ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ, ಭೀಮಾ
Last Updated 7 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ಮತ್ತು ಭೀಮಾ ನದಿಗಳುಜಿಲ್ಲೆಯಲ್ಲಿ ತುಂಬಿ ಹರಿಯುತ್ತಿವೆ.

ಆಲಮಟ್ಟಿ ಜಲಾಶಯದಿಂದ ನದಿಗೆ ನೀರನ್ನು ಹರಿಬಿಡಲಾಗಿದೆ. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತವೂ ಅದಾಗಲೇ ಸಿದ್ಧತೆ ಮಾಡಿಕೊಳ್ಳತೊಡಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌,ಜಿಲ್ಲೆಯಲ್ಲಿ ಸದ್ಯ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ತಲೆದೋರಿದರೂ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

₹ 11 ಕೋಟಿ

ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ಬಳಿ ಹಣಕಾಸಿನ ಕೊರತೆ ಇಲ್ಲ. ಸದ್ಯ ₹ 11 ಕೋಟಿ ಎಸ್‌ಡಿಆರ್‌ಎಫ್‌ (ರಾಜ್ಯ ವಿಪತ್ತು ನಿರ್ವಹಣಾ ನಿಧಿ) ನಿಧಿ ಇರುವುದಾಗಿ ತಿಳಿಸಿದರು.

ಈಗಾಗಲೇ ಪ್ರವಾಹ ನಿರ್ವಹಣೆ ಸಂಬಂಧ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ಸಭೆ ನಡೆಸಲಾಗಿದೆ. ವಿಡಿಯೊ ಸಂವಾದವನ್ನೂ ನಡೆಸಲಾಗಿದೆ. ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಎಂಜಿನಿಯರ್‌ ಸೇರಿದಂತೆ ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯ ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಕ್ಷಣ, ಕ್ಷಣದ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಗ್ರುಫ್‌ನಲ್ಲಿ ನೀಡಲಾಗುತ್ತಿದೆ. ಈ ಮಾಹಿತಿ ಆಧರಿಸಿ, ಜಿಲ್ಲೆಯಲ್ಲಿ ಪ್ರವಾಹ ನಿರ್ವಹಣೆ ಸಂಬಂಧ ನಿಯೋಜಿಸಲಾಗಿರುವ ನೋಡೆಲ್‌ ಅಧಿಕಾರಿಗಳ ವಾಟ್ಸ್‌ ಆ್ಯಪ್‌ ಗ್ರೂಫ್‌ಗೆ ಮಾಹಿತಿ, ಸೂಚನೆ ನೀಡಲಾಗುತ್ತಿದೆಎಂದರು.

ಜಲಾಶಯಗಳು ಬಹುತೇಕ ಭರ್ತಿಯಾಗಿರುವುದರಿಂದ ಹಾಗೂ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ದಂಡೆಯ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಹಳ್ಳಿಗಳಲ್ಲಿ ಡಂಗೂರ ಸಾರಲಾಗಿದೆ. ಅಧಿಕಾರಿಗಳು ಸಹ ಗ್ರಾಮಗಳಿಗೆ ತೆರಳಿ ಜನರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಪ್ರದೇಶಗಳಲ್ಲಿ ಮಳೆಯಿಂದ ಅನಾಹುತಗಳಾದರೆ ನಗರ ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ ಎಂದರು.

ಜಿಲ್ಲಾಡಳಿತದ ಬಳಿ 3 ಯಾಂತ್ರೀಕೃತ ಬೋಟ್‌, 5 ಮಾನವ ಚಾಲಿತ ಬೋಟ್‌, 9 ಕಯಾಕ್‌ ಬೋಟ್‌, 1 ರಬ್ಬರ್‌ ಬೋಟ್‌ ಇವೆ. ಜೊತೆಗೆ ಕೆಬಿಜಿಎನ್‌ಎಲ್‌ ನಲ್ಲೂ ಯಾಂತ್ರೀಕೃತ ಬೋಟ್‌ಗಳಿದ್ದು, ಅಗತ್ಯವಿದ್ದರೆ ಬಳಸಿಕೊಳ್ಳಲು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಹ ಸಾಧ್ಯತೆಎಲ್ಲೆಲ್ಲಿ?

ಆಲಮಟ್ಟಿ ಜಲಾಶಯದಿಂದ 3 ಲಕ್ಷಕ್ಕೂ ಅಧಿಕ ನೀರನ್ನು ನದಿಗೆ ಹರಿಬಿಟ್ಟರೆ ಹಾಗೂ ಮಲಪ್ರಭಾ ನದಿಯಿಂದಲೂ ನೀರು ಹೆಚ್ಚಾದರೆ ಮಾತ್ರ ಮುದ್ದೇಬಿಹಾಳ ತಾಲ್ಲೂಕಿನ 22 ಗ್ರಾಮಗಳಲ್ಲಿ 10 ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಇನ್ನುಳಿದ 12 ಗ್ರಾಮಗಳ ಕೃಷಿ ಜಮೀನು ಜಲಾವೃತವಾಗುವ ಸಾಧ್ಯತೆ ಇದೆ.

ನಿಡಗುಂದಿ ತಾಲ್ಲೂಕಿನ 5 ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.ಮಹಾರಾಷ್ಟ್ರದಲ್ಲಿ ಮಳೆ ಅಧಿಕವಾಗಿ, ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾದರೆ ಬಬಲೇಶ್ವರ ತಾಲ್ಲೂಕಿನ ಐದು ಹಳ್ಳಿಗಳು ಹಿನ್ನೀರಿನಲ್ಲಿ ಸಿಲುಕುವ ಸಾಧ್ಯತೆ ಇದೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ 2ರಿಂದ 3 ಲಕ್ಷ ಕ್ಯೂಸೆಕ್‌ ನೀರನ್ನು ಭೀಮಾ ನದಿಗೆ ಹರಿಬಿಟ್ಟರೆ ಮಾತ್ರ ಜಿಲ್ಲೆಯ ಇಂಡಿ ತಾಲ್ಲೂಕಿನ 11, ಚಡಚಣ ತಾಲ್ಲೂಕಿನ 11 ಮತ್ತು ಸಿಂದಗಿ ತಾಲ್ಲೂಕಿನ 12 ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷಿ ಜಮೀನು ಮುಳುಗಡೆಯಾಗುವ ಸಾಧ್ಯತೆ ಇದ್ದು, ಇದರಿಂದ ಅಪಾರ ಪ್ರಮಾಣದ ಬೆಳೆನಷ್ಠವಾಗುವ ಸಾಧ್ಯತೆ ಇದೆ.

***

ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ ಸಂತ್ರಸ್ಥರಿಗೆ ಕಾಳಜಿ ಕೇಂದ್ರ, ಗೋಶಾಲೆ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ

-ಪಿ.ಸುನೀಲ್ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

-ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತದಿಂದ 1077 ಮತ್ತು 08352 221261 ಸಹಾಯವಾಣಿ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT