ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆ: ಹೊಲಕ್ಕೆ ಬಾರದ ಸರ್ವೇಯರ್; ಕಂಗಾಲಾದ ಅನ್ನದಾತರು..!

ಜಿಲ್ಲೆಯಲ್ಲಿ ಸರ್ವೇಯರ್ ಕೊರತೆ; ವಿಲೇವಾರಿಗೆ ಕಾದಿವೆ 30495 ಅರ್ಜಿಗಳು
Last Updated 21 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಹದ್ದು ಬಸ್ತು, ಮಾರಾಟ ವಿಭಾಗ, ಬಿನ್‌ಸೇತ್ಕಿ, ತಾತ್ಕಾಲಿಕ ಪೋಡಿ, ಇ–ಸೊತ್ತಿನ ಸರ್ವೇಗಾಗಿ ಜಿಲ್ಲೆಯಾದ್ಯಂಥ 30000ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.

ಜಮೀನಿನ ಅಳತೆ ಸೇರಿದಂತೆ ಇನ್ನಿತರೆ ಕೆಲಸಗಳಿಗಾಗಿ ರೈತರು ಹಲ ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ, ಇದೂವರೆಗೂ ಅಳತೆ ನಡೆಯದ ಕಾರಣ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ.

ಹೆಸರಿಗಷ್ಟೇ ಆನ್‌ಲೈನ್‌ ನೊಂದಣಿ. ಬಲಾಢ್ಯರು ಎಲ್ಲವನ್ನೂ ಉಲ್ಲಂಘಿಸಿ ಸರ್ವೇ ಮಾಡಿಸಿಕೊಂಡರೇ; ಸಾಮಾನ್ಯರು ತಮ್ಮ ಪಾಳಿ ಯಾವಾಗ ಬರಲಿದೆ ಎಂದು ಚಾತಕ ಹಕ್ಕಿಗಳಂತೆ ಕಾದಿದ್ದಾರೆ.

‘ಅಡಚಣಿಯಿಂದ ಎಕರೆ ಜಮೀನಿನಲ್ಲಿ 11 ಗುಂಟೆ ಮಾರಾಟ ಮಾಡಿವ್ನಿ. ಖರೀದಿ ಹಾಕಬೇಕ್‌ಂದ್ರೇ ಸೀಟ್‌ ಆಗಬೇಕು. ಅರ್ಜಿ ಕೊಟ್ಟ ವರ್ಷದ ನಂತ್ರ ಬಂದ್‌ ಅಳೆದುಕೊಂಡು ಹೋಗ್ಯಾವ್ರೇ. ಎರಡ್ಮೂರು ತಿಂಗಳಾಯ್ತು. ಸೀಟ್‌ ಪ್ರತಿ ನಮ್ಗ ಕೊಟ್ಟಿಲ್ಲ. ಕೇಳಿದಾಗೊಮ್ಮೆ ಕಂಪ್ಯೂಟರ್‌ ಸಮಸ್ಯೆ ಅಂತಾರ. ಇದರಿಂದ ಖರೀದಿ ಹಾಕಾಕ ಆಗ್ತಿಲ್ಲ. ಜಮೀನು ತಗೊಂಡಾವ ರೊಕ್ಕ ಕೊಡಲ್ಲ. ಹೊಲ ಮಾರಿದ್ರೂ ತಗೊಂಡ ಸಾಲಕ್ಕೆ ಬಡ್ಡಿ ಕಟ್ಟೋದು ತಪ್ಪಿಲ್ಲ. ಸರ್ವೇ ಇಲಾಖೆಯವ್ರು ದೌಡ್‌ ಸೀಟ್‌ ಕೊಟ್ರ ಖರೀದಿ ಹಾಕಿ ಸಾಲದಿಂದ ಮುಕ್ತ ಆಗ್ತೀನಿ’ ಎಂದು ತಾಂಬಾದ ರೈತ ಅಶೋಕ ಲಿಂಗದಹಳ್ಳಿ ಅಳಲು ತೋಡಿಕೊಂಡರು.

‘ನಮ್ಮ ಹೊಲಾದಾಗ ಬಾಜುದವ್ರು ಒತ್ಕೊಂಡ್ ಬಂದಾರ, ಅಳೆಯಲು ಅರ್ಜಿ ಕೊಟ್ಟು ಯಾಡ್‌ ವರ್ಷ ಆದ್ರೂ ಸರ್ವೇದಾರರು ಬಂದಿಲ್ಲ. ಕಚೇರಿಗೆ ಹೋಗಿ ಕೇಳಿದ್ರೆ ಸ್ಪಂದಿಸಲ್ಲ. ಇಂದು–ನಾಳೆ ಬರ್ತಾರ ಅಂಥ ಕಾದು ಸಾಕಾಗಿ ಹೋಗ್ಯಾದ. ಏನ್‌ ಮಾಡ್ಬೇಕ್ ಅಂತ ತೋಚ್ತಿಲ್ಲ’ ಎಂದು ಬಸವನಬಾಗೇವಾಡಿ ತಾಲ್ಲೂಕಿನ ರೈತರಿಬ್ಬರು ದೂರಿದರು.

‘ಹದ್ದು ಬಸ್ತು 9867, ಮಾರಾಟ ವಿಭಾಗ 10833, ಬಿನ್‌ಸೇತ್ಕಿ 464, ತಾತ್ಕಾಲಿಕ ಪೋಡಿ 5947, ಇ–ಸೊತ್ತು 1714, ಭೂಪರಿವರ್ತನೆ 84, ಸಿಸಿಡಬ್ಲ್ಯೂ–ಪಿಪಿಡಿ 178, ಕಚೇರಿ ದುರಸ್ತಿಗಾಗಿ (ಐಎಂಪಿ) 195 ಸೇರಿ 2018ರ ಆಗಸ್ಟ್‌ ಅಂತ್ಯಕ್ಕೆ ಒಟ್ಟು 30495 ಅರ್ಜಿಗಳು ಬಂದಿವೆ. ಸರ್ವೇಯರ್‌ ಸಮಸ್ಯೆಯಿಂದ ಹೆಚ್ಚಿನವು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಹಂತ ಹಂತವಾಗಿ ವಿಲೇವಾರಿ ಮಾಡಲಾಗುವುದು’ ಎಂದು ಭೂದಾಖಲೆಗಳ ಉಪನಿರ್ದೇಶಕ ಜಿ.ಎಸ್‌.ಗಡೇದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಸದ್ಯ 44 ಸರ್ಕಾರಿ, 71 ಪರವಾನಗಿ ಪಡೆದ ಸರ್ವೇಯರ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ಜಿ ಬಾಕಿ ಉಳಿಯುತ್ತಿರುವುದನ್ನು ಅರಿತು 2017ರ ಜೂನ್‌ವರೆಗೆ ಇದ್ದ 25 ಜನ ಪರವಾನಗಿ ಪಡೆದ ಸರ್ವೇಯರ್‌ ಸಂಖ್ಯೆಯನ್ನು 71ಕ್ಕೆ ಹೆಚ್ಚಿಸಲಾಗಿದೆ. ಕಲಬುರ್ಗಿಯಲ್ಲಿ ತರಬೇತಿ ಪಡೆಯುತ್ತಿರುವ 56 ಸಿಬ್ಬಂದಿ ಸೆಪ್ಟೆಂಬರ್‌ ಅಂತ್ಯಕ್ಕೆ ಜಿಲ್ಲೆಗೆ ನಿಯೋಜನೆಗೊಳ್ಳಲಿದ್ದಾರೆ. ಈವರೆಗೆ ಪ್ರತಿ ಸರ್ವೇಯರ್‌ಗೆ ತಿಂಗಳಿಗೆ ನೀಡಿದ್ದ 23 ಅರ್ಜಿ ವಿಲೇವಾರಿ ಮಿತಿಯನ್ನು ಸೆಪ್ಟೆಂಬರ್‌ನಿಂದ 30ಕ್ಕೆ ಹೆಚ್ಚಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಹದ್ದು ಬಸ್ತು, ಇ–ಸೊತ್ತು, ಸಿಸಿಡಬ್ಲ್ಯೂ, ಬಿಪಿಡಿ, ದುರಸ್ತಿ ಮತ್ತು ಇತರೆ ಅರ್ಜಿಗಳ ವಿಲೇವಾರಿಯನ್ನು ಸರ್ಕಾರಿ ಸರ್ವೇಯರ್ ನೋಡಿಕೊಳ್ಳುತ್ತಿದ್ದು, 11 ಇ, ಬಿನ್‌ಸೇತ್ಕಿಯನ್ನು ಪರವಾನಗಿ ಪಡೆದ ಸರ್ವೇಯರ್ ಮಾಡಲಿದ್ದಾರೆ’ ಎಂದು ಗಡೇದ ಹೇಳಿದರು.

115 ಸರ್ವೇಯರ್‌ ನಿಯೋಜನೆ

ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 8 ಸರ್ಕಾರಿ, 16 ಪರವಾನಗಿದಾರರು, ವಿಜಯಪುರ 13 ಸರ್ಕಾರಿ, 18 ಪರವಾನಗಿದಾರರು, ಸಿಂದಗಿ 7 ಸರ್ಕಾರಿ, 8 ಪರವಾನಗಿದಾರರು, ಮುದ್ದೇಬಿಹಾಳ 6 ಸರ್ಕಾರಿ, 6 ಪರವಾನಗಿದಾರರು, ಇಂಡಿ 10 ಸರ್ಕಾರಿ, 23 ಪರವಾನಗಿದಾರ ಸರ್ವೇಯರ್‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್‌ ಅಂತ್ಯಕ್ಕೆ ಇನ್ನೂ 56 ಜನ ಸರ್ಕಾರಿ ಸರ್ವೇಯರ್‌ ನಿಯೋಜನೆಗೊಳ್ಳುವುದರಿಂದ ಸಂಖ್ಯೆ 171ಕ್ಕೆ ಏರಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT