ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶೈಲಂ ದೇವಸ್ಥಾನ: ಸ್ಪರ್ಶ ದರ್ಶನ, ಪಾತಾಳ ಗಂಗೆ ಸ್ನಾನಕ್ಕೆ ನಿರ್ಬಂಧ

ಕೋವಿಡ್‌ ಮಾರ್ಗಸೂಚಿ ಅನುಸರಿಸಲು ಶ್ರೀಶೈಲಂ ಪಾದಯಾತ್ರಿಗಳಿಗೆ ಮನವಿ
Last Updated 22 ಮಾರ್ಚ್ 2021, 12:23 IST
ಅಕ್ಷರ ಗಾತ್ರ

ವಿಜಯಪುರ: ಏಪ್ರಿಲ್‌ನಲ್ಲಿ ನಡೆಯುವ ಯುಗಾದಿ ಉತ್ಸವಕ್ಕೆ ರಾಜ್ಯದಿಂದ ಅಪಾರ ಪ್ರಮಾಣದ ಭಕ್ತಾದಿಗಳು ಶ್ರೀಶೈಲಂ ದೇವಸ್ಥಾನಕ್ಕೆ ತೆರಳುವ ಹಿನ್ನೆಲೆಯಲ್ಲಿ ಕೊರೊನಾ ಮುಂಜಗೃತಾ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಶ್ರೀಶೈಲ ಪೀಠದ 1008 ಚನ್ನಸಿದ್ಧರಾಮ ಶಿವಾಚಾರ್ಯ ಪಂಡಿತಾರಾಧ್ಯ ಅವರು ಶ್ರೀಶೈಲಂಗೆ ತೆರಳುವ ಪಾದಯಾತ್ರಿಗಳಿಗೆ ಮನವಿ ಮಾಡಿದರು.

ನಗರದ ಎ.ಪಿ.ಎಂ.ಸಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಪಾದಯಾತ್ರಿಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಹಿನ್ನೆಲೆಯಲ್ಲಿ ದೇವಸ್ಥಾನದ ಸ್ಪರ್ಶ ದರ್ಶನವನ್ನು ಈ ವರ್ಷವೂ ಕೂಡ ನಿರ್ಬಂಧಿಸಲಾಗಿದೆ ಹಾಗೂ ಪಾತಾಳ ಗಂಗೆಯಲ್ಲಿ ಸ್ನಾನ ಮಾಡಲು ಸಹ ಅವಕಾಶವಿಲ್ಲ ಎಂದು ಅವರು ತಿಳಿಸಿದರು.

ಕರ್ನಾಟಕದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಬರುವವರು ಕೋವಿಡ್‌ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬರಬೇಕು. ಯಾವುದೇ ರೀತಿಯ ಅಪಪ್ರಚಾರದ ಬಗ್ಗೆ ಕಿವಿಗೊಡಬಾರದು ಎಂದು ಹೇಳಿದರು.

ಸುರಕ್ಷಿತ, ಗೌರವ ನಡೆ ಮೂಲಕ ದೇವರ ದರ್ಶನ ಪಡೆಯಬೇಕು. ಭಕ್ತಿಭಾವದಿಂದ ಅವಶ್ಯಕ ಮುನ್ನೆಚ್ಚರಿಕೆಗಳೊಂದಿಗೆ ಈ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ರಾಜ್ಯದ ಅನೇಕ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಾರೆ. ಸುಮಾರು 20 ದಿನಗಳ ವರೆಗೆ ಪಾದಯಾತ್ರೆ ಮಾಡಿ ಶ್ರೀಶೈಲ ತಲುಪಿ ಯುಗಾದಿ ಪುಣ್ಯದಿನದಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆಯಲಿದ್ದಾರೆ ಎಂದರು.

ಯುಗಾದಿ ದಿನದಂದು ನಡೆಯುವ ಶ್ರೀಶೈಲ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಸಲು ದೇವಸ್ಥಾನ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ:

ಕೋವಿಡ್‌ ಹಿನ್ನೆಲೆಯಲ್ಲಿ ಶ್ರೀಶೈಲ ದೇವಸ್ಥಾನದ ದರ್ಶನ ಪಡೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ‘ನೋ ಮಾಸ್ಕ್‌ ನೋ ಎಂಟ್ರಿ’ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಭಕ್ತಾಧಿಗಳು, ಪಾದಯಾತ್ರಿಗಳು ತಪ್ಪದೇ ಮಾಸ್ಕ್ ಧರಿಸಿಕೊಂಡು ದರ್ಶನ ಪಡೆಯುವಂತೆ ಆಂಧ್ರಪ್ರದೇಶ ಸರ್ಕಾರದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ರಾಮಾರಾವ್‌ ತಿಳಿಸಿದ್ದಾರೆ.

ಕಳೆದ ವರ್ಷ ಶ್ರೀಶೈಲಂ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ನಡೆಯುವ ಜಾತ್ರೆಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿತ್ತು. ದೇಶದಾದ್ಯಂತ ಪಾದಯಾತ್ರೆ ಮುಖಾಂತರ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಬಂದಿದ್ದ ಭಕ್ತರು ಸಂಕಷ್ಟ ಎದುರಿಸುವಂತಾಗಿತ್ತು. ಈ ಬಾರಿ ದರ್ಶನ ಪಡೆಯಲು ಯಾವುದೇ ನಿರ್ಬಂಧ ಇಲ್ಲದಿದ್ದರೂ ಕೂಡ ಕೇಂದ್ರ ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿದರು.

ಮುನ್ನೆಚ್ಚರಿಕೆಯಾಗಿ ವಿಜಯಪುರ ಜಿಲ್ಲೆಯಿಂದ ಶ್ರೀಶೈಲಕ್ಕೆ ಹೋಗುವ ಪಾದಯಾತ್ರಾರ್ಥಿಗಳು ಮತ್ತು ಭಕ್ತರು ತಪ್ಪದೇ ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ, ಕೋವಿಡ್-19 ಲಸಿಕಾ ಪ್ರಮಾಣ ಪತ್ರ (45 ವರ್ಷದಿಂದ 60 ವರ್ಷದವರು) ತಮ್ಮೊಂದಿಗೆ ಇಟ್ಟುಕೊಂಡಿರಬೇಕು ಎಂದರು.

ಯಾತ್ರಾರ್ಥಿಗಳು ಸೈನಿಟೈಸರ್ ಬಳಸಬೇಕು, ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪಾದಯಾತ್ರೆ ಸಾಗುವ ಮಾರ್ಗ ಮಧ್ಯೆ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಭಕ್ತಿ ಸೇವೆಸಲ್ಲಿಸಲು ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದಿದ್ದರೂ ಕೂಡ ಕೋವಿಡ್ ನಿಯಮಗಳನ್ನು ಭಕ್ತರು ತಪ್ಪದೇ ಪಾಲಿಸುವಂತೆ ಅವರು ಮನವಿ ಮಾಡಿದರು.

ರೇಣುಕಾಚಾರ್ಯ ಜೈನಾಪೂರ, ಕರಬಂಟನಾಳದ ಶಿವಕುಮಾರ ಮಹಾಸ್ವಾಮಿ, ರವಿ ಬಿಜ್ಜರಗಿ, ನೀಲೇಶ್ ಶಹಾ, ನೀಲಕಂಠೇಶ್ವರ ಪಾದಯಾತ್ರಾ ಸಮಿತಿ ಅಧ್ಯಕ್ಷ ಸತೀಶ್ ಗಾಯಕವಾಡ್, ಉಪಾಧ್ಯಕ್ಷ ಈರಣ್ಣ ಹಾಗೂ ಕಮಿಟಿಯ ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.

* 60 ವರ್ಷ ಮೇಲ್ಪಟ್ಟ ಹಿರಿಯರು, ಮಹಿಳೆಯರು, ಮಕ್ಕಳು ಶ್ರೀಶೈಲ ಯಾತ್ರೆಯಿಂದ ದೂರ ಉಳಿಯುವುದು ಸೂಕ್ತ. ಶ್ರೀಶೈಲಕ್ಕೆ ಭೇಟಿ ನೀಡಿದ ಭಕ್ತರು ದೇವಸ್ಥಾನದ ದರ್ಶನ ಪಡೆದ ತಕ್ಷಣ ತಮ್ಮ ಊರುಗಳಿಗೆ ತೆರಳಬೇಕು

–ಕೆ.ಎಸ್. ರಾಮಾರಾವ್‌, ವಿಶೇಷ ಡೆಪ್ಯೂಟಿ ಕಲೆಕ್ಟರ್,ಆಂಧ್ರಪ್ರದೇಶ

ಧರ್ಮ ರಥಯಾತ್ರೆ ಮೆರವಣಿಗೆ

ವಿಜಯಪುರ: ಶ್ರೀಶೈಲ ಜಾತ್ರಾಮಹೋತ್ಸವದ ಜಾಗೃತಿಗಾಗಿ ನಾಡಿನಾದ್ಯಂತ ಸಂಚರಿಸುತ್ತಿರುವಭ್ರಮರಾಂಬ ಮಲ್ಲಿಕಾರ್ಜುನ ಧರ್ಮ ರಥಯಾತ್ರೆಯ ಮೆರವಣಿಗೆ ನಗರದಲ್ಲಿ ಸೋಮವಾರ ನಡೆಯಿತು.

ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ್ದ ರಥಯಾತ್ರೆಯನ್ನು ಪವಾಡ ಬಸವೇಶ್ಚರ ಮಹಾದ್ವಾರದ ಮೂಲಕ ಸ್ವಾಗತಿಸಿ, ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಎಪಿಎಂಸಿ ಯಾರ್ಡ್‌ಗೆ ಕರೆದೊಯ್ಯಲಾಗಿತ್ತು.

ಆಲಂಕೃತಗೊಂಡಿದ್ದ ರಥವನ್ನು ಸೋಮವಾರ ವಾದ್ಯ ಮೇಳದೊಂದಿಗೆ ನಗರದ ಕೋರಿ ಚೌಕ್, ಗಣಪತಿ ಚೌಕ್, ನಾಲಬಂದ ಚೌಕ್, ಗಾಂಧಿ ಚೌಕ್, ಬಸವೇಶ್ವರರಸ್ತೆ, ಸಿದ್ಧೇಶ್ವರ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ಮಾಡಲಾಯಿತು.

ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎಪಿಎಂಸಿ ಯಾರ್ಡ್‌ದಲ್ಲಿನ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿಕಲ್ಯಾಣ ಮಹೋತ್ಸವ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT