ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ: ಡಾ.ಶಾಂತವೀರ ಮನಗೂಳಿ ಭರವಸೆ

ಸಿಂದಗಿ ಪುರಸಭೆ ನೂತನ ಅಧ್ಯಕ್ಷ ಅಭಿಮತ
Last Updated 10 ನವೆಂಬರ್ 2020, 11:13 IST
ಅಕ್ಷರ ಗಾತ್ರ
ADVERTISEMENT
""

ಸಿಂದಗಿ: ಪುರಸಭೆಯಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪುರಸಭೆ ನೂತನ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಭರವಸೆ ನೀಡಿದರು.

‘ಪುರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ. ಆಯಾಕಟ್ಟಿನ ಸ್ಥಳಗಳಲ್ಲಿ ಪೌರಕಾರ್ಮಿಕರದ್ದೇ ದರ್ಬಾರ್‌ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಲಿ ಇರುವ ಆರೋಗ್ಯ ನಿರೀಕ್ಷಕ, ಸಿವಿಲ್‌ ಎಂಜಿನಿಯರ್‌, ತೆರಿಗೆ, ನೀರು, ಕಂದಾಯ ವಿಭಾಗದಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ಪುರಸಭೆಗೆ ನಿಯೋಜಿಸಲು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಡಿಯುಡಿಸಿ ಯೋಜನಾ ನಿರ್ದೇಶಕರಿಗೆ ಮನವಿ ಮಾಡಲಾಗಿದೆ’ ಎಂದರು.

‘ಪುರಸಭೆಯಈ ಹಿಂದಿನ ಆಡಳಿತಾವಧಿಯಲ್ಲಿ ಕೇವಲ ಎರಡು ಸಾಮಾನ್ಯಸಭೆ ಮಾತ್ರ ನಡೆದಿತ್ತು. ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚೆ, ಚಿಂತನೆಗಳೇ ನಡೆದಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ನನ್ನ ಅವಧಿಯಲ್ಲಿ ಎಲ್ಲ 23 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

ಪಟ್ಟಣದಲ್ಲಿ ಹೆಚ್ಚಾಗಿರುವ ಬಿಡಾಡಿ ಜಾನುವಾರು, ಹಂದಿ ಮತ್ತು ಬೀದಿ ನಾಯಿಗಳ ಮಾಲೀಕರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದ್ದು, ಮನೆಯಲ್ಲಿ ಕಟ್ಟಿಕೊಳ್ಳದೇ ಬೀದಿಗೆ ಬಿಟ್ಟರೆ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಸ್ವಚ್ಛತೆ ನಿರ್ವಹಣೆಗೆ ಅಗತ್ಯವಿರುವ ಹೊಸ ಆಟೊ ಟಿಪ್ಪರ್‌ ಖರೀದಿಸಲಾಗುವುದು. ಮನೆಮನೆಯಿಂದ ಕಸ ಸಂಗ್ರಹ ಸಂಬಂಧ ಆರಂಭದಲ್ಲಿ ಕೊಳೆಗೇರಿ ನಿವಾಸಿಗಳಿಗೆ ₹15 ಲಕ್ಷ ಮೊತ್ತದಲ್ಲಿ ಎರಡೆರಡು ಬಕೆಟ್ ನೀಡಲು ಉದ್ದೇಶಿಸಲಾಗಿದೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಕ್ರಮಕೈಗೊಳ್ಳಲಾಗುವುದು ಎಂದರು.

₹25 ಲಕ್ಷ ಮೊತ್ತದಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಮಾಡಲಾಗುವುದು. ರಸ್ತೆ, ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಿದ್ಧಲಿಂಗ ಸ್ವಾಮೀಜಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿರುವುದರಿಂದ ಪೊಲೀಸರೊಂದಿಗೆ ಚರ್ಚಿಸಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದರು.

ಬಸವೇಶ್ವರ ಸರ್ಕಲ್‌ನಲ್ಲಿ ₹15 ಲಕ್ಷ ಮೊತ್ತದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್‌ ನಿಲ್ದಾಣ ನಿರ್ಮಾಣದ ಜೊತೆಗೆ ಪಟ್ಟಣವನ್ನು ಹಸಿರಾಗಿಸುವ ಉದ್ದೇಶದಿಂದ ರಸ್ತೆ ಅಕ್ಕಪಕ್ಕದಲ್ಲಿ ಸಸಿ ನಡೆಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

‘ಮಾದರಿ ಪಟ್ಟಣವಾಗಿ ಅಭಿವೃದ್ಧಿ’
ಸಿಂದಗಿ: ‌
ಶಾಸಕ ಎಂ.ಸಿ ಮನಗೂಳಿ ಅವರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಂಡಿದ್ದು, ಅವರ ಸಹಕಾರದೊಂದಿಗೆ ಸಿಂದಗಿಯನ್ನು ಮಾದರಿ ಪಟ್ಟಣವನ್ನಾಗಿ ರೂಪಿಸಲು ಆದ್ಯತೆ ನೀಡಲಾಗುವುದು ಎಂದುಡಾ.ಶಾಂತವೀರ ಮನಗೂಳಿ ಹೇಳಿದರು.

ಪಟ್ಟಣಕ್ಕೆ ಶಾಸ್ವತ ಕುಡಿಯುವ ನೀರು ಒದಗಿಸಲು ಬಳಗೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಪೂರೈಕೆಗೆ ₹27.10 ಕೋಟಿ ಮೊತ್ತದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಬೇಸಿಗೆಯಲ್ಲಿ ಯೋಜನೆ ಜಾರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಚಿಕ್ಕಸಿಂದಗಿ ಬೈಪಾಸ್‌ನಿಂದ ಬಸವೇಶ್ವರ ಸರ್ಕಲ್‌ ವರೆಗೆ, ಬಸವೇಶ್ವರ ಸರ್ಕಲ್‌ನಿಂದ ವಿವೇಕಾನಂದ ಸರ್ಕಲ್‌ ವರೆಗೆ ಹಾಗೂ ಬಸವೇಶ್ವರ ಸರ್ಕಲ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ರಸ್ತೆ ವಿಸ್ತರಣೆ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ₹15 ಕೋಟಿ ಮೊತ್ತದಲ್ಲಿ ನಡೆದಿದೆ ಎಂದು ಹೇಳಿದರು.

ಕನಸದಾಸ ವೃತ್ತದಿಂದ ಮೊರಟಗಿ ನಾಕಾದ ವರೆಗೆ ರಸ್ತೆ ವಿಸ್ತರಣೆ ಮತ್ತು ಚರಂಡಿ ಕಾಮಗಾರಿ ₹ 5 ಕೋಟಿ ಮೊತ್ತದಲ್ಲಿ ಪ್ರಾರಂಭದ ಹಂತದಲ್ಲಿದೆ ಎಂದು ತಿಳಿಸಿದರು.

ಬಹುದಿನಗಳ ಬೇಡಿಕೆಯಾದ ₹90 ಕೋಟಿ ಮೊತ್ತದ ಒಳಚರಂಡಿ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ ಎಂದರು.

ಪಟ್ಟಣದ ಸ್ಮಶಾನವನ್ನು ₹ 60 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಿಂದಗಿ ಕೆರೆ ಆವರಣದಲ್ಲಿ ₹2 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಉದ್ಯಾನ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದರು.

₹ 9 ಕೋಟಿ ವೆಚ್ಚದಲ್ಲಿ 9 ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಮುಗಿದಿದ್ದು, ಉಳಿದ ಎಲ್ಲ ವಾರ್ಡ್‌ಗಳಲ್ಲೂ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಶಾಸಕರು ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ವಿದ್ಯಾನಗರದ ಕೊಳೆಗೇರಿಯ ನಿವಾಸಿಗಳಿಗಾಗಿ ₹18 ಕೋಟಿ ವೆಚ್ಚದಲ್ಲಿ 250 ಮನೆಗಳು ಮಂಜೂರಾಗಿದ್ದು, ಟೆಂಡರ್‌ ಕರೆಯಲಾಗಿದೆ. ವಾಜಪೇಯಿಶ್ರೀ ವಸತಿ ಯೋಜನೆಯಡಿ 411 ನಿವೇಶನಗಳು ಮಂಜೂರಾಗಿ ಹಂಚಿಕೆಯಾಗಿದ್ದು, ಶೀಘ್ರದಲ್ಲೇ ಹಕ್ಕುಪತ್ರ ನೀಡಲಾಗುವುದು ಎಂದರು.

****

ಸಿಂದಗಿ ಅಭಿವೃದ್ಧಿಗಾಗಿ ಕಾಂಗ್ರೆಸ್‌, ಬಿಜೆಪಿ ಮತ್ತು ಸ್ವತಂತ್ರ ಸದಸ್ಯರು ಪಕ್ಷಬೇಧ ಮರೆತು ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿಸಿದ್ದಾರೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು.
–ಡಾ.ಶಾಂತವೀರ ಮನಗೂಳಿ, ಅಧ್ಯಕ್ಷ, ಸಿಂದಗಿ ಪುರಸಭೆ

****
ಸಿಂದಗಿ ಪಟ್ಟಣದಕ್ಕೆ ಆರ್‌ಟಿಒ ಕಚೇರಿ, ನಗರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹೆಚ್ಚಿನ ಅನುದಾನ ತಂದು ಪಟ್ಟಣವನ್ನು ಅಭಿವೃದ್ಧಿಗೊಳಿಸಲಾಗುವುದು
-ಎಂ.ಸಿ.ಮನಗೂಳಿ, ಶಾಸಕರು, ಸಿಂದಗಿ

ಸಿಂದಗಿ ಶಾಸಕ ಎಂ.ಸಿ.ಮನಗೂಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT