ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿಯಲ್ಲಿ ‘ಭೀಮಾ ಕೋರೆಗಾಂವ್ ವಿಜಯಸ್ತಂಭ’

ದೇಶದಲ್ಲಿರುವ ಎರಡನೇ ಅತ್ಯಂತ ಎತ್ತರದ ಸ್ತಂಭವಿದು; ಸಿಂದಗಿಯ ದಲಿತರ ಹೆಮ್ಮೆಯ ಪ್ರತೀಕವಿದು...
Last Updated 5 ಜನವರಿ 2019, 19:30 IST
ಅಕ್ಷರ ಗಾತ್ರ

ಸಿಂದಗಿ:ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಈಚೆಗಷ್ಟೇ ಅನಾವರಣಗೊಂಡ ‘ಭೀಮಾ ಕೋರೆಗಾಂವ್ ವಿಜಯಸ್ತಂಭ’ ದೇಶದಲ್ಲಿರುವ ಎರಡನೇಯ ಅತ್ಯಂತ ಎತ್ತರದ ಮಾದರಿ ಸ್ತಂಭವಾಗಿದೆ.

ಮಹಾರಾಷ್ಟ್ರದ ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ವಿಜಯಸ್ತಂಭವಿದ್ದರೆ, ಸಿಂದಗಿಯಲ್ಲಿ ಲೋಕಾರ್ಪಣೆಗೊಂಡ ಸ್ತಂಭದ ಎತ್ತರ 52 ಅಡಿ. ಇದರಿಂದ ಇದು ಎರಡನೇ ಎತ್ತರದ ಸ್ತಂಭ ಎಂಬ ಖ್ಯಾತಿ ಗಳಿಸಿದೆ.

ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಲ ವರ್ಷಗಳ ಹಿಂದೆಯೇ, ಭೀಮಾ ಕೋರೆಗಾಂವ್ ವಿಜಯಸ್ತಂಭ ಸ್ಥಾಪನೆಯಾಗಿತ್ತು. ಇದು ರಾಜ್ಯದ ಮೊದಲ ವಿಜಯಸ್ತಂಭ ಎಂಬ ಹೆಸರು ಪಡೆದಿತ್ತು. ಹಲ ದಶಕದ ಬಳಿಕ ಸಿಂದಗಿಯಲ್ಲಿ ರಾಜ್ಯದ ಎರಡನೇ ವಿಜಯಸ್ತಂಭ ಅನಾವರಣಗೊಂಡಿರುವುದು ಇಲ್ಲಿನ ವಿಶೇಷ.

ಸಂಘಪಾಲ ಬಂತೇಜಿ ಪಟ್ಟಣದ ಡಾ.ಅಂಬೇಡ್ಕರ್ ಭವನದ ಆವರಣದಲ್ಲಿ, ಸುದೀರ್ಘ ಅವಧಿ ನಡೆಸಿದ ಭಗವಾನ್‌ ಬುದ್ಧ ಬೋಧನಾ ಪ್ರವಚನದ ಸಂದರ್ಭದಲ್ಲಿ, ಹಲವು ಬಾರಿ ಭೀಮಾ ಕೋರೆಗಾಂವ್ ವಿಜಯಸ್ತಂಭದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು.

ಇದು ಸುರೇಶ ಮ್ಯಾಗೇರಿ, ಮಲ್ಲು ಕೂಚಬಾಳ, ಸಂತೋಷ ಜಾಧವ, ರವಿ ಹೊಳಿ, ಬಾಲಕೃಷ್ಣ ಚಲವಾದಿ ಮನದಲ್ಲಿ ಪ್ರೇರಣೆಯಾಗಿ, ಜಾಗೃತಗೊಂಡಿತು. ಎಲ್ಲರೂ ಪರಸ್ಪರ ಚರ್ಚೆ ನಡೆಸಿ, ಸಿಂದಗಿಯಲ್ಲಿ ವಿಜಯಸ್ತಂಭ ನಿರ್ಮಾಣದ ಸಂಕಲ್ಪ ತೊಟ್ಟರು. ದಲಿತ ನಾಯಕರು, ಕಾರ್ಯಕರ್ತರೇ ತಮ್ಮ ಸ್ವಂತ ಖರ್ಚಿನಿಂದ ಸ್ವಾಭಿಮಾನದ ಪ್ರತೀಕವಾಗಿ ನಿರ್ಮಿಸಿದ ಸ್ತಂಭ ಇದಾಗಿದೆ. ಯಾರ ಬಳಿ ದೇಣಿಗೆ ಪಡೆಯದಿರುವುದು ವಿಶೇಷ.

22 ದಿನದಲ್ಲಿ ನಿರ್ಮಾಣ
ವಿಜಯಸ್ತಂಭ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿಂದಗಿಯಲ್ಲಿ ದಲಿತ ಸಂಘಟನೆಗಳ ಸಭೆ ನಡೆಯಿತು. ಆರಂಭದಲ್ಲೇ ಯಾರಿಂದಲೂ ದೇಣಿಗೆ ಪಡೆಯಬಾರದು ಎಂಬ ಠರಾವು ಅಂಗೀಕಾರಗೊಂಡಿತು. ಎಲ್ಲರ ಸಮ್ಮತಿ ದೊರಕುತ್ತಿದ್ದಂತೆ 22 ದಿನಗಳಲ್ಲಿ 52 ಅಡಿ ಎತ್ತರದ ವಿಜಯಸ್ತಂಭ ನಿರ್ಮಾಣಗೊಂಡಿತು.

ವಿಜಯಸ್ತಂಭ ನಿರ್ಮಾಣದ ವೆಚ್ಚ, ಲೋಕಾರ್ಪಣೆ ಕಾರ್ಯಕ್ರಮದ ವೆಚ್ಚ ಎಲ್ಲವೂ ಸೇರಿ ₹ 8 ಲಕ್ಷ ಖರ್ಚಾಗಿದೆ. ಈ ಮೊತ್ತವನ್ನು ದಲಿತ ಶ್ರಮಿಕರು, ಮುಖಂಡರೇ ಭರಿಸಿದ್ದು, ಹೆಮ್ಮೆಯ ಪ್ರತೀಕವಾಗಿ ಇದೀಗ ಬಿಂಬಿತಗೊಳ್ಳುತ್ತಿದೆ.

ದಲಿತ ಸಂಘಟನೆಗಳ ಪ್ರಮುಖರಾದ ವೈ.ಸಿ.ಮಯೂರ, ಚಂದ್ರಕಾಂತ ಸಿಂಗೆ, ಅಶೋಕ ಸುಲ್ಪಿ, ಶ್ರೀಶೈಲ ಜಾಲವಾದಿ, ಧರ್ಮಣ್ಣ ಎಂಟಮಾನ, ಶರಣು ಖಾನಾಪುರ, ಸಚಿನ ಚೌರ, ಸಾಹೇಬಣ್ಣ ಪುರದಾಳ ಸೇರಿದಂತೆ ಇನ್ನೂ 27 ಜನ ದಲಿತ ಸಂಘಟನೆಗಳ ಪ್ರಮುಖರು ಧನ ಸಹಾಯ, ಶ್ರಮದಾನ ಮಾಡಿದ್ದಾರೆ.

ಸ್ಮಾರಕದ ಮಾದರಿ
ಈ ವಿಜಯಸ್ತಂಭ ಕಲ್ಲಿನ ಆಕಾರದ ಕಬ್ಬಿಣದ್ದಾಗಿದೆ. ಸ್ತಂಭದ ಮುಖ್ಯ ಭಾಗದಲ್ಲಿ ಮಹಾರ್ ರೆಜಿಮೆಂಟ್ ಲಾಂಛನವಿದೆ. ಎಡ ಬದಿಯಲ್ಲಿ ಅಶೋಕ ಚಕ್ರವರ್ತಿಯ ಭಾವಚಿತ್ರ, ಬಲಬದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ, ಸ್ತಂಭದ ಹಿಂದುಗಡೆ ಮಹಾರ್ ರೆಜಿಮೆಂಟ್‌ನ ಪ್ರಮುಖ ಸಿದ್ಧನಾಕ ಮಲಕನಾಕ ಭಾವಚಿತ್ರವಿದೆ.

‘ಈ ಸ್ತಂಭ ಸ್ಮಾರಕವಲ್ಲ. ಸ್ಮಾರಕದ ಮಾದರಿ. ನೂರಾರು ಮೈಲು ದೂರದಲ್ಲಿರುವ ಕೋರೆಗಾಂವ್‌ಗೆ ಹೋಗುವುದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಿಂದಗಿ ಪಟ್ಟಣದ ದಲಿತರು ಸಿದ್ಧನಾಕ, ರಾಮನಾಕ, ಗೋದನಾಕ, ಭಾಗನಾಕ, ಅಂಬನಾಕ, ಗಣನಾಕ, ಬಾಳನಾಕ, ರೂಪನಾಕ, ಬಾಲನಾಕ, ವಟಿನಾಕ, ಗಜನಾಕ, ಬಾಪನಾಕ, ಕೇನಾಕ, ಸಮನಾಕ, ಗಣನಾಕ, ದೇವನಾಕ, ಗೋಪಾಲನಾಕ, ಹರನಾಕ, ಜೇಠನಾಕ, ಗಣನಾಕ, ಸೀನನಾಕ, ಬಾಳನಾಖ... ಈ 22 ಸೈನಿಕರಿಗೆ ನಿತ್ಯವೂ ಸ್ವಾಭಿಮಾನದ ಸೆಲ್ಯೂಟ್ ಸಲ್ಲಿಸಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ’ ಎಂದು ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT