ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಕ್ಕಳಕಿ, ಇಂಗಳಗಿ ಪುನರ್ವಸತಿ ಕೇಂದ್ರ: ಸೌಲಭ್ಯ ಮರಿಚಿಕೆ

ಗ್ರಾಮದಲ್ಲಿ ಬೆಳೆದು ನಿಂತ ಜೀನಿ ಜಾಲಿ ಮರಗಳು
ಮಹಾಂತೇಶ ವೀ.ನೂಲಿನವರ 
Published 26 ಜೂನ್ 2024, 4:39 IST
Last Updated 26 ಜೂನ್ 2024, 4:39 IST
ಅಕ್ಷರ ಗಾತ್ರ

ನಾಲತವಾಡ: ಸಮೀಪದ ಟಕ್ಕಳಕಿ-ಇಂಗಳಗಿ ಕೃಷ್ಣಾ ನದಿ ತೀರದ ಪುನರ್ವಸತಿಯ ಪುಟ್ಟ ಗ್ರಾಮಗಳು.  ಎರಡೂ ಗ್ರಾಮಗಳು ಪುನರ್ವಸತಿ ಕೇಂದ್ರಗಳಾಗುವ ಪೂರ್ವದಲ್ಲಿ ಬೇರೆ ಬೇರೆ ಆಗಿದ್ದವು. ಇದೀಗ ಎರಡೂ ಗ್ರಾಮಗಳು ಒಂದೇ ಪ್ರದೇಶದಲ್ಲಿ ಪುನರ್ವಸತಿ ಪಡೆದಿವೆ.

ಒಂದೇ ಪ್ರದೇಶದಲ್ಲಿ ಇದ್ದರೂ ಗ್ರಾಮದ ದೇವರು, ದೈವ, ಹಿರಿಯರ ನ್ಯಾಯ ಪಂಚಾಯಿತಿ ಸಭೆ ಬೇರೆ ಬೇರೆಯೇ ಆಗಿ ಪ್ರತಿಷ್ಠೆಯಲ್ಲಿವೆ. ಎರಡೂ ಗ್ರಾಮಗಳನ್ನು ಪುಟ್ಟ ರಸ್ತೆಯೊಂದು ಇಬ್ಬಾಗಿಸಿದೆ ಅಷ್ಟೇ.

ಕೃಷ್ಣಾ ನದಿ ತೀರದ ಬಹುತೇಕ ಗ್ರಾಮಗಳು ಮುಖ್ಯ ರಸ್ತೆಗೆ ಸಮೀಪದಲ್ಲೇ ಇವೆ. ಆದರೆ, ಟಕ್ಕಳಕಿ-ಇಂಗಳಗಿ ಗ್ರಾಮಗಳು ಮುಖ್ಯ ರಸ್ತೆಯಿಂದ ಬಹು ದೂರದಲ್ಲಿ ಹೋದಾಗ, ಮುಳ್ಳು ಕಂಟಿ ಆವರಿಸಿಕೊಂಡು ಕುಗ್ರಾಮಗಳಂತೆ ಕಾಣಿಸುತ್ತವೆ.

ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜೀನಿ ಜಾಲಿ ಮರಗಳು ಬೆಳೆದು ನಿಂತಿವೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಅರಣ್ಯದ ಮರ ಹಾಗೂ ಭೂಮಿ ಅತಿಕ್ರಮಣ ಗೊಂಡಿವೆ. ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜೀನಿ ಜಾಲಿ ಮರಗಳು ಬೆಳೆದು ನಿಂತಿರುವುದನ್ನು ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯಡಿ ತೆರವುಗೊಳಿಸಬೇಕಾದ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ.

ಟಕ್ಕಳಕಿ-ಇಂಗಳಗಿ ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ಇಲ್ಲಿ ಮೊಬೈಲ್ ಟವರ್ ಇಲ್ಲದಿರುವುದು ದುರದೃಷ್ಟಕರ. ವಿವಿಧ ಯೋಜನೆಗಳಿಗೆ ಬಯೋಮೆಟ್ರಿಕ್ ಮಾಡುವುದು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆಗದೇ ಸಮಸ್ಯೆ ಅನುಭವಿಸುತ್ತಿದ್ದಾರೆ.

ಶಿಕ್ಷಕರು ನಿತ್ಯ ಮಕ್ಕಳ ಮಾಹಿತಿಯನ್ನು ಆನ್‌ಲೈನ್ ಮೂಲಕ ದಾಖಲಿಸಲು ನಿತ್ಯ ಪರದಾಡಬೇಕಿದೆ. ಸಾರ್ವಜನಿಕರು ಮನೆಯ ಹೊರಗಡೆ ಮೇಲಕ್ಕೆ ಜಂತಿಗೆ ಕಟ್ಟಿದ ಫೋನ್ ಬಂದರೆ ಮಾಳಿಗೆ ಏರಿಯೇ ಮಾತನಾಡಬೇಕು.

ಇಲ್ಲಿ ನೂತನ ಶಾಲೆ ಇದೆ. ಅಂದದ ವರ್ಗ ಕೋಣಿಗಳೂ ಇವೆ. ಆದರೆ, ಶಾಲೆಗೆ ಕಾಂಪೌಂಡ್ ಇಲ್ಲ. ಕಟ್ಟ ನಿರ್ಮಾಣ ಕಾರ್ಯ ಮಾಡಬೇಕಾದ ಬಿಜ್ಜೂರ ಗ್ರಾಮ ಪಂಚಾಯಿತಿ ಕಣ್ಣು ಮುಚ್ಚಿ ಕುಳಿತಿದೆ.

ನದಿಯ ಸಮೀಪದಲ್ಲಿರುವ ಗ್ರಾಮದ ಬಹುತೇಕ ಭಾಗದ ಜಮೀನುಗಳು ರೈತರ ಸ್ವಂತ ಪಂಪ್‌ಸೆಟ್‌ ಮೂಲಕ ನೀರಾವರಿಗೆ ಒಳಪಟ್ಟಿವೆ. ಕಬ್ಬು ಮೆಣಸಿನಕಾಯಿ ಪ್ರಮುಖ ಬೆಳೆಗಳಾಗಿದ್ದು, ಸದ್ಯ ಸುತ್ತಮುತ್ತಲ ಹಲವು ಹೊಲಗಳು ಜೌಗು ಪ್ರದೇಶವಾಗುತ್ತಿರುವುದು ರೈತರಿಗೆ ತಲೆನೋವಾಗಿದೆ.

ಗ್ರಾಮದ ಮನೆ ಮನೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ ಅಗತ್ಯವಿದ್ದು, ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳನ್ನು ಕಳೆದ ವರ್ಷ ಹಾಕಲಾಗಿದೆ. ಅದರಲ್ಲಿ ನೀರು ಬಂದಿಲ್ಲದಿದ್ದರೂ ಕಿಡಿಗೇಡಿಗಳಿಂದ ಹಾನಿಗೊಳಗಾಗಿವೆ. ಶುದ್ಧ ಕುಡಿಯುವ ನೀರಿನ ಘಟಕಗಳೂ ಕೆಟ್ಟು ಹೋಗಿವೆ.

ಕೂಗಳತೆಯ ದೂರದಲ್ಲಿರುವ ನದಿಗೆ ಮಹಾಪುರ ಬಂದಾಗ, ಬೇಸಿಗೆಯಲ್ಲಿ ಹಾವು, ಮೊಸಳೆ ಕಾಟ ಜನರಿಗೆ ತಪ್ಪಿಲ್ಲ. ಗ್ರಾಮ ಪುನರ್ವಸತಿ ಕೇಂದ್ರವಾದ್ದರಿಂದ ಎರಡೂ ಗ್ರಾಮಗಳ ಎಲ್ಲ ಧರ್ಮೀಯರಿಗೆ ಧಾರ್ಮಿಕ ಕಾರ್ಯಕ್ರಮಕ್ಕೆಂದು ಕಟ್ಟಿದ ದೇವಸ್ಥಾನ, ಸಭಾ ಭವನಗಳು, ಮುಖ್ಯವಾಗಿ ಅಂಗನವಾಡಿ ಶಾಲೆಗಳು ಈಗಲೋ, ಆಗಲೋ ಬೀಳುವ ಹಂತದಲ್ಲಿವೆ. ಅಂಗನವಾಡಿ ಕೇಂದ್ರಗಳು ಬಿದ್ದು ಮಕ್ಕಳಿಗೆ ಜೀವ ಹಾನಿಯಾದರೆ ಗತಿ ಏನು? ಎಂಬುದೇ ಎಲ್ಲರ ಚಿಂತೆ.

ಟಕ್ಕಳಕಿ ಇಂಗಳಗಿ ಪುನರ್ವಸತಿ ಗ್ರಾಮದಲ್ಲಿ ಶಿಥಿಲವಾದ ಅಂಗನವಾಡಿಗೆ ಸ್ವಾಗತಿಸುತ್ತಿರುವ ಮುಳ್ಳು ಕಂಠಿಗಳು

ಟಕ್ಕಳಕಿ ಇಂಗಳಗಿ ಪುನರ್ವಸತಿ ಗ್ರಾಮದಲ್ಲಿ ಶಿಥಿಲವಾದ ಅಂಗನವಾಡಿಗೆ ಸ್ವಾಗತಿಸುತ್ತಿರುವ ಮುಳ್ಳು ಕಂಠಿಗಳು

ಟಕ್ಕಳಕಿ ಇಂಗಳಗಿ ಪುನರ್ವಸತಿ ಗ್ರಾಮಕ್ಕೆ ಸ್ವಾಗತಿಸುತ್ತಿರುವ ಮುಳ್ಳು ಕಂಠಿಗಳು

ಟಕ್ಕಳಕಿ ಇಂಗಳಗಿ ಪುನರ್ವಸತಿ ಗ್ರಾಮಕ್ಕೆ ಸ್ವಾಗತಿಸುತ್ತಿರುವ ಮುಳ್ಳು ಕಂಠಿಗಳು

ಯಾರು ಏನಂದರು?

ಮಾರುತಿ ದೇವಸ್ಥಾನ ಸೇರಿದಂತೆ ಎಲ್ಲ ದೇಗುಲಗಳು ಜೀರ್ಣೋದ್ಧಾರ ಆಗಬೇಕು. ಜನರ ಧಾರ್ಮಿಕ ಭಾವನೆಗಳನ್ನು ರಾಜಕಾರಣಿಗಳು ಗೌರವಿಸಿ ಜೀರ್ಣೋದ್ಧಾರ ಮಾಡಲಿ - ಜಗದೀಶ ಹುನಗುಂದ ಟಕ್ಕಳಕಿ ಗ್ರಾಮಸ್ಥ

ಊರಿಗೆ ಬರುವಾಗ ನಮ್ಮನ್ನು ಸ್ವಾಗತಿಸುವಂತಿರುವ ಮುಳ್ಳು ಕಂಟಿಗಳನ್ನು ನೋಡಿದರೆ ಭಯವಾಗುತ್ತದೆ. ಪಂಚಾಯಿತಿಯವರು ಕಟಾವಿಗೆ ಕ್ರಮವಹಿಸಬೇಕು – ಅಮರೇಶ ಪಾಟೀಲ ಸ್ಥಳೀಯರು

ಆದ್ಯತೆಯ ಮೇರೆಗೆ ಕ್ರಿಯಾಯೋಜನೆ ರೂಪಿಸಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು – ಪಿ.ಎಚ್‌.ಕುಂಬಾರ ಪಿಡಿಒ ಬಿಜ್ಜರಗಿ ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT