ರೆಸ್‌,  ಬಿಜೆಪಿ ಮತ್ತು ಜೆಡಿಎಸ್‌ ದಿಗ್ಗಜರು ಕ್ಷೇತ್ರ ಬಿಟ್ಟು ಹೊರ ನಡೆದಿದ್ದಾರೆ.

ಮತದಾನಕ್ಕೆ ಕೇವಲ ಎರಡು ದಿನ ಬಾಕಿ ಉಳಿದ್ದಿದ್ದು, ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತ್ತು ಸ್ಥಳೀಯ ಮುಖಂಡರು ಮತದಾರರ ಮನವೊಲಿಕೆಯ ಕೊನೆಯ ಕಸರತ್ತು ಆರಂಭಿಸಿದ್ದಾರೆ.

ಕ್ಷೇತ್ರದಲ್ಲಿ ಇರುವ ವಿವಿಧ ಜಾತಿಗಳ ಸಮೀಕರಣಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಹೆಚ್ಚಿನ ಆದ್ಯತೆ ನೀಡಿವೆ. ಜೆಡಿಎಸ್‌ ಅಲ್ಪ ಸಂಖ್ಯಾತರ ಮತ ಸೆಳೆಯುವ ಪ್ರಯತ್ನ ನಡೆಸಿದೆ.

ಇದೀಗ ಮತದಾರರ ಓಲೈಕೆಗಾಗಿ ಕೊನೆಯದಾಗಿ ವಾಮ ಮಾರ್ಗ ಹಿಡಿದಿರುವ ರಾಜಕೀಯ ಪಕ್ಷಗಗಳಿಂದ ಹಣ ಹಂಚಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಬಲವಾದ ಆರೋಪ ಮತದಾರರಿಂದ ಕೇಳಿಬರುತ್ತಿದೆ.

ಗೆಲುವಿನ ಅಂತರ:

ತಮ್ಮ ಅಭ್ಯರ್ಥಿ 20 ಸಾವಿರದಿಂದ 25 ಸಾವಿರಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳ ಮುಖಂಡರು ಲೆಕ್ಕ ಹಾಕಿದ್ದಾರೆ. ಆದರೆ, ಈ ಎಲ್ಲ ಪ್ರಯತ್ನಗಳ ನಡುವೆಯೂ ಗೆಲುವಿನ ಅಂತರ ಹೆಚ್ಚೆಂದರೆ  5 ಸಾವಿರದಿಂದ 10 ಸಾವಿರದ ಒಳಗೆ ಇರಲಿದೆ ಎಂಬ ಲೆಕ್ಕಾಚಾರ ನಡೆದಿದೆ.

ಅ.30ರಂದು ನಡೆಯುವ ಚುನಾವಣೆಯಲ್ಲಿ ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬುದು ಕುತೂಹಲ ಕೆರಳಿಸಿದೆ.

ಕಾಂಗ್ರೆಸ್‌ ಕಾರ್ಯತಂತ್ರ:

ಕೇಂದ್ರ ಸರ್ಕಾರದ ಬೆಲೆ ಏರಿಕೆ, ಕೋವಿಡ್‌ ನಿರ್ವಹಣೆ ವೈಫಲ್ಯ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸುವ ಮೂಲಕ ಮತದಾರರ ಮನವೊಲಿಕೆಗೆ ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ. ಅಲ್ಲದೇ, ಜಾತಿವಾರು ಸಭೆ, ಸಮಾರಂಭಗಳನ್ನು ನಡೆಸಿ,  ಅಶೋಕ ಮನಗೂಳಿ ಪರ ಅಬ್ಬರದ ಪ್ರಚಾರ ನಡೆಸಿ, ತೆರಳಿದ್ದಾರೆ.

ಬಿಜೆಪಿ ವ್ಯೂಹ:

 ಕೇಂದ್ರ, ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮನವಿಕೆ ಮಾಡಿಕೊಡುವ ಜೊತೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರ ವಿರುದ್ಧ ಹರಿಹಾಯುವ ಮೂಲಕ ರಮೇಶ ಭೂಸನೂರ ಪರ ಬಿಜೆಪಿ ಮುಖಂಡರು ಪ್ರಚಾರ ನಡೆಸಿ ತೆರಳಿಸಿದ್ದಾರೆ.

ಜೆಡಿಎಸ್‌ ತಂತ್ರ:

ಕ್ಷೇತ್ರಕ್ಕೆ ಜೆಡಿಎಸ್‌ ನೀಡಿರುವ ಕೊಡುಗೆಯನ್ನು ಜನರ ಮುಂದಿಟ್ಟು, ತಮ್ಮ ಅಭ್ಯರ್ಥಿ ನಾಜಿಯಾ ಅಂಗಡಿ ಪರ ’ದಳಪತಿ‘ಗಳು ಮತಯಾಚಿಸಿದ್ದಾರೆ. 

ಒಂದು ತಿಂಗಳ ಕಾಲ ರಾಜಕಾರಣಿಗಳ ಆಟಾಟೋಪವನ್ನು ಹತ್ತಿರದಿಂದ ಕಂಡಿರುವ ಸಿಂದಗಿ ಕ್ಷೇತ್ರದ ಮತದಾರರು ಯಾರ ಪರ ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂಬುದನ್ನು ತಿಳಿಯಲು ನವೆಂಬರ್‌ 2ರ ಫಲಿತಾಂಶದ ವರೆಗೂ ಕಾಯಲೇ ಬೇಕಿದೆ.

****

ಉಲ್ಲಂಘನೆ: 23 ಪ್ರಕರಣ ದಾಖಲು

ವಿಜಯಪುರ: ಸಿಂದಗಿ ಉಪ ಚುನಾವಣೆಯಲ್ಲಿ ಕೋವಿಡ್‌ ನಿಯಮಾವಳಿಗಳ ಪಾಲನೆಯೇ ಆಗಿಲ್ಲ. ಪರಸ್ಪರ ಅಂತರ, ಮಾಸ್ಕ್‌, ಸ್ಯಾನಿಟೈಸ್‌ ಬಳಕೆ ಎಲ್ಲಿಯೂ ಕಂಡುಬಂದಿಲ್ಲ. ಮೂರು ಪಕ್ಷಗಳು ಪೈಪೋಟಿಗೆ ಬಿದ್ದು ಸಭೆ, ಸಮಾರಂಭದಲ್ಲಿ ಅಪಾರ ಜನರನ್ನು ಸೇರಿಸುವ ಮೂಲಕ ಕೋವಿಡ್‌ ನಿಯಮಾವಳಿಯನ್ನು ಮುರಿದಿವೆ.

ಪ್ರಚಾರದ ವೇಳೆ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿದಂತೆ ಮೂರು  ಪಕ್ಷಗಳ ವಿರುದ್ಧ ಕೋವಿಡ್‌ ನಿಯಮಗಳ ಉಲ್ಲಂಘನೆ ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

ಈ ಕುರಿತು ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಕೋವಿಡ್‌ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಎಂಟು ಪ್ರಕರಣ  ಹಾಗೂ ಕೋವಿಡ್‌ ಮತ್ತು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 13 ಪ್ರಕರಣ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು