ಶುಕ್ರವಾರ, ಮಾರ್ಚ್ 24, 2023
22 °C

ವಚನಾಮೃತ: ಸರಕು ತುಂಬಿದ ಬಂಡಿ ಶರೀರ

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಪದ್ಮರಾಜ ಒಡೆಯರ ಹಿರೇಮಠ, ಬಸವನಬಾಗೇವಾಡಿ Updated:

ಅಕ್ಷರ ಗಾತ್ರ : | |

Prajavani

ಮಾನವನ ಆಯುಷ್ಯ ಸದಾಕಾಲ ಕ್ಷೀಣಿಸುತ್ತಿರುತ್ತದೆ. ಶಕ್ತಿಯು ಕಡಿಮೆಯಾಗುತ್ತದೆ. ಮಾನವ ಜೀವನವನ್ನು, ಶಕ್ತಿಯನ್ನು, ಆಯುಷ್ಯವನ್ನು ಸಾರ್ಥಕ ಪಡಿಸಿಕೊಳ್ಳುವುದು ಹೇಗೆ? ಎಂಬ ಬಗ್ಗೆ ಅಲ್ಲಮಪ್ರಭುಗಳು ಸುಂದರವಾದ ವಚನದಲ್ಲಿ ವಿವರಿಸುತ್ತಾರೆ.

ಕಾಲುಗಳೆರಡು ಗಾಲಿ ಕಂಡಯ್ಯಾ

ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ

ಬಂಡಿಯ ಹೊಡೆವರೈವರು ಮಾನಿಸರು

ಒಬ್ಬರಿಗೊಬ್ಬರು ಸಮವಿಲ್ಲಯ್ಯಾ

ಅದರಿಚ್ಚೆಯನರಿತು ಹೊಡೆಯದಿದ್ದಡೆ ಅದರಚ್ಚು ಮುರಿಯಿತು ಗುಹೇಶ್ವರ...

ಶರೀರ ಎನ್ನುವುದು ಒಂದು ಸರಕು ತುಂಬಿದ ಬಂಡಿ. ಇದಕ್ಕೆ ಕಾಲುಗಳೇ ಎರಡು ಗಾಲಿಗಳು. ದುರಾದೃಷ್ಟವೆಂದರೆ ಕಾಯದ ಬಂಡಿಯನ್ನು ಹೊಡೆಯಲು ಐವರು ಸವಾರರು ಕುಳಿತಿದ್ದಾರೆ. ಪಂಚಜ್ಞಾನೇಂದ್ರಿಯ ಎಂಬ ಐವರು ಮಾನಿಸರಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲ. ಕಣ್ಣು ಒಂದು ಕಡೆ ಎಳೆದರೆ ಕಿವಿಯು ಮತ್ತೊಂದು ಕಡೆ ಎಳೆಯುತ್ತದೆ. ಕಾಯವೆಂಬ ಬಂಡಿಯನ್ನು ನಡೆಸುವ ಕಲೆ ಗೊತ್ತಿರದೆ ಇದ್ದರೆ ಜೀವನ ಎಂಬ ಅಚ್ಚು ಮುರಿದೇ ಹೋಗುತ್ತದೆ. ಕಾಯದ ಬಂಡಿಯಲ್ಲಿ ತುಂಬಿರುವ ಸರಕಾದ ವಿದ್ಯೆ, ವಿವೇಕ, ಜ್ಞಾನ ಎಲ್ಲವೂ ವ್ಯರ್ಥವಾಗುವ ಸಂಭವವಿರುತ್ತದೆ. ದೇಹದ ಬಂಡಿಯು ದುಶ್ಚಟಗಳಿಗೆ ಬಲಿಯಾಗಿ ನಾಶವಾಗುತ್ತದೆ. ಅದಕ್ಕಾಗಿ ನಾವು ಪ್ರಾಮಾಣಿಕತೆಯಿಂದ ದೇವರ ನೆನೆಯುತ್ತಾ ಕಾಯಕ ಮಾಡುತ್ತಾ ಮಾನವ ಜನ್ಮದ ಸಾರ್ಥಕತೆ ಮಾಡಿಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.