ಮಂಗಳವಾರ, ಸೆಪ್ಟೆಂಬರ್ 21, 2021
21 °C

ಜನರ ಸಂಕಷ್ಟಕ್ಕೆ ಸ್ಪಂದಿಸದ ಯತ್ನಾಳ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಜನ ಸಮಸ್ಯೆ ಅನುಭವಿಸುತ್ತಿದ್ದರೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಎಸ್‌.ಸಿ.ಮೋರ್ಚಾ ಅಧ್ಯಕ್ಷ ಗೋಪಾಲ ಘಟಕಾಂಬಳೆ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ ಅವರು ಮುಖ್ಯಮಂತ್ರಿ, ಸಚಿವರಾಗುವ ಕನಸು ಬಿಟ್ಟು ನಗರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಚುನಾವಣೆ ನಡೆಯದೇ ಎರಡು ವರ್ಷವಾಯಿತು. ಚುನಾವಣೆ ನಡೆಯದಂತೆ ಶಾಸಕರು ತಮ್ಮ ಬೆಂಬಲಿಗರ ಮೂಲಕ ಸುಪ್ರಿಂ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದರ ತೆರವುಗೊಳಿಸಲು ಆಸಕ್ತಿ ವಹಿಸುತ್ತಿಲ್ಲ. ಚುನಾವಣೆ ನಡೆಯದಿದ್ದರೇ ತಮಗೆ ಅನುಕೂಲವಾಗಲಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ, ಇದರಿಂದ ನಗರದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಹೇಳಿದರು.

ಯತ್ನಾಳ ‌ಅವರು ಪಕ್ಷದ ಯಾವೊಬ್ಬ ನಾಯಕರನ್ನು ಬಿಡದೇ ಬೈಯ್ದಿದ್ದಾರೆ. ಇದೀಗ ಮಠಾಧೀಶರನ್ನು ಟೀಕಿಸತೊಡಗಿದ್ದಾರೆ. ಹೀಗಾಗಿ ಅವರು ಪಕ್ಷಕ್ಕೆ ಬೇಡವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಕೊಟ್ಟು ಪಕ್ಷದಿಂದ ಎರಡನೇ ಬಾರಿಗೆ ತಪ್ಪು ಮಾಡಲು ಹೋಗುವುದಿಲ್ಲ ಎಂದರು.

ಯಡಿಯೂರಪ್ಪ ಅವಧಿಯಲ್ಲಿ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಅಭಿವೃದ್ಧಿಗೆ ಹತ್ತು ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಮುಂಬರುವ ದಿನಗಳಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ಬಿಜೆಪಿ ಬೆನ್ನೆಲುಬಾಗಿ ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಂದಗಲ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು