ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಕೋವಿಡ್‌ ಕೇರ್‌ ಸೆಂಟರ್‌ ಆರಂಭ

ಕೋವಿಡ್ ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಿ; ಸಚಿವೆ ಶಶಿಕಲಾ ಜೊಲ್ಲೆ ಸೂಚನೆ
Last Updated 22 ಏಪ್ರಿಲ್ 2021, 12:42 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ನಗರದಲ್ಲಿ ಎರಡು ಹಾಗೂ ಪ್ರತಿ ತಾಲ್ಲೂಕಿಗೆ ಒಂದರಂತೆಜಿಲ್ಲೆಯಲ್ಲಿ ಆರು ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಅವರು ಗುರುವಾರ ವಿಡಿಯೊ ಸಂವಾದ ಸಭೆಯಲ್ಲಿ ಮಾತನಾಡಿದರು.

ಕೋವಿಡ್‌ನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಆರೈಕೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಪ್ರಮಾಣದ ಆಕ್ಸಿಜನ್ ಇರುವಂತೆ ನೋಡಿಕೊಳ್ಳುವ ಜೊತೆಗೆ ಸೋಂಕಿತರಿಗೆ ಬೆಡ್‍, ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದುಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರೂಪಾಂತರ ಕೊರೊನಾ ವೈರಸ್ ಇದಾಗಿದ್ದು, ಯುವ ಜನತೆಗೂ ಅಪಾಯ ಒಡ್ಡುತ್ತಿದೆ. ಕಾರಣ ಮುಂದಿನ ದಿನಗಳಲ್ಲಿ ಬರಬಹುದಾದಂತಹ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಈಗಿನಿಂದಲೇ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅವಶ್ಯಕತೆಯಿದ್ದಲ್ಲಿ ಪಾರದರ್ಶಕವಾಗಿ ಮೆರಿಟ್ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಸೌಲಭ್ಯವಿದ್ದರೂ ಕೂಡ ತಾಂತ್ರಿಕ ಸಿಬ್ಬಂದಿಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಐಎಂಎ ಸಂಸ್ಥೆಯಿಂದ ಅಥವಾ ಖಾಸಗಿ ಆಸ್ಪತ್ರೆಗಳ ಮೂಲಕ ವೆಂಟಿಲೇಟರ್‌ಗಳ ನಿರ್ವಹಣಾ ಸಿಬ್ಬಂದಿ ಪೂರೈಸಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಅವಶ್ಯಕ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಶಾಸಕ ಶಿವಾನಂದ ಪಾಟೀಲ, ಜಿಲ್ಲಾಸ್ಪತ್ರೆ ಆವರಣದಲ್ಲಿ ಇತ್ತೀಚೆಗೆ ಚಿಕಿತ್ಸೆ ಸಿಗದೇ ರೋಗಿಯೊಬ್ಬರು ಮೃತಪಟ್ಟರುವ ಕುರಿತು ಸಚಿವರ ಗಮನಕ್ಕೆ ತಂದಿದರು.

ಜಿಲ್ಲಾಸ್ಪತ್ರೆ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆದಿರುವ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ, ಸತ್ಯಾಸತ್ಯತೆ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಿದ ಸಚಿವರು ಸೂಚಿಸಿದರು.

ಜಿಲ್ಲಾಸ್ಪತ್ರೆ ಸಿಬ್ಬಂದಿಯೊಬ್ಬರು ಕೂಡ ಕೋವಿಡ್‌ನಿಂದ ಸಾವಿಗೀಡಾಗಿರುವ ಕುರಿತು ಪರಿಶೀಲನಾ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ವಿರುದ್ಧ ಅನೇಕ ದೂರುಗಳು ಬರುತ್ತಿದ್ದು, ಡಿಎಚ್‍ಒ ಅವರು ಇನ್ನಷ್ಟು ಚುರುಕಾಗಿ ಕಾರ್ಯನಿರ್ವಹಿಸಬೇಕು. ಸ್ವ್ಯಾಬ್ ಸಂಗ್ರಹ, ಕೋವಿಡ್ ಲಸಿಕಾ ಕಾರ್ಯಕ್ರಮ ತೀವ್ರಗೊಳಿಸಬೇಕು. ಸ್ವ್ಯಾಬ್ ವರದಿಗಳ ಫಲಿತಾಂಶ ತಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇರುವ ಕಡೆ ಮೆಕ್ರೋ ಕಂಟೇನ್ಮೆಂಟ್ ವಲಯ ರಚನೆ ಕುರಿತು ಸೂಕ್ತ ಗಮನ ನೀಡುವಂತೆ ತಿಳಿಸಿದರು.

ಕೋವಿಡ್‌ ಲಸಿಕಾ ಕಾರ್ಯಕ್ರಮ ಶೇ‌ 100 ರಷ್ಟು ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ರೆಮ್‌ ಡಿಸಿವಿರ್ ಲಸಿಕೆ ಮಾನದಂಡದನ್ವಯ ಬಳಕೆಯಾಗಬೇಕು. ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಮನ್ವಯತೆ ಮತ್ತು ಸಮರ್ಪಕ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸದೆ ತಕ್ಷಣ ಚಿಕಿತ್ಸೆ ಒದಗಿಸಬೇಕು ಎಂದರು.

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಜಿ.ಪಂ. ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಹಾಗೂ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ, ಡಾ.ಔದ್ರಾಮ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ್‌ ಯರಗಲ್‌ ಉಪಸ್ಥಿತರಿದ್ದರು.

***

ಖಾಸಗಿ ಆಸ್ಪತ್ರೆಗಳಲ್ಲಿ ಔಷಧ, ಚಿಕಿತ್ಸೆಗೆ ಸರ್ಕಾರದ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡಿದರೆ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು

ಶಶಿಕಲಾ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವೆ

****

ಜಿಂದಾಲ್‌ನಿಂದ ಶೇ 50 ರಷ್ಟು ಆಕ್ಸಿಜನ್ ಮಹಾರಾಷ್ಟ್ರಕ್ಕೆ ಪೂರೈಕೆಯಾಗುತ್ತಿದೆ. ಮೊದಲು ನಮ್ಮ ರಾಜ್ಯದ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು

ಎಂ.ಬಿ. ಪಾಟೀಲ, ಶಾಸಕ, ಬಬಲೇಶ್ವರ

****

ಜಿಲ್ಲಾಸ್ಪತ್ರೆಯನ್ನು ಇನ್ನಷ್ಟು ಬಲಪಡಿಸಬೇಕು, ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸದ್ಭಳಕೆ ಮಾಡಿಕೊಳ್ಳಬೇಕು

ಶಿವಾನಂದ ಪಾಟೀಲ,ಶಾಸಕ, ಬಸವನ ಬಾಗೇವಾಡಿ

***

ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ಅಲ್ಪೋಪಹಾರ, ಉಪಹಾರಕ್ಕಾಗಿ ರೋಗಿಗಳು ಹೊರಗೆ ಬಂದು ಹೋಗುತ್ತಿರುವುದು ಆತಂಕಕಾರಿಯಾಗಿದೆ

ಅರುಣ ಶಹಾಪುರ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT