ಬುಧವಾರ, ಜುಲೈ 28, 2021
21 °C
ವಿಜಯಪುರ ಜಿಲ್ಲಾ ಕಾಂಗ್ರೆಸ್‌ ನಾಯಕರಿಗೆ ಡಿ.ಕೆ.ಶಿವಕುಮಾರ್‌ ಸೂಚನೆ

ಸಿಂದಗಿ ಉಪ ಚುನಾವಣೆ: ಗೆಲುವಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಈಗಿನಿಂದಲೇ ಪ್ರಚಾರ, ಮತಯಾಚನೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ರಾಜ್ಯಕ್ಕೆ ನೀಡಿದ ಸಂದೇಶವೇ ಸಿಂದಗಿ ಕ್ಷೇತ್ರದಿಂದಲೂ ಮರಕಳಿಸಬೇಕು ಎಂದರು.

ಕಾಂಗ್ರೆಸ್ ಮುಖಂಡರು ಸಿಂದಗಿ ಕ್ಷೇತ್ರದಲ್ಲಿ ಇರುವ ತಮ್ಮ ಸಂಬಂಧಿಕರು, ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷದ ಪರ ಈಗಿನಿಂದಲೇ ಮತ ಹಾಕಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂಟೂ ಕ್ಷೇತ್ರಗಳಲ್ಲಿ ಪಕ್ಷದ ಜಯ ಸಾಧಿಸುವುದು ನಿಶ್ಚಿತ ಎಂದು ಹೇಳಿದರು.

ಸ್ವಂತ ಕಚೇರಿ:

ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಪಕ್ಷಕ್ಕೆ ಸ್ವಂತ ಕಚೇರಿ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಕಾಂಗ್ರೆಸ್‌ ಕಚೇರಿಯು ಪಕ್ಷದ ಕಾರ್ಯಕರ್ತರಿಗೆ ದೇವಸ್ಥಾನವಾಗಬೇಕು. ಶಾಸಕರು, ಮಾಜಿ ಶಾಸಕರು, ಮುಖಂಡರು ಕಡ್ಡಾಯವಾಗಿ ಜಿಲ್ಲಾ, ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ, ಸಾರ್ವಜನಿಕರು ಕುಂದುಕೊರತೆ ಆಲಿಸಬೇಕು ಎಂದು ಸೂಚಿಸಿದರು.  

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ವಿವಿಧ ವೃತ್ತಿ, ಕಸುಬು ಮಾಡುವ ಸಮುದಾಯಗಳ ಜನರ ಕುಂದುಕೊರತೆ ಆಲಿಸಿದ್ದೇನೆ. ಇನ್ನುಳಿದ ಪ್ರತಿ ಸಮುದಾಯಗಳ ಆಹವಾಲು ಆಲಿಸುತ್ತೇನೆ. ಆ ಎಲ್ಲ ಅಂಶಗಳನ್ನು ಮುಂಬರುವ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಲಾಗುವುದು. ಅಲ್ಲದೇ, ಅವುಗಳ ಪರಿಹಾರಕ್ಕೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಕಾರ್ಯಕರ್ತರ ಕೂಗು ಕಾಂಗ್ರೆಸ್‌ ಪಕ್ಷದ ಧ್ವನಿಯಾಗಬೇಕು. ಎಲ್ಲ ಸಮುದಾಯಗಳಿಗೆ ಕಾಂಗ್ರೆಸ್‌ ಸ್ಪಂದಿಸಲಿದೆ   ಕಾಂಗ್ರೆಸ್‌ ಇತಿಹಾಸ ದೇಶದ ಇತಿಹಾಸವಾಗಿದೆ ಎಂದರು.

ಒಗ್ಗಟ್ಟು ಪ್ರದರ್ಶನ: ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮಾಜಿ ಸಚಿವರು ಒಗ್ಗಟ್ಟು ಪ್ರದರ್ಶಿಸಿದರು.

ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಸುನೀಲ್‌ಗೌಡ ಪಾಟೀಲ, ಮಾಜಿ ಶಾಸಕ ಅಪ್ಪಾಜಿನಾಡಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಹಾಸಿಂಪೀರ ವಾಲಿಕಾರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.