ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಲಗೆಯಿದ್ದ ಜಾಗದಲ್ಲೀಗ ಕಂಚಿನ ಪ್ರತಿಮೆ..!

ತಿಕೋಟಾದಲ್ಲಿ ಕಂಗೊಳಿಸುತ್ತಿರುವ ಅಶ್ವಾರೂಢ ಬಸವೇಶ್ವರ ವೃತ್ತ
Last Updated 22 ಡಿಸೆಂಬರ್ 2018, 19:43 IST
ಅಕ್ಷರ ಗಾತ್ರ

ತಿಕೋಟಾ:ಗಣೇಶೋತ್ಸವ ಆಚರಿಸುತ್ತಿದ್ದ ಸಮಾನ ಮನಸ್ಕ ಗೆಳೆಯರ ಬಳಗದ ತಲೆಯಲ್ಲಿ ಹೊಳೆದ ಆಲೋಚನೆಯ ಫಲವಾಗಿ ಕಡ್ಡು ಬೆಳೆದಿದ್ದ ಜಾಗದಲ್ಲಿ ಮಧ್ಯರಾತ್ರಿ ಅಸ್ಥಿತ್ವಕ್ಕೆ ಬಂದ ಬಸವೇಶ್ವರ ವೃತ್ತ, ಇದೀಗ ಅಭಿವೃದ್ಧಿಗೊಂಡು ಎಲ್ಲರನ್ನೂ ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುವ ಕೇಂದ್ರ ಬಿಂದುವಾಗಿದೆ.

ಗ್ರಾಮದ ಹೃದಯ ಭಾಗದಲ್ಲಿ 25 ವರ್ಷಗಳ ಹಿಂದೆ ಕಪ್ಪು ಹಲಗೆಯಿಂದ ಬಸವೇಶ್ವರ ವೃತ್ತ ಸ್ಥಾಪನೆಗೊಂಡಿತು. ಎರಡು ವರ್ಷದ ಹಿಂದೆ ಮಠಾಧೀಶರು, ರಾಜಕೀಯ ನಾಯಕರು. ದಾನಿಗಳ ಸಹಾಯ, ಸಹಕಾರದಿಂದ ಬೃಹದಾಕಾರದ 25 ಅಡಿ ಕಂಚಿನ ಅಶ್ವಾರೂಢ ಬಸವೇಶ್ವರ ವೃತ್ತ ನಿರ್ಮಾಣಗೊಂಡಿದ್ದು, ಇದೀಗ ಆಕರ್ಷಣೀಯ ತಾಣವಾಗಿ ಕಂಗೊಳಿಸುತ್ತಿದೆ. ಇದು ಬಸ್‌ ನಿಲ್ದಾಣದಿಂದ ಪೂರ್ವ ದಿಕ್ಕಿನಲ್ಲಿ ಮೂರು ಮಾರ್ಗಗಳು ಸೇರುವ ರಸ್ತೆ ಮಧ್ಯದಲ್ಲಿದೆ.

‘25 ವರ್ಷಗಳ ಹಿಂದೆ ಗಣೇಶ ಉತ್ಸವದಲ್ಲಿ ತೊಡಗಿದ್ದ ಗ್ರಾಮದ ಯುವಕರು, ಉತ್ಸವದ ನೆನಪಿಗಾಗಿ ಏನನ್ನಾದರೂ ಮಾಡಬೇಕು ಎಂಬ ತುಡಿತ ಹೊಂದಿದ್ದರು. ಆ ವೇಳೆಯಲ್ಲಿ ಊರಿಗೆ ಬಂದಿದ್ದ ನನಗೆ ಹೊಳೆದಿದ್ದೇ ಬಸವೇಶ್ವರ ವೃತ್ತ ಮಾಡಬೇಕೆಂದು. ಸ್ನೇಹಿತರ ಬಳಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ ಎಲ್ಲರೂ ಖುಷಿಯಿಂದಲೇ ಒಪ್ಪಿಕೊಂಡು ವಿಜಯಪುರ ಮಾರ್ಗದಲ್ಲಿ ಕಡ್ಡು ಬೆಳೆದ ಜಾಗದಲ್ಲಿ ವೃತ್ತ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು’ ಎಂದು ಡಾ.ಜಿ.ಎಸ್‌.ಭೂಸಗೊಂಡ ಹೇಳಿದರು.

‘1991ರ ಸೆ.15ರ ಮಧ್ಯರಾತ್ರಿ ಹಿರಿಯರ ಮಾರ್ಗದರ್ಶನವಿಲ್ಲದೆ ಕೆಲಸ ಮಾಡುವುದು ಹೇಗೆ ? ಎಂಬ ಆತಂಕದಿಂದಲೇ ವೃತ್ತ ನಿರ್ಮಾಣಕ್ಕೆ ಕಾರ್ಯ ಪ್ರವೃತ್ತರಾದೆವು. ವೃತ್ತದ ನಾಮಫಲಕಕ್ಕಾಗಿ ಪಂಚಾಯ್ತಿಯಲ್ಲಿನ ನಿರುಪಯುಕ್ತ ತಗಡಿನ ಹಲಗೆ ಹಾಗೂ ಕಬ್ಬಿಣದ ಪೈಪನ್ನು ಗುರ್ಕಿ ಅಪ್ಪು ಹಿಡಿದುಕೊಂಡು ಬಂದರು.

ಮಲಗಿದ್ದ ಈಶ್ವರ ಜೋರಾಪುರ ಅವರನ್ನು ಎಬ್ಬಿಸಿ, ನಿಂಗಪ್ಪ ಬೇವಿನಗಿಡದ ಅವರ ಅಂಗಡಿಯಿಂದ ಕಪ್ಪು ಬಣ್ಣ ತರಿಸಿ, ಬಾನು ಹೊನವಾಡ, ವಿಲಾಸ ಮಾಳಿ ಅವರನ್ನು ಕಂಬಾರ ಭೀಮಣ್ಣನ ಬಳಿ ಕಳುಹಿಸಿ ವೆಲ್ಡಿಂಗ್‌ ಹೊಡೆಸಿಕೊಂಡು ಬರಲು ಹೇಳಲಾಯಿತು. ಎಲ್ಲ ಸಲಕರಣೆಗಳನ್ನು ಸೇರಿಸಿ ಬೋರ್ಡ್‌ ತಯಾರಿಸಿ, ಅದರ ಮೇಲೆ ಸ್ವತಃ ನಾನೇ ಬಸವೇಶ್ವರ ವೃತ್ತ, ತಿಕೋಟಾ ಎಂದು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದೆ’ ಎಂದು ಭೂಸಗೊಂಡ ವೃತ್ತ ನಿರ್ಮಾಣಗೊಂಡ ಬಗೆಯನ್ನು ನೆನಪಿಸಿಕೊಂಡರು.

‘ಹಲವು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿದ್ದ ಬಸವೇಶ್ವರ ವೃತ್ತ ಅಭಿವೃದ್ಧಿಗೊಳಿಸಬೇಕು ಎಂಬ ಆಲೋಚನೆಯೊಂದಿಗೆ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಗೌರವಾಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಎರಡು ವರ್ಷಗಳ ಹಿಂದೆ ಬಸವ ಜಯಂತಿ ದಿನದಂದು ಸಾಂಗಲಿಯ ವಿಜಯ ಗುಜರ ತಯಾರಿಸಿದ 15 ಅಡಿ ಎತ್ತರದ ಅಶ್ವಾರೂಢ ಬಸವೇಶ್ವರರ ಕಂಚಿನ ಮೂರ್ತಿ ಸ್ಥಾಪಿಸಲಾಯಿತು’ ಎಂದು ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಟಿ.ಕೆ.ಹಂಗರಗಿ ತಿಳಿಸಿದರು.

‘ವೃತ್ತ ನಿರ್ಮಾಣಕ್ಕಾಗಿ ರಾಜಕೀಯ ನಾಯಕರು, ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ₹ 32 ಲಕ್ಷ ಸಂಗ್ರಹಿಸಲಾಯಿತು. ₹ 28 ಲಕ್ಷ ವೆಚ್ಚದಲ್ಲಿ ಮೂರ್ತಿ ನಿರ್ಮಾಣ ಹಾಗೂ ಉಳಿದ ಹಣದಲ್ಲಿ ವೃತ್ತದ ನಾಲ್ಕು ಭಾಗದಲ್ಲಿ ಗ್ರ್ಯಾನೈಟ್‌ನಲ್ಲಿ ಅವರ ಹಲವು ವಚನಗಳನ್ನು ಕೆತ್ತಿಸಲಾಗಿದೆ. ಅಲ್ಲದೆ, ಸುತ್ತಲೂ ಕಬ್ಬಿಣದ ಸಲಾಕೆಗಳನ್ನು ಹಾಕಿ ಆವರಣ ನಿರ್ಮಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT