ಗುರುವಾರ , ಆಗಸ್ಟ್ 18, 2022
27 °C
629 ಮತಗಳ ಅಂತರದಿಂದ ವಾಲಿಕಾರಗೆ ಜಯಕಾರ

ವಿಜಯಪುರ: ಹಾಸಿಂಪೀರ ‘ಕೈ’ಗೆ ಕನ್ನಡ ಸಾಹಿತ್ಯ ಪರಿಷತ್ ಚುಕ್ಕಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಹಳ ಕುತೂಹಲ ಕೆರಳಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ಉತ್ಸಾಹಿ, ಸಂಘಟಕ, ರಾಜಕಾರಣಿಯೂ ಆಗಿರುವ ಹಾಸಿಂಪೀರ ವಾಲಿಕಾರ ನೂತನ ಸಾರಥಿಯಾಗಿ ಹೊರಹೊಮ್ಮಿದ್ದಾರೆ.

ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯಲ್ಲಿ ‘ಕನ್ನಡ ತೇರ‘ನ್ನು ಎಳೆಯುವ ಜವಾಬ್ದಾರಿ ವಾಲಿಕಾರ ಅವರ ಹೆಗಲಿಗೆ ಬಿದ್ದಿದೆ. 

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಾಲಿಕಾರ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಗೆಲುವಿನ ಬಳಿಕ ಶ್ರೀಸಿದ್ದೇಶ್ವರ ಗುಡಿ, ಹಾಸಿಂಪೀರ ದರ್ಗಾಕ್ಕೆ ಭೇಟಿ ನೀಡಿದರು. ಆ ನಂತರ ಗಾಂಧಿ, ಬಸವೇಶ್ವರ, ಅಂಬೇಡ್ಕರ್‌ ಸರ್ಕಲ್‌ನಲ್ಲಿರುವ ಪುತ್ಥಳಿಗೆ ಹಾರ ಹಾಕಿದರು.

ವಾಲಿಕಾರ ಅವರಿಗೆ 2,490 ಮತಗಳು ಲಭಿಸಿವೆ. 629 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸಮೀಪ ಸ್ಪರ್ಧಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರ ಪರ 1,861 ಮತಗಳು ಚಲಾವಣೆಯಾಗಿವೆ. 1,176 ಮತಗಳನ್ನು ಪಡೆದಿರುವ ಮಲ್ಲಿಕಾರ್ಜುನ ಬೃಂಗೀಮಠ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕಲ್ಲಪ್ಪ ಶಿವಶರಣ 30 ಹಾಗೂ ಶ್ರೀಶೈಲ ಆಳೂರ 15 ಮತಗಳನ್ನು ಪಡೆದುಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಒಟ್ಟು 9745 ಸದಸ್ಯರ ಪೈಕಿ 5620 ಮತಗಳು ಚಲಾವಣೆಯಾಗಿದ್ದವು. 48 ಮತಗಳು ತಿರಸ್ಕೃತಗೊಂಡಿವೆ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ಕಸಾಪ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಆಸಕ್ತಿ ತೋರದಿರುವುದು ಮೇಲ್ನೋಟಕ್ಕೆ ಕಂಡುಬಂದಿತು.

ಮೂರು ಅವಧಿಯಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮಲ್ಲಿಕಾರ್ಜುನ ಯಂಡಿಗೇರಿ ಅವರ ವಿರುದ್ಧ ಜಿಲ್ಲಾ ಸಾಹಿತ್ಯ ವಲಯದಲ್ಲಿ ಸಾಕಷ್ಟು ವಿರೋಧಿ ಅಲೆ ಎದ್ದಿತ್ತು. 12 ವರ್ಷ ಆಡಳಿತ ನಡೆಸಿದರೂ, ಪರಿಷತ್‌ನಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಸಾಹಿತ್ಯ ಭವನ ನಿರ್ಮಾಣ ಮಾಡಿಲ್ಲ ಎಂಬ ಅಸಮಾದಾನವಿತ್ತು. ಅಲ್ಲದೇ, ಕಸಾಪ ಕಾರ್ಯಕ್ರಮಗಳಲ್ಲಿ ಕೇವಲ ತಮ್ಮ ಹಿಂಬಾಲಕರಿಗೆ ವೇದಿಕೆ ಕಲ್ಪಿಸಿದ್ದರು ಎಂಬ ಆರೋಪ ಬಲವಾಗಿತ್ತು. ಈ ವಿರೋಧದ ಲಾಭವನ್ನು ಪಡೆಯುವಲ್ಲಿ ಹಾಸಿಂಪೀರ ವಾಲಿಕಾರ ಯಶಸ್ವಿಯಾಗಿದ್ದಾರೆ. 

ಹಾಸಿಂಪೀರ ಅವರು ಒಂದು ವರ್ಷದ ಈಚೆಗೆ ಚುನಾವಣೆ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಹೊಸಬರನ್ನು ಪರಿಷತ್‌ನ ಸದಸ್ಯರನ್ನಾಗಿ ಮಾಡಿದ್ದರು. ಅಲ್ಲದೇ, ಜಿಲ್ಲೆಯ ಹಳ್ಳಿ, ಪಟ್ಟಣ, ನಗರವನ್ನು ನಾಲ್ಕೈದು ಬಾರಿ ಸುತ್ತಿ, ಮತದಾರರ ಓಲೈಕೆ ಮಾಡಿದ್ದರು.

ಹಾಸಿಂಪೀರ ಅವರು ದಶಕದಿಂದ ವಿಜಯಪುರ ನಗರದಲ್ಲಿ ತಮ್ಮದೇ ಆದ ಸಂಘಟನೆ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳನ್ನು ಸಂಘಟಿಸಿ, ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುವ ಮೂಲಕ ಜನಪ್ರಿಯತೆ ಸಾಧಿಸಿದ್ದರು. ಅಲ್ಲದೇ, ಜಾತಿ, ಧರ್ಮಾತೀತವಾಗಿ ಎಲ್ಲರೊಡನೆ ಒಡನಾಟ, ಸಂಬಂಧ ಇಟ್ಟುಕೊಂಡಿರುವುದು ಅವರ ಗೆಲುವು ಸುಲಭವಾಯಿಸಿತು.

ದಶಕದಿಂದ ಜಡ್ಡುಗಟ್ಟಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ರೂಪ ನೀಡುವುದಾಗಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದು, ಆ ನಿಟ್ಟಿನಲ್ಲಿ ಹಾಸಿಂಪೀರ ಆದ್ಯತೆ ನೀಡಬೇಕು ಎಂಬುದು ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕನ್ನಡ ಮನಸ್ಸುಗಳು ಒತ್ತಾಸೆಯಾಗಿದೆ.

ನಿಕಟಪೂರ್ವ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಯಂಡಿಗೇರಿ ಅವರು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಇದೀಗ ನೂತನವಾಗಿ ಆಯ್ಕೆಯಾಗಿರುವ ಹಾಸಿಂಪೀರ ವಾಲಿಕಾರ ಕಾಂಗ್ರೆಸ್‌ ಪಕ್ಷದ ಮುಖಂಡರಾಗಿದ್ದಾರೆ. ಒಟ್ಟಾರೆ ಕಸಾಪ ಜಿಲ್ಲಾ ಘಟಕ ರಾಜಕಾರಣಿಗಳ ತೆಕ್ಕೆಯಲ್ಲೇ ಇರುವುದು ವಿಶೇಷ.

***

ಕನ್ನಡ ಭವನ, ಕಸಾಪ ಕಾರ್ಯಕ್ರಮಗಳಲ್ಲಿ ಶ್ರೀಗಳಿಗೆ ಸಾನ್ನಿಧ್ಯ, ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆದ್ಯತೆ ನೀಡುತ್ತೇನೆ. ಮತದಾರರ ನಂಬಿಕೆ, ವಿಶ್ವಾಸ ಉಳಿಸಿಕೊಂಡು ಕಾರ್ಯನಿರ್ವಹಿಸುತ್ತೇನೆ

–ಹಾಸಿಂಪೀರ ವಾಲಿಕಾರ, ನೂತನ ಅಧ್ಯಕ್ಷ, ಕಸಾಪ ವಿಜಯಪುರ ಜಿಲ್ಲಾ ಘಟಕ, 

ಅಭ್ಯರ್ಥಿಗಳು ಪಡೆದ ಮತಗಳ ವಿವರ

ತಾಲ್ಲೂಕು;ಹಾಸಿಂಪೀರ ವಾಲಿಕಾರ;ಮಲ್ಲಿಕಾರ್ಜುನ ಯಂಡಿಗೇರಿ;ಮಲ್ಲಿಕಾರ್ಜುನ ಬೃಂಗೀಮಠ

ವಿಜಯಪುರ;912;654;269

ಸಿಂದಗಿ;169;102;113

ಇಂಡಿ;155;186;45

ಮುದ್ದೇಬಿಹಾಳ;122;239;231

ಬಸವನ ಬಾಗೇವಾಡಿ;194;164;98

ಚಡಚಣ;72;98;19

ಆಲಮೇಲ;198;125;39

ನಿಡಗುಂದಿ;95;37;58

ತಾಳಿಕೋಟೆ;127;190;56

ಕೊಲ್ಹಾರ;125;24;25

ಬಬಲೇಶ್ವರ;83;06;06

ದೇವರ ಹಿಪ್ಪರಗಿ;135;20;43

ತಿಕೋಟಾ;103;16;33

ಒಟ್ಟು;2,490;1,861;1,176

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು