ಶುಕ್ರವಾರ, ಮೇ 14, 2021
27 °C
ಬಿರುಸುಗೊಂಡ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನ ಚುನಾವಣೆ

ವಿಜಯಪುರ ಜಿಲ್ಲಾ ಕಸಾಪ: ಕೈಗೂಡದ ‘ಕಸಾಪ’ ಅವಿರೋಧ ಆಯ್ಕೆ ಕಸರತ್ತು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಅವಿರೋಧ ಆಯ್ಕೆ ಮಾಡಬೇಕೆಂದು ಜಿಲ್ಲೆಯ ಹಿರಿಯ ಸಾಹಿತಿಗಳು ನಡೆಸಿದ ಕಸರತ್ತು ಕೊನಗೂ ಕೈಗೂಡಿಲ್ಲ. ಹೀಗಾಗಿ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾದಂತಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಸಿಂಪೀರ ವಾಲೀಕಾರ, ಮಲ್ಲಿಕಾರ್ಜುನ ಯಂಡಿಗೇರಿ, ಮಲ್ಲಿಕಾರ್ಜುನ ಭೃಂಗೀಮಠ, ಜಂಬುನಾಥ ಕಂಚ್ಯಾಣಿ, ಶಿವಾನಂದ ಮಂಗಾನವರ, ಬಂಡೆಪ್ಪ ತೇಲಿ, ಕಲ್ಲಪ್ಪ ಶಿವಶರಣ, ಬಸವರಾಜ ಕುಂಬಾರ, ಮಹಾದೇವಪ್ಪ ರೆಬಿನಾಳ, ಶ್ರೀಶೈಲ ಆಳೂರ, ಬಸವರಾಜ ಸುಕಾಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಅವಿರೋಧ ಆಯ್ಕೆ ಸಂಬಂಧ ಶರಣ ಸಾಹಿತ್ಯ ಪರಿಷತ್‌ ಮತ್ತು ವೀರಶೈವ ಮಹಾಸಭಾದ ಪ್ರಮುಖರ ಉಪಸ್ಥಿತಿಯಲ್ಲಿ ಎರಡು ಬಾರಿ ನಡೆದ ಸಭೆಗಳಿಗೆ, ಈಗಾಗಲೇ ನಾಮಪತ್ರ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳು ಬಾರದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಕಸರತ್ತು ವಿಫಲವಾಗಿದೆ.

ಈ ಹಿಂದಿನ ಕಸಾಪ ಚುನಾವಣೆಯಲ್ಲಿ ಕೆಲವರ ಪರವಾಗಿ ಕಾರ್ಯನಿರ್ವಹಿಸಿದವರು, ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು ಹಾಗೂ ಎಲ್ಲರನ್ನು ಒಳಗೊಳ್ಳದವರು ಸೇರಿಕೊಂಡು ಅವಿರೋಧ ಆಯ್ಕೆಯ ಕಸರತ್ತು ನಡೆಸಿರುವುದು ಒಮ್ಮತದ ನಿರ್ಧಾರಕ್ಕೆ ಬಾರದಿರಲು ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. 

ಒಟ್ಟು 12 ಜನ ಆಕಾಂಕ್ಷಿಗಳ ಪೈಕಿ ಯಾರೆಲ್ಲ ತಮ್ಮ ನಾಮಪತ್ರ ಹಿಂಪಡೆಯಲಿದ್ದಾರೆ ಮತ್ತು ತಮ್ಮ ಬೆಂಬಲವನ್ನು ಯಾರಿಗೆ ಘೋಷಿಸಲಿದ್ದಾರೆ ಎಂಬುದು ಸೋಮವಾರ (ಏ.12) ನಿರ್ಧಾರವಾಗಲಿದೆ. ಪ್ರಮುಖವಾಗಿ ಐದರಿಂದ ಆರು ಜನ ಮಾತ್ರ ಕಣದಲ್ಲಿ ಉಳಿಯುವ ಸಾಧ್ಯತೆ ಇದ್ದು, ಚುನಾವಣಾ ಕಣ ರಂಗೇರುವ ಸಾಧ್ಯತೆ ಇದೆ.

ಸಾಹಿತ್ಯ ಪರಿಷತ್ತಿನಲ್ಲಿ ಗುಂಪುಗಾರಿಕೆ, ರಾಜಕಾರಣ, ಒಡಕು ಬೇಡ ಎಂಬ ಆಶಯಕ್ಕೆ ಈ ಬಾರಿಯ ಚುನಾವಣೆ ಬಹುತೇಕ ಎಳ್ಳುನೀರು ಬಿಟ್ಟಂತಿದೆ. ಪರಸ್ಪರ ಆರೋಪ, ಪ್ರತ್ಯಾರೋಪಗಳಿಗೆ ಕಸಾಪ ಚುನಾವಣಾ ಕಣ ವೇದಿಕೆಯಾಗಲಿದೆ.

ಕಣದಲ್ಲಿರುವ ಪ್ರಮುಖ ಆಕಾಂಕ್ಷಿಗಳು ಈಗಾಗಲೇ ಎರಡರಿಂದ ಮೂರು ಬಾರಿ ಕನ್ನಡ ಸಾಹಿತ್ಯ ಪರಿಷತ್‌ ಮತದಾರರನ್ನು ಎರಡೆರಡು ಬಾರಿ ಭೇಟಿಯಾಗಿ, ಮತ ಯಾಚಿಸಿದ್ದಾರೆ. ಯುಗಾದಿ ಬಳಿಕ ಪ್ರಚಾರ ಮತ್ತಷ್ಟು ಚುರುಕು ಪಡೆಯಲಿದೆ.

ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಜಿಲ್ಲೆಯಲ್ಲಿ ಕಸಾಪ ಪ್ರಮುಖ ಜೊತೆ ಸಭೆಗಳನ್ನು ನಡೆಸಿ, ಸುದ್ದಿಗೋಷ್ಠಿಗಳನ್ನು ನಡೆಸಿ ಬೆಂಬಲ ಯಾಚಿಸಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಹ ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಮತಯಾಚಿಸಿದ್ದಾರೆ.

ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವವರು ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವವವರೊಂದಿಗೆ  ಗುರುತಿಸಿಕೊಂಡಿಲ್ಲದಿರುವುದು ವಿಶೇಷ.

ಜಿಲ್ಲೆಯಲ್ಲಿ 9,500 ಅರ್ಹ ಮತದಾರರು ಇದೆ. ಇದರಲ್ಲಿ ಸುಮಾರು 400 ಹಿರಿಯ ಸದಸ್ಯರು ಮೃತಪಟ್ಟಿದ್ದಾರೆ ಮತ್ತೆ ಕೆಲವರು ಬೇರೆ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಮೇ 9ರಂದು ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ಹಾಗೂ ಅದೇ ದಿನ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು