ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾಪುರ ಸ್ಥಳಾಂತರ ಪ್ರಕ್ರಿಯೆ ಆರಂಭ: ಡಿಸಿ ಪಿ.ಸುನೀಲ್‌ಕುಮಾರ್‌

ವಿಜಯಪುರ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಮುನ್ನೆಚ್ಚರಿಕೆ ಕ್ರಮ; ಸಿಎಂ ವಿಡಿಯೊ ಸಂವಾದ
Last Updated 19 ಜೂನ್ 2021, 13:29 IST
ಅಕ್ಷರ ಗಾತ್ರ

ವಿಜಯಪುರ: ಸೊನ್ನ ಬ್ಯಾರೇಜ್‍ನ ಹಿನ್ನೀರಿನಿಂದಾಗಿ ಸಿಂದಗಿ ತಾಲ್ಲೂಕಿನ ತಾರಾಪುರ ಗ್ರಾಮವು ಪ್ರತಿ ವರ್ಷವೂ ಪೂರ್ಣ ಜಲಾವೃತಗೊಂಡು ಜನವಸತಿ ಪ್ರದೇಶಕ್ಕೆ ತೀವ್ರ ತೊಂದರೆಯಾಗುತ್ತಿರುವುದರಿಂದ ಹಾಗೂ ಪ್ರತಿ ವರ್ಷ ಭೀಮಾ ನದಿಯ ಪ್ರವಾಹಕ್ಕೆ ಒಳಪಡುತ್ತಿರುವುದರಿಂದ ಗ್ರಾಮದ ಜನವಸತಿ ಪ್ರದೇಶವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಜಿಲ್ಲೆಯ ಪ್ರವಾಹ ಪರಿಸ್ಥಿತಿಗೆ ಸಂಬಂಧಪಟ್ಟಂತೆನಡೆಸಿದವಿಡಿಯೊ ಸಂವಾದಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿನ ಪ್ರವಾಹದ ಸ್ಥಿತಿಗತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಬಾಕಿ ಇರುವ 47 ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಈವರೆಗೆ ಒಟ್ಟಾರೆ 246 ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಹರಿಬಿಡುವಾಗ ಕೆಳಭಾಗದ ಜಿಲ್ಲೆಗಳ ಸಂಬಂಧಿಸಿದ ಅಧಿಕಾರಿಗಳ ಜೊತೆಯೂ ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಅದರ ಬಗ್ಗೆ ಮಾಹಿತಿ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸದ್ಯ ಭೀಮಾ, ಕೃಷ್ಣಾ ಮತ್ತು ಡೋಣಿ ನದಿಯಲ್ಲಿ ಅಪಾಯ ಮಟ್ಟದ ಹರಿವು ಇರುವುದಿಲ್ಲ. ಪ್ರವಾಹಕ್ಕೆ ತುತ್ತಾಗಬಹುದಾದ ಹಳ್ಳಿಗಳನ್ನು ಈಗಾಗಲೇ ಗುರುತಿಸಿದ್ದು, ಪ್ರವಾಹವನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರುವಿಡಿಯೊ ಸಂವಾದದಲ್ಲಿ ಪಾಲ್ಗೊಂಡು, ಹೋದ ವರ್ಷ ಭೀಮಾ ನದಿಯಲ್ಲಿ ಪ್ರವಾಹ ಉಂಟಾದಾಗ ಸಿಂದಗಿ ತಾಲ್ಲೂಕಿನ ತಾರಾಪುರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ತಾರಾಪುರ ಜನರ ಕೆಲವು ಸಣ್ಣ-ಪುಟ್ಟ ಬೇಡಿಕೆಗಳ ಬಗ್ಗೆ ಹಾಗೂ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಮುಂದಿನ ವಾರ ಖುದ್ದಾಗಿ ಭೇಟಿ ನೀಡಿ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗೆ ವಿವರಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಬಬಲೇಶ್ವರ ತಾಲ್ಲೂಕಿನ ತೊನಶ್ಯಾಳ ಮತ್ತು ತಿಕೋಟಾ ತಾಲ್ಲೂಕಿನ ಕೋಟ್ಯಾಳ ಗ್ರಾಮಗಳು ಪ್ರತಿ ವರ್ಷ ಡೋಣಿ ನದಿಯ ಪ್ರವಾಹಕ್ಕೆ ಒಳಗಾಗುತ್ತಿದ್ದು, ಈ ಗ್ರಾಮಗಳ ಸ್ಥಳಾಂತರಕ್ಕೆ ಇರುವ ಅಡೆತಡೆಗಳನ್ನು ಇತ್ಯರ್ಥಪಡಿಸಲು ಹಾಗೂ ನದಿಯ ಪಾತ್ರದಲ್ಲಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಸೂಕ್ತ ಕ್ರಮ ಕೈಕೊಳ್ಳಲು ಸೂಚಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಡೋಣಿ ನದಿಯಲ್ಲಿ ಪ್ರತಿ ವರ್ಷ ಏಕಾಏಕಿ ಪ್ರವಾಹ(ಫ್ಲಾಶ್ ಫ್ಲಡ್) ಸಂಭವಿಸುತ್ತಿರುತ್ತದೆ. ನಿರಂತರವಾಗಿ ಹೂಳು ಸಮಸ್ಯೆ ಎದುರಾಗುತ್ತಿದ್ದು, ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಹಾಗೂ ಸೂಕ್ತ ಸ್ಥಳಗಳಲ್ಲಿ ಕ್ರಿಟಿಕಲ್ ಬಂಡ್‍ಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಕೊಳ್ಳಲು ಸೂಚಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ,ಮಹಾರಾಷ್ಟ್ರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಈಗಾಗಲೇ ಮಾತುಕತೆ ಜರುಗಿಸಿದ್ದು, ಅಲ್ಲಿನ ಜಲಾಶಯಗಳಿಂದ ನೀರು ಬಿಡುವಾಗ ಕೆಳಮಟ್ಟದ ಜಲಾಶಯಗಳ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಯಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಕೋರಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ರಾಹುಲ್‌ ಶಿಂಧೆ, ಬಲರಾಮ ಲಮಾಣಿ ಇದ್ದರು.

***

ಜಿಲ್ಲೆಯಲ್ಲಿ ಪ್ರವಾಹಕ್ಕೆ ಒಳಗಾಗುವ 30 ಗ್ರಾಮ ಪಂಚಾಯ್ತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ, ಅಗತ್ಯ ಸಿದ್ಧತೆ ಮತ್ತು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ

- ಪಿ.ಸುನೀಲ್ ಕುಮಾರ್‌,ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT