ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲಕ್ಕೆ ‘ವೆರಿಗುಡ್’ ಪರಿಹಾರ

Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಕಗ್ಗೋಡ:ತಂದೆ-ತಾಯಿಗಿಂತ ದೊಡ್ಡವರಿಲ್ಲ. ಕಿರಿಯರಿಗೆ ಹಿರಿಯರ ಅವಶ್ಯಕತೆ. ತಮ್ಮ ಕೆಲಸಕ್ಕೆ ಪಾಲಕರು ಅಡ್ಡ ಬರುತ್ತಾರೆ ಎಂಬ ಮಕ್ಕಳ ಗೊಂದಲಕ್ಕೆ ‘ವೆರಿಗುಡ್’ ಮಕ್ಕಳ ಚಲನಚಿತ್ರ ಪರಿಹಾರ ಸೂತ್ರ ನೀಡಿದೆ.

ಭಾರತೀಯ ಸಂಸ್ಕೃತಿ ಉತ್ಸವ–5ರ ಅಂಗವಾಗಿ ನಡೆದ ಮಾತೃಸಂಗಮದಲ್ಲಿ ಪ್ರದರ್ಶನಗೊಂಡ ಚಲನಚಿತ್ರ ಮಕ್ಕಳು ಮತ್ತು ಪಾಲಕರ ತಪ್ಪುಗಳು ಏನು, ಯಾವ ರೀತಿ ನಡೆದುಕೊಳ್ಳಬೇಕು, ಹಿರಿಯರಿಗೆ ಹೇಗೆ ಗೌರವ ಕೊಡಬೇಕು, ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವುದು ಹೇಗೆ? ಎಂಬ ಒಳ್ಳೆಯ ನೀತಿಯ ಪಾಠಗಳನ್ನು ತಿಳಿಸಿತು. ಚಿತ್ರ ವೀಕ್ಷಿಸಿದ ಜನಸ್ತೋಮ ಮೆಚ್ಚುಗೆ ವ್ಯಕ್ತಪಡಿಸಿತು.

‘ಸಮಾಜದಲ್ಲಿ ಪಾಲಕರು ಮತ್ತು ಮಕ್ಕಳಲ್ಲಿ ಹಲವು ಗೊಂದಲಗಳಿಂದ ಸಂಬಂಧ ಹಳಸುತ್ತಿದೆ. ಏನನ್ನೇ ಮಾಡಲು ಹೊರಟರು ಪಾಲಕರು ಅಡ್ಡ ಬರುತ್ತಾರೆ, ತಮ್ಮ ಒಳ್ಳೆಯದಕ್ಕೆ ಹೇಳಿದರೂ ತಮ್ಮ ಮಾತು ಕೇಳುತ್ತಿಲ್ಲ ಎಂಬ ಮಾತುಗಳು ಹಲವು ಪಾಲಕರು, ಮಕ್ಕಳಿಂದ ಕೇಳಿ ಬರುತ್ತಿದೆ.

ಸರಿಯಾಗಿ ಅರ್ಥ ಮಾಡಿಕೊಳ್ಳದ್ದಕ್ಕೆ ಈ ಸಮಸ್ಯೆಗಳು ಬರುತ್ತಿವೆ ಎಂಬುದನ್ನು ಪಾಲಕರು ಮತ್ತು ಮಕ್ಕಳನ್ನೇ ಬಳಸಿಕೊಂಡು ಚಿತ್ರ ಸಿದ್ಧಪಡಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಾಗಿದೆ. ನಿರೀಕ್ಷೆಗೂ ಮೀರಿ ನಮ್ಮ ಚಿತ್ರವನ್ನು ಮಕ್ಕಳು ಮತ್ತು ಪಾಲಕರು ಸ್ವೀಕರಿಸಿದ್ದಾರೆ.

ನುರಿತ ಕಲಾವಿದ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳದೆ, ಸಾಮಾನ್ಯ ಮಕ್ಕಳಿಗೆ ವಿಶೇಷ ತರಬೇತಿ ನೀಡಿ, ಸಿದ್ದಪಡಿಸಿ ನಾಲ್ಕು ತಿಂಗಳ ಚಿತ್ರೀಕರಣ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರುವುದು ನನಗಲ್ಲದೆ ಪ್ರತಿಯೊಬ್ಬ ಪಾತ್ರಧಾರಿಗೂ ಖುಷಿ ಕೊಟ್ಟಿದೆ. ಚಿತ್ರೀಕರಣಕ್ಕಾಗಿ 120 ಮಕ್ಕಳು, 200 ಪಾಲಕರು, 60 ಕೆಲಸಗಾರರು ಕಾರ್ಯ ನಿರ್ವಹಿಸಿದ್ದಾರೆ’ ಎಂದು ಚಿತ್ರದ ನಿರ್ದೇಶಕ ಯಶವಂತ ಸರದೇಶಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಶಾಲಾ-ಕಾಲೇಜುಗಳಲ್ಲಿ ಚಲನಚಿತ್ರ ಪ್ರದರ್ಶನಗೊಳ್ಳಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿಕೊಳ್ಳಲಾಗಿದೆ. ಸದ್ಯ ಬಾಗಲಕೋಟೆ, ಧಾರವಾಡ ಜಿಲ್ಲೆಯ ವಿವಿಧಡೆ ಪ್ರದರ್ಶನಗೊಂಡಿದೆ. ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ವಿಜಯಪುರದಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಕಡೆ ಚಿತ್ರ ಪ್ರದರ್ಶನಗೊಂಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಡೆಗೂ ಪ್ರದರ್ಶನಗೊಳ್ಳುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

‘10/10 ವೆರಿಗುಡ್ ಸಿನಿಮಾದಲ್ಲಿ ನಟಿಸುವ ಪೂರ್ವದಲ್ಲಿ ತಂದೆ-ತಾಯಿಗಳ ಮಾತನ್ನು ಕೇಳದೆ ಹಟ ಹಿಡಿದು ನನಗೆ ಇಷ್ಟವಾದ ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದೆ. ತಪ್ಪು ದಾರಿಯಲ್ಲಿ ನಡೆಯುತ್ತಿರುವಾಗ ಅದು ಸರಿಯಲ್ಲ ಎಂದು ಪಾಲಕರು ಹೇಳಿದರೂ ಕೇಳುತ್ತಿರಲಿಲ್ಲ. ನಾನು ಮಾಡುವ ಎಲ್ಲಾ ಕೆಲಸವೂ ನನಗೆ ಸರಿ ಎನ್ನಿಸುತ್ತಿತ್ತು.ಸಿನಿಮಾದಲ್ಲಿ ನಟಿಸಿದ ನಂತರ ನಾನು ತಪ್ಪು ಮಾಡುತ್ತಿರುವ ಕುರಿತು ಅರಿವಿಗೆ ಬಂದಿತು. ಪಾಲಕರು ಏನೇ ಹೇಳಿದರೂ ನಮ್ಮ ಒಳತಿಗೆ ಎಂಬುದು ಅರ್ಥವಾಯಿತು. ಇದನ್ನು ಪ್ರತಿಯೊಬ್ಬ ಮಗುವು ತಿಳಿದುಕೊಳ್ಳಬೇಕು. ವೇದಿಕೆ ಹತ್ತಲು ಭಯವಾಗುತ್ತಿದ್ದ ನನಗೆ ಕ್ಯಾಮೆರಾ ಎದುರು ನಟಿಸುವ ಧೈರ್ಯದ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ’ ಎನ್ನುತ್ತಾರೆ ಮುಂಡಗೋಡದ ಸಂಗಮೇಶ ಹಿರೇಮಠ.

‘ಮಕ್ಕಳನ್ನು ಪಾಲಕರು, ಪಾಲಕರನ್ನು ಮಕ್ಕಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿರುವುದಕ್ಕೆ ವೈಮನಸ್ಸು ಮೂಡುತ್ತಿದೆ. ಅದಕ್ಕೆ ಪರಿಹಾರ ದೊರೆಯುವ ಅಂಶಗಳು 10/10 ವೆರಿಗುಡ್ ಮಕ್ಕಳ ಚಲನಚಿತ್ರದಿಂದ ತಿಳಿದುಕೊಳ್ಳಲು ಅನುಕೂಲವಾಯಿತು. ಪ್ರತಿ ಮಗುವಿಗೂ ಈ ಚಿತ್ರ ತೋರಿಸುವ ಕೆಲಸ ಶಿಕ್ಷಣ ಇಲಾಖೆಯಿಂದ ನಡೆಯಬೇಕು. ಇದರಿಂದ ತಮ್ಮಲ್ಲಿರುವ ಗೊಂದಲಗಳನ್ನು ಬಿಟ್ಟು, ಒಳ್ಳೆಯ ನೀತಿ ಪಾಠಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ’ ಎಂದು ಬಸವನಬಾಗೇವಾಡಿಯ ಸಂದೇಶ ಬಿರಾದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT