ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳಜಾಭವಾನಿ ಹುಂಡಿ ಹಗರಣ: ತನಿಖೆಗೆ ಹೈಕೋರ್ಟ್‌ ಆದೇಶ 

Published 10 ಮೇ 2024, 15:47 IST
Last Updated 10 ಮೇ 2024, 15:47 IST
ಅಕ್ಷರ ಗಾತ್ರ

ಸೋಲಾಪುರ(ಮಹಾರಾಷ್ಟ್ರ): ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಈ ಹಿಂದೆ ನಡೆದಿದ್ದ ₹ 8.45 ಕೋಟಿ ಮೊತ್ತದ ಕಾಣಿಕೆ ಹುಂಡಿ ಹಗರಣವನ್ನು ಕೈಬಿಡಲು ಮುಂದಾಗಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್‌ ತೀರ್ಪಿನಿಂದ ಭಾರೀ ಹಿನ್ನೆಡೆಯಾಗಿದೆ.

ಹಗರಣದ ತನಿಖೆಯನ್ನು ಮುಚ್ಚುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಮುಂಬೈ ಹೈಕೋರ್ಟ್‌ನ ಸಂಭಾಜಿನಗರ ವಿಭಾಗೀಯ ಪೀಠವು ರದ್ದುಗೊಳಿಸಿದೆ. ಅಲ್ಲದೆ, ಈ ಮೊದಲಿನ ತನಿಖಾ ಸಮಿತಿಯು ದೋಷಿಯೆಂದು ನಿರ್ಧರಿಸಿದ ಹರಾಜುದಾರರು, ದೇವಸ್ಥಾನದ ನೌಕರರು, ಟ್ರಸ್ಟಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 16 ಅಪರಾಧಿಗಳ ವಿರುದ್ಧ ತುಳಜಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶಿಸಿದೆ.

ಜೊತೆಗೆ ಅಪರಾಧ ತನಿಖಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಹಿರಿಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸಹ ಆದೇಶಿಸಲಾಗಿದೆ.

ಹೋರಾಟಕ್ಕೆ ಜಯ: ‘ಕಳೆದ 9 ವರ್ಷಗಳಿಂದ ನ್ಯಾಯಾಂಗ ಹೋರಾಟ ನಡೆಸಿದ ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ  ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದ್ದು, ಈ ನಿರ್ಧಾರವು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಗೋವಾ ಸೇರಿದಂತೆ ದೇಶದ ಕೋಟ್ಯಂತರ ಭಕ್ತರಿಗೆ ಸಂತಸ ಮತ್ತು ಸಮಾಧಾನ ತಂದಿದೆ. ದೇವರನಿಧಿ ಲೂಟಿ ಮಾಡುವ ಭ್ರಷ್ಟರಿಗೆ ಶಿಕ್ಷೆಯಾಗುವವರೆಗೂ ನಾವು ಈ ಪ್ರಕರಣವನ್ನು ಬೆಂಬತ್ತುತ್ತೇವೆ’ ಎಂದು ಹಿಂದೂ ಜನಜಾಗೃತಿ ಸಮಿತಿಯು ತಿಳಿಸಿದೆ.

ಪ್ರಕರಣದ ಹಿನ್ನೆಲೆ: 1991 ರಿಂದ 2009 ರ ಅವಧಿಯಲ್ಲಿ ಕಾಣಿಕೆ ಹುಂಡಿಯ ಹರಾಜಿನಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಹಾರಾಷ್ಟ್ರ ವಿಧಾನಮಂಡಲದಲ್ಲಿ ಚರ್ಚೆಯಾಗಿತ್ತು.

2011 ರಲ್ಲಿ ಅಂದಿನ ಮುಖ್ಯಮಂತ್ರಿ ಅಶೋಕ್ ಚವಾಣ್ ನೀಡಿದ ಸೂಚನೆಯಂತೆ ರಾಜ್ಯ ಅಪರಾಧ ತನಿಖಾ ಇಲಾಖೆಯಿಂದ ಈ ಹಗರಣದ ತನಿಖೆಯನ್ನು ಪ್ರಾರಂಭಿಸಲಾಯಿತು. ಆದರೆ, ಆಡಳಿತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿರುವುದರಿಂದ 5 ವರ್ಷ ಕಳೆದರೂ ತನಿಖೆ ಪ್ರಗತಿ ಕಾಣಿಸಲಿಲ್ಲ. ಆದ್ದರಿಂದ ಹಿಂದೂ ಜನಜಾಗೃತಿ ಸಮಿತಿಯು 2015 ರಲ್ಲಿ ಹಿಂದೂ ವಿಧಿಜ್ಞ ಪರಿಷದ್ ಸಹಾಯದಿಂದ ಹೈಕೋರ್ಟ್‌ನ ಸಂಭಾಜಿನಗರ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿತು. ಅಂತಿಮವಾಗಿ, ನ್ಯಾಯಾಲಯದ ಆದೇಶದಂತೆ, 2017 ರಲ್ಲಿ ಗೃಹ ಇಲಾಖೆಗೆ ತನಿಖಾ ವರದಿಯನ್ನು ಸಲ್ಲಿಸಲಾಯಿತು. ಆದರೆ, ಐದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಿತಿ 2022ರಲ್ಲಿ ಮತ್ತೆ ಮನವಿ ಸಲ್ಲಿಸಿತ್ತು.

'ಐದು ವರ್ಷ ಕಳೆದರೂ ತಪ್ಪಿತಸ್ಥರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?’ ಎಂದು ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಶ್ನಿಸಿತ್ತು. ಆಗ ಈ ಪ್ರಕರಣ ಹಳೆಯದೆಂದು ಹೇಳಿ ಸರ್ಕಾರವು ತನಿಖೆಯನ್ನು ಮುಚ್ಚಿರುವುದು ಬೆಳಕಿಗೆ ಬಂದಿದೆ.

ನ್ಯಾಯಮೂರ್ತಿ ಮಂಗೇಶ ಪಾಟೀಲ್ ಮತ್ತು ನ್ಯಾಯಮೂರ್ತಿ ಶೈಲೇಶ ಬ್ರಹ್ಮೆ ಅವರ ವಿಭಾಗೀಯ ಪೀಠದ ಮುಂದೆ ಸಮಿತಿಯ ಪರವಾಗಿ ಹಿರಿಯ ವಕೀಲ ಸಂಜೀವ ದೇಶಪಾಂಡೆ, ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯರಾದ ವಕೀಲ ಸುರೇಶ ಕುಲಕರ್ಣಿ ಮತ್ತು ವಕೀಲ ಉಮೇಶ ಭಡಗಾವಂಕರ ಅವರು ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT