ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಮಾದರಿ ಕೋವಿಡ್‌ ಲಸಿಕೆ ಹಾಕಲು ವ್ಯವಸ್ಥೆ

ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಪೂರ್ವಾಭ್ಯಾಸ ಯಶಸ್ವಿ
Last Updated 8 ಜನವರಿ 2021, 11:55 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಬಿಎಲ್‍ಡಿಇ ವೈದ್ಯಕೀಯ ಮಹಾವಿದ್ಯಾಲಯ, ಬಸವನಬಾಗೇವಾಡಿ ತಾಲ್ಲೂಕು ಆಸ್ಪತ್ರೆ, ಮನಗೂಳಿ ಸಮುದಾಯ ಆರೋಗ್ಯ ಕೇಂದ್ರ, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ವಿಜಯಪುರ ದರ್ಗಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಹಾಕುವ ಪೂರ್ವಾಭ್ಯಾಸ(ಅಣಕು) ಯಶಸ್ವಿಯಾಗಿ ನಡೆಯಿತು.

ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಕೋವಿಡ್-19 ವ್ಯಾಕ್ಸಿನೇಶನ್ ಪೂರ್ವಾಭ್ಯಾಸಕ್ಕೆ (ಡ್ರೈ-ರನ್) ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಚಾಲನೆ ನೀಡಿದರು.

ಆಸ್ಪತ್ರೆಯಲ್ಲಿ ಲಸಿಕೆ ನೀಡಲು ಸ್ಥಾಪಿಸಲಾಗಿರುವ ನೋಂದಣಿ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಗಳನ್ನು ಪರಿಶೀಲಿಸಿದರು.

ಕೊವಿನ್ ತಂತ್ರಾಂಶದಲ್ಲಿ ನೋಂದಣಿ ಮಾಡುವ ಕ್ರಮ, ಲಸಿಕೆ ಸಂಗ್ರಹ, ಲಸಿಕೆ ಸಾಗಣೆ, ಡಿ-ಫ್ರೀಜ್ ಕಾರ್ಯಕ್ಕೆ ಮಾಡಿಕೊಂಡಿರುವ ಸಿದ್ಧತೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಚುನಾವಣೆ ಮಾದರಿ:

ಈ ಸಂಬಂಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಕೋವಿಡ್‌ ಲಸಿಕಾ ಕಾರ್ಯಕ್ರಮವನ್ನು ಚುನಾವಣೆ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

ಪ್ರಥಮ ಹಂತದಲ್ಲಿ ಅಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯಲ್ಲಿ 15,318ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೇ ಬಿಟ್ಟುಹೋಗಿರುವವರ ಸೇರ್ಪಡೆಗೆ ಅವಕಾಶ ಇದೆ ಎಂದರು.

ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ಹಾಕುವ ಸಂಬಂಧಜಿಲ್ಲೆಯಲ್ಲಿ 90 ವ್ಯಾಕ್ಸಿನೇಶನ್‌ ಕೇಂದ್ರಗಳನ್ನು‌ ಗುರುತಿಸಲಾಗಿದೆ. ಒಂದು ಕೇಂದ್ರದಲ್ಲಿ ಪ್ರತಿ ದಿನ 100 ಜನರಿಗೆ ಲಸಿಕೆ ಹಾಕಲಾಗುವುದು ಎಂದು ಹೇಳಿದರು.

ಪ್ರತಿ ವ್ಯಾಕ್ಸಿನೇಶನ್‌ ಕೇಂದ್ರದನಲ್ಲಿ ಐದು ಜನ ಸಿಬ್ಬಂದಿ ಇರಲಿದ್ದಾರೆ. ಅವರ ಬಳಿ ಲಸಿಕೆ ಪಡೆಯುವರ ಪಟ್ಟಿ ಇರಲಿದೆ. ಅದನ್ನು ಪರಿಶೀಲಿಸಿ ಒಬ್ಬೊಬ್ಬರನ್ನು ಸರದಿಯಾಗಿ ಒಳಗೆ ಕಳುಹಿಸಲಾಗುತ್ತದೆ. ಲಸಿಕೆ ಪಡೆಯುವವರು ವೇಟಿಂಗ್‌ ರೂಂನಲ್ಲಿ ಕೂರಬೇಕಾಗುತ್ತದೆ. ಕೋವಿನ್‌ ತಂತ್ರಾಂಶದಲ್ಲಿ ಅವರ ಹೆಸರು ನೋಂದಾಣಿಯಾಗಿರುವನ್ನು ಸಿಬ್ಬಂದಿ ಖಚಿತಪಡಿಸಿಕೊಂಡ ಬಳಿಕ ಲಸಿಕೆ ಹಾಕುತ್ತಾರೆ ಎಂದರು.

ಲಸಿಕೆ ಹಾಕಿಸಿಕೊಂಡ ಬಳಿಕ ವ್ಯಾಕ್ಸಿನೇಶನ್‌ ಕೇರ್‌ ಸೆಂಟರ್‌ನಲ್ಲಿ ಅರ್ಧ ತಾಸು ಕಾಯಬೇಕಾಗುತ್ತದೆ. ಯಾವುದೇ ಅಡ್ಡಪರಿಣಾಮ ಆಗದಿದ್ದರೆ ಮನೆಗೆ ಹೋಗಬಹುದು. ಒಂದು ವೇಳೆ ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ವ್ಯತ್ಯಾಸವಾದರೆ ತಜ್ಞವೈದ್ಯರ ತಂಡವು ತಕ್ಷಣ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.

ಲಸಿಕೆ ಯಾವಾಗ ಜಿಲ್ಲೆಗೆ ಬರುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಲಸಿಕೆ ಹಾಕುವ ಸಂಬಂಧ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಎರಡನೇ ಹಂತದಲ್ಲಿ ಕೋರೊನಾ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಹಾಗೂ ಇತರೆಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು.ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಕಲಾಗುವುದು. ಈ ಬಗ್ಗೆ ಸರ್ಕಾರದಿಂದ ಅಗತ್ಯ ಮಾರ್ಗದರ್ಶನ ಬರಲಿದೆ ಎಂದು ತಿಳಿಸಿದರು.

ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ

ವಿಜಯಪುರದ ದರ್ಗಾ ಬಳಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಸಿಕಾ ತಾಲೀಮು ಪರಿಶೀಲಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ಡಾ.ಎಂ.ಬಿ.ಬಿರಾದಾರ, ಡಾ. ಹರೀಶ್‌ ಪೂಜಾರ ಇದ್ದರು.

***

ಶಾಲೆ, ಕಾಲೇಜು ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಕಡ್ಡಾಯವಲ್ಲ. ಲಕ್ಷಣ ಇದ್ದರೆ ಮಾತ್ರ ಪರೀಕ್ಷೆ ಮಾಡಲಾಗುತ್ತದೆ. ಆದರೆ, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಲಾಗಿದೆ

- ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT