ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಲ್ಹಾರ: ಕಾಂಗ್ರೆಸ್‌ಗೆ ಬಹುಮತ, ಸಚಿವರ ನಿರ್ಧಾರಕ್ಕೆ ಒಮ್ಮತ

ಕೊಲ್ಹಾರ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ
ಕೆ.ಎಸ್.ಬಾಲಗೊಂಡ
Published : 14 ಆಗಸ್ಟ್ 2024, 5:41 IST
Last Updated : 14 ಆಗಸ್ಟ್ 2024, 5:41 IST
ಫಾಲೋ ಮಾಡಿ
Comments

ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಒಟ್ಟು 17 ಸ್ಥಾನದ ಕೊಲ್ಹಾರ ಪಟ್ಟಣ ಪಂಚಾಯಿತಿಯಲ್ಲಿ 14 ಸದಸ್ಯಬಲ ಹೊಂದಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಬಹುವರ್ಷಗಳ ನಂತರ ಅಧ್ಯಕ್ಷ, ಉಪಾಧ್ಯಕ್ಷಗಿರಿ ಒಲಿದಿವೆ.

ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ ಚುನಾಯಿತರಾಗಿ ಎರಡೂವರೆ ವರ್ಷಗಳು ಗತಿಸಿದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದೇ ಮೀಸಲಾತಿ ಘೋಷಣೆಗೆ ಸದಸ್ಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಕಳೆದ ವಾರ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಿಸಲಾತಿ ಪ್ರಕಟಿಸಿದೆ. ಇದರಲ್ಲಿ ಕೊಲ್ಹಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ನಿಗದಿಯಾಗಿದೆ.

ಕೊಲ್ಹಾರ ಪಟ್ಟಣ ಪಂಚಾಯಿತಿ ಒಟ್ಟು17 ಸದಸ್ಯರ ಪೈಕಿ ಕಾಂಗ್ರೆಸ್ 11, ಬಿಜೆಪಿ 3, ಎಐಎಂಐಎಂ 2 ಸ್ಥಾನಗಳು ಹಾಗೂ ಪಕ್ಷೇತರ ಒಬ್ಬ ಅಭ್ಯರ್ಥಿ ಚುನಾಯಿತರಾಗಿದ್ದರು. ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಎಐಎಂಐಎಂನ ಇಬ್ಬರು ಹಾಗೂ ಪಕ್ಷೇತರ ಸದಸ್ಯರು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ‌ ಸೇರಿ ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಒಟ್ಟು 14 ಜನ ಸದಸ್ಯಬಲ ಹೊಂದಿದೆ. ಸಹಜವಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗರಿಗೆದರಿವೆ.

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪಕ್ಷೇತರ ಸದಸ್ಯ ಸೇರಿ, ಹಲವು ಪ್ರಮುಖ ಕಾಂಗ್ರೆಸ್ ಸದಸ್ಯರು ಪ್ರಬಲ‌ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಇರುವ ಎಲ್ಲ ಏಳು ಮಹಿಳಾ‌ ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಎರಡೂ ಸ್ಥಾನಗಳಿಗೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಇತ್ತೀಚೆಗೆ ಕಾಂಗ್ರೆಸ್ ಮುಖಂಡರಾದ ಕಲ್ಲು ದೇಸಾಯಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪಕಾಲಿಯವರ ನೇತೃತ್ವದಲ್ಲಿ ಸಭೆ ನಡೆಸಿ ಕಾಂಗ್ರೆಸ್ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಸ್ಥಳೀಯ ಶಾಸಕರು ಆಗಿರುವ ಸಚಿವ ಶಿವಾನಂದ ಪಾಟೀಲರು ಮಾಡುವ ಆಯ್ಕೆಗೆ ಅಂತಿಮ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ಸದಸ್ಯರು ಒಮ್ಮತ ಸೂಚಿಸಿದ್ದಾರೆ ಎನ್ನಲಾಗಿದೆ.

ಯಾರೇ ಅಧ್ಯಕ್ಷ, ಉಪಾಧ್ಯಕ್ಷರಾದರೂ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿನ ಮೂಲಸೌಲಭ್ಯ ಕೊರತೆಗಳು ಸೇರಿ ನಾನಾ ಸಮಸ್ಯೆಗಳನ್ನು ಸರಿಪಡಿಸಿ, ಸಂತ್ರಸ್ತ ನಿವಾಸಿಗಳ ಸಮಸ್ಯೆಗಳಿಗೆ ಮುಕ್ತಿ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂಬುದು ಜನರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT