ಮಂಗಳವಾರ, ಡಿಸೆಂಬರ್ 7, 2021
19 °C
ಅಲ್ಪಸಂಖ್ಯಾತರೇ ಜೆಡಿಎಸ್‌ಗೆ ಆಧಾರ; ಕಾಂಗ್ರೆಸ್‌ಗೆ ವರವಾಗುವುದೇ ಅನುಕಂಪ, ಬೆಲೆ ಏರಿಕೆ

ಸಿಂದಗಿ ಉಪ ಚುನಾವಣಾ ಕಣ ವಿಶ್ಲೇಷಣೆ: ಕಾಂಗ್ರೆಸ್‌ಗೆ ವರವಾಗುವುದೇ ಅನುಕಂಪ?

ಬಸವರಾಜ್‌ ಸಂಪ‍ಳ್ಳಿ Updated:

ಅಕ್ಷರ ಗಾತ್ರ : | |

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಕ್ಷೇತ್ರದಲ್ಲಿ ಪ್ರಬಲವಾಗಿರುವ ಅಲ್ಪಸಂಖ್ಯಾತರ ಮತ ವಿಭಜನೆ ಲೆಕ್ಕಾಚಾರ ಕಾಂಗ್ರೆಸ್‌ನ ನಿದ್ದೆಗೆಡಿಸಿದೆ. ‘ತೆನೆ ಹೊತ್ತ ಮಹಿಳೆ’ ಮತ ಸೆಳೆದಷ್ಟು ಕಾಂಗ್ರೆಸ್‌ ‘ಹಿನ್ನಡೆ’ಗೆ, ಬಿಜೆಪಿಯ ‘ಮುನ್ನಡೆ’ಗೆ ಕಾರಣವಾಗಲಿದೆ.‌

ಕಳೆದ ನಾಲ್ಕೈದು ಚುನಾವಣೆಗಳಲ್ಲಿಯೂ ಅಭ್ಯರ್ಥಿಗಳ ಗೆಲುವಿನ ಅಂತರ ಕೇವಲ 5 ಸಾವಿರದಿಂದ 8 ಸಾವಿರದ ಒಳಗೆ ಇದೆ. ಈ ಬಾರಿ ಸೋಲು–ಗೆಲುವಿನ ನಿರ್ಣಾಯಕ ಸ್ಥಾನದಲ್ಲಿ ಜೆಡಿಎಸ್‌ ಮುಖ್ಯ ಪಾತ್ರ ವಹಿಸಲಿದೆ. 

ಜೆಡಿಎಸ್‌ಗೆ ತನ್ನದೇ ಆದ ‘ವೋಟ್’ ಬ್ಯಾಂಕ್‌ ಎಂಬುದಿಲ್ಲ. ಇದುವರೆಗೆ ಈ ಕ್ಷೇತ್ರದಲ್ಲಿ ಎರಡು ಬಾರಿ ಜಯಗಳಿಸಿದ್ದರೂ ಅದು ಮಾಜಿ ಸಚಿವ ದಿವಂಗತ ಎಂ.ಸಿ.ಮನಗೂಳಿ ವರ್ಚಸ್ಸಿನಿಂದಾಗಿಯೇ ಹೊರತು, ಜೆಡಿಎಸ್‌ನ ಮತ ಬ್ಯಾಂಕ್‌ನಿಂದಲ್ಲ.

ಜೆಡಿಎಸ್‌ ಅಭ್ಯರ್ಥಿ ನಾಜಿಯಾ ಅಂಗಡಿ ಪದವೀಧರೆ. ಆದರೆ, ರಾಜಕೀಯಕ್ಕೆ ಹೊಸಬರು. ಮಾವ, ದಿ.ಐ.ಬಿ.ಅಂಗಡಿ ಜೆಡಿಎಸ್‌ನ ನಿಷ್ಠಾವಂತ ಮುಖಂಡ. ಕೇವಲ ಅಲ್ಪ ಸಂಖ್ಯಾತರ ಮತಗಳನ್ನು ನಂಬಿ ಇವರಿಗೆ ಟಿಕೆಟ್‌ ನೀಡಲಾಗಿದೆ.

ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಸಿಂದಗಿ ಕ್ಷೇತ್ರದಲ್ಲಿ ನಾಲ್ಕೈದು ಚುನಾವಣೆಗಳಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆದಿದೆ. ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಇಳಿದಿತ್ತು.  

ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಾಂಗ್ರೆಸ್‌ ಇದುವರೆಗೂ ಹಿಂದುಳಿದ ವರ್ಗಕ್ಕೆ ಸೇರಿದವರನ್ನೇ ಕಣಕ್ಕಿಳಿಸುತ್ತ ಬಂದಿತ್ತು. ಆದರೆ, ಫಲನೀಡಲಿಲ್ಲ.

ಈ ಬಾರಿ ತನ್ನ ‘ವ್ಯೂಹ’ ಬದಲಿಸಿರುವ ಕಾಂಗ್ರೆಸ್‌, ಪ್ರಬಲ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ, ದಿ.ಎಂ.ಸಿ.ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಜೆಡಿಎಸ್‌ನಿಂದ ಕರೆತಂದು ಆರೇಳು ತಿಂಗಳ ಮೊದಲೇ ಅಭ್ಯರ್ಥಿ ಎಂದು ಘೋಷಿಸಿದೆ.

ಕಣದಲ್ಲಿ ಎಂ.ಸಿ.ಮನಗೂಳಿ ಅವರ ಸಾವಿನ ಅನುಕಂಪ ಕಾಣುತ್ತಿಲ್ಲ. ಆದರೂ ಅವರ ಪುತ್ರ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ ಕ್ಷೇತ್ರಕ್ಕೆ ತಂದೆ ನೀಡಿರುವ ಕೊಡುಗೆಗಳನ್ನು ಮತದಾರರಿಗೆ ತಿಳಿಸಿ ಸಹಾನುಭೂತಿ ಗಳಿಸಲು ಯತ್ನಿಸಿದ್ದಾರೆ. 

ಲಿಂಗಾಯತ ಗಾಣಿಗ ಸಮಾಜಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಎರಡು ಬಾರಿ ಶಾಸಕರಾಗಿದ್ದು, ಗ್ರಾಮೀಣ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸೋತರೂ, ಗೆದ್ದರೂ ಜನರೊಟ್ಟಿಗೆ ಇದ್ದಾರೆ ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ.  

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಬಿಜೆಪಿಗೆ ವೋಟ್‌ ಹಾಕಿದರೆ ಕ್ಷೇತ್ರ ಅಭಿವೃದ್ಧಿಯಾಗಲಿದೆ, ಕ್ಷೇತ್ರಕ್ಕೆ ಹೆಚ್ಚು ಅನುದಾನ ಬರಲಿದೆ ಎಂದು ಬಿಜೆಪಿ ಮುಖಂಡರು ಪ್ರಚಾರ ನಡೆಸಿದ್ದಾರೆ. ಉಳಿದಿರುವ 18 ತಿಂಗಳಿಗೆ ಕಾಂಗ್ರೆಸ್‌, ಜೆಡಿಎಸ್‌ಗೆ ಮತ ಹಾಕಿದರೆ ಪ್ರಯೋಜನವಿಲ್ಲ. ಬಿಜೆಪಿ ಬೆಂಬಲಿಸಿದರೆ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಬಿಜೆಪಿ ಬಿಂಬಿಸತೊಡಗಿದೆ.  

ಜಾತಿ ಸಮೀಕರಣ: ಸಿಂದಗಿ ಕ್ಷೇತ್ರದಲ್ಲಿ ಲಿಂಗಾಯತ ಗಾಣಿಗ, ಲಿಂಗಾಯತ ಪಂಚಮಸಾಲಿ, ಕುರುಬ, ಮುಸ್ಲಿಂ, ತಳವಾರ, ರೆಡ್ಡಿ, ಬಣಜಿಗ, ಸವಿತಾ ಸಮಾಜ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.  

ಜಾತಿ ಸಮೀಕರಣಕ್ಕೆ ಬಿಜೆಪಿ ಮೊದಲ ಆದ್ಯತೆ ನೀಡಿದೆ. ಆಯಾ ಜಾತಿಗಳು ಪ್ರಬಲವಾಗಿರುವ ಪ್ರದೇಶಕ್ಕೆ ಆಯಾ ಜಾತಿಗೆ ಸೇರಿದ ಸಚಿವರು, ಶಾಸಕರನ್ನು ಕರೆಯಿಸಿ ತಳಮಟ್ಟದಲ್ಲಿ ಪ್ರಚಾರ ನಡೆಸಿ, ಮತ ಬೇಟೆಯಲ್ಲಿ ತೊಡಗಿದೆ.  

ಈ ವಿಷಯದಲ್ಲಿ ಕಾಂಗ್ರೆಸ್‌ ಕೂಡ ಹಿಂದೆ ಬಿದ್ದಿಲ್ಲ. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಆಗಬಹುದಾದ ಡ್ಯಾಮೇಜ್‌ ತಪ್ಪಿಸಲು ಅಲ್ಪಸಂಖ್ಯಾತ ಮುಖಂಡರಾದ ಯು.ಟಿ.ಖಾದರ್‌, ಜಮೀರ್‌ ಅಹ್ಮದ್‌ ಕಣಕ್ಕಿಳಿದು ಮುಸ್ಲಿಂ ಮತಗಳು ಇಬ್ಭಾಗವಾಗದಂತೆ ತಡೆಯಲು ಯತ್ನಿಸಿದ್ದಾರೆ.

ಜೊತೆಗೆ ಹಿಂದುಳಿದ ವರ್ಗಗಳ ಮುಖಂಡರು, ತಳವಾರ ಸಮುದಾಯ, ಬಂಜಾರ, ಮಾದಿಗ/ದಂಡೋರಾ ಸಮುದಾಯದ ಮುಖಂಡರ ಸಮಾವೇಶ, ಸಭೆ ನಡೆಸಿ ಮತ ಚದುರದಂತೆ ಎಚ್ಚರ ವಹಿಸಿದೆ.

ಕ್ಷೇತ್ರದಲ್ಲೇ ಬೀಡುಬಿಟ್ಟಿರುವ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರು ಜಾತಿ ಸಮೀಕರಣದ ಬದಲು ಕ್ಷೇತ್ರಕ್ಕೆ ಜೆಡಿಎಸ್‌ ನೀಡಿರುವ ಕೊಡುಗೆಯನ್ನು ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ.‌

ಚುನಾವಣೆಗೆ ವಸ್ತುವಾಗದ ಸಮಸ್ಯೆಗಳು: ಸಿಂದಗಿ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳು, ಮಾಯವಾದ ಸ್ವಚ್ಛತೆ, ಒಳಚರಂಡಿ ಮತ್ತು ಕುಡಿಯುವ ನೀರಿನ ಸಮಸ್ಯೆ, ದೂಳುಮಯ ವಾತಾವರಣ ಉಪಚುನಾವಣೆಯಲ್ಲಿ ಮುನ್ನೆಲೆಗೆ ಬಂದಿಲ್ಲ. 

ಬೆಲೆ ಏರಿಕೆ, ಭ್ರಷ್ಟಾಚಾರ, ಪೊಲೀಸ್‌ ಕೇಸರಿಕರಣ, ಕೋವಿಡ್‌ ನಿರ್ವಹಣೆ ವೈಫಲ್ಯ, ರಾಜಕಾರಣಿಗಳ ಭ್ರಷ್ಟಾಚಾರ, ಹಗರಣಗಳ ಕುರಿತು ಚರ್ಚೆ, ವಾಗ್ವಾದ, ವಾಕ್ಸಮರ ತಾರಕಕ್ಕೇರಿದೆ. ಮತದಾರರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅ.30ರಂದು ಯಾರ ಪರವಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

-----

ಸಿಂದಗಿ ಮತದಾರರ ವಿವಿರ

ಪುರುಷರು 1,20,949

ಮಹಿಳೆಯರು 1,13,327

ಇತರೆ 33

ಒಟ್ಟು– 2,34,309

––––

 

2018ರ ಚುನಾವಣಾ ಫಲಿತಾಂಶ

ಅಭ್ಯರ್ಥಿ;ಪಕ್ಷ;ಪಡೆದ ಮತ

ಎಂ.ಸಿ.ಮನಗೂಳಿ;ಜೆಡಿಎಸ್‌;70,865

ರಮೇಶ್‌ ಭೂಸನೂರು;ಬಿಜೆಪಿ;61,560

ಮಲ್ಲಣ್ಣ ಸಾಲಿ;ಕಾಂಗ್ರೆಸ್‌;22,818

–––

ಮನಗೂಳಿ ಕೊಡುಗೆ; ಲಾಭ ಯಾರಿಗೆ?

ದಿ.ಎಂ.ಸಿ.ಮನಗೂಳಿ ಅವರು ಎಚ್‌.ಡಿ.ದೇವೇಗೌಡರ ಸಹಕಾರದಿಂದ ’ಗುತ್ತಿಬಸವಣ್ಣ‘ ಏತನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಬರಡಾಗಿದ್ದ ಸಿಂದಗಿ ಕ್ಷೇತ್ರವನ್ನು ಹಸಿರಾಗಿಸಿರುವುದು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೇ ನೆಲೆಯೂರಿದೆ.

ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹1200 ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ತಂದು ಹತ್ತು ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.  ಇಷ್ಟೇ ಅಲ್ಲದೇ, ಆಲಮೇಲ ಪ್ರತ್ಯೇಕ ತಾಲ್ಲೂಕು ಹಾಗೂ ಆಲಮೇಲಕ್ಕೆ ತೋಟಗಾರಿಕಾ ಮಹಾವಿದ್ಯಾಲಯ ಮಂಜೂರು ಮಾಡಿರುವುದು ಹಾಗೂ ಸಿಂದಗಿ ಪಟ್ಟಣಕ್ಕೆ ಒಳಚರಂಡಿ, 24X7 ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದನ್ನು ಇದೀಗ ಚುನಾವಣಾ ಕಣದಲ್ಲಿ ಜೆಡಿಎಸ್‌ ಮುಖಂಡರು ನಮ್ಮದೆಂದು, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಅವರು ತಮ್ಮದೆಂದು ’ಕ್ರೆಡಿಟ್‌‘ ತೆಗೆದುಕೊಳ್ಳಲು ಹೋರಾಟ ನಡೆಸಿದ್ದಾರೆ.

ಮತದಾರರು ’ಮನಗೂಳಿ ಮುತ್ಯಾ‘ ಅವರ ಅಭಿವೃದ್ಧಿ ಯೋಜನೆಗಳನ್ನು ಸ್ಮರಿಸುತ್ತಾರೆ. ಆದರೆ, ಕ್ರೆಡಿಟ್‌ ಅವರ ಪುತ್ರನಿಗೆ ನೀಡುತ್ತಾರೋ ಅಥವಾ ಜೆಡಿಎಸ್‌ಗೆ ನೀಡುತ್ತಾರೋ ಎಂಬುದು ತೀರ್ಮಾನವಾಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು