ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿದೆ ಕಾಶಿರಾಯ ಅಮರ್‌ ರಹೇ ಘೋಷಣೆ

Last Updated 3 ಜುಲೈ 2021, 13:24 IST
ಅಕ್ಷರ ಗಾತ್ರ

ವಿಜಯಪುರ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹಂಜಿನ್ ಗ್ರಾಮದಲ್ಲಿ ಶುಕ್ರವಾರಭಯೋತ್ಪಾದಕರ ವಿರುದ್ದದ ಕಾರ್ಯಾಚಾರಣೆಯಲ್ಲಿ ಹುತಾತ್ಮರಾಗಿರುವ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರ ಅಂತ್ಯಕ್ರಿಯೆಗೆ ಗ್ರಾಮದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಜುಲೈ 4 ರಂದು ಬೆಳಿಗ್ಗೆ 8 ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗ್ರಾಮದ ಹೊಸ ಬಸ್ ನಿಲ್ದಾಣದ ಹತ್ತಿರ ಹುತಾತ್ಮ ಯೋಧನ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಒಂದು ಗಂಟೆ ಕಾಲಾವಕಾಶ ಮಾಡಿಕೊಡಲಾಗುವುದು ಎಂದು ತಹಶೀಲ್ದಾರ್‌ ಎಂ.ಎನ್.ಬಳಿಗಾರ ತಿಳಿಸಿದರು.

ಯೋಧ ಕಾಶಿರಾಯ ಬೊಮ್ಮನಹಳ್ಳಿ ಅವರು ಹುತಾತ್ಮರಾದ ಸುದ್ದಿ ಕುಟುಂಬ ಸದಸ್ಯರು ಸೇರಿದಂತೆ ಸಂಬಂಧಿಕರಿಗೆ ತಿಳಿಯುತ್ತಿದ್ದಂತೆ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಸಂಬಂಧಿಕರು ಸೇರಿದಂತೆ ಗ್ರಾಮದ ಪ್ರತಿ ಮನೆಯಲ್ಲೂ ಹುತಾತ್ಮ ಯೋಧನ ಕುರಿತ ಮಾತುಗಳೆ ಕೇಳಿ ಬರುತ್ತಿವೆ.

ಕಾಶಿರಾಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ಸುದ್ಧಿ ತಿಳಿದು ಅತೀವ ದುಃಖವಾಯಿತು ಎಂದು ಗ್ರಾಮಸ್ಥರು ತಿಳಿಸಿದರು.

ಕುಟುಂಬಕ್ಕೆ ಆಸರೆಯಾಗಿದ್ದ ಕಾಶಿರಾಯ ಬಡ ತಂದೆ, ತಾಯಿ ಅಕ್ಕರೆಯಲ್ಲಿ ಬೆಳೆದವರು. ತನ್ನ ಇಚ್ಛೆಯಂತೆ ಸೇನೆಗೆ ಸೇರಿದಾಗ ಕುಟುಂಬ ಸದಸ್ಯರು ಸೇರಿದಂತೆ ಗ್ರಾಮಸ್ಥರಿಗೂ ಹೆಮ್ಮೆಯಾಗಿತ್ತು. ಬಡ ಕುಟುಂಬವಾಗಿದ್ದರಿಂದ ಒಂದೇ ಕೋಣೆಯಲ್ಲಿ ಕುಟುಂಬ ಸದಸ್ಯರ ವಾಸ. ತಂದೆ ಹೊಲಿಗೆ ಕೆಲಸ, ತಾಯಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು.

ಕಾಶಿರಾಯ ಸೇನೆಗೆ ಸೇರಿದ ನಂತರ ಕುಟುಂಬದ ಕಷ್ಟಗಳು ದೂರವಾದಂತಾಗಿತ್ತು. ಗ್ರಾಮದಲ್ಲಿ ಮನೆ ಕಟ್ಟಿಸಿ ತಂದೆ, ತಾಯಿ ಸೇರಿದಂತೆ ಕುಟುಂಬ ಸದಸ್ಯರು ಸಂತೋಷದಿಂದ ಜೀವನ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಿದ್ದರು. ರಜೆಗೆಂದು ಗ್ರಾಮಕ್ಕೆ ಬಂದಾಗ ಸಂಬಂಧಿಕರು ಸೇರಿದಂತೆ ಸ್ನೇಹಿತರನ್ನು ಭೇಟಿಯಾಗಿ ಮಾತನಾಡಿಸುತ್ತಿದ್ದರು ಎಂದು ಸ್ಮರಿಸಿದರು.

ಕಾಶಿರಾಯ ರಜೆಗೆಂದು ಗ್ರಾಮಕ್ಕೆ ಬಂದಾಗ ಸ್ನೇಹಿತರಿಗೆ ದೇಶ ಪ್ರೇಮ ಬೆಳೆಸಿಕೊಳ್ಳುವಂತೆ ಹೇಳುತ್ತಿದ್ದರು. ಸೇನೆಯಲ್ಲಿ ಸೇವೆ ಸಲ್ಲಿಸುವುದೆಂದರೆ ದೇಶ ಸೇವೆ ಮಾಡಿದಂತೆ, ಸೇನೆಯಲ್ಲಿ ನಿವೃತ್ತಿ ಹೊಂದಿದ ನಂತರವೂ ಸೇನೆಯಲ್ಲೇ ಕಾರ್ಯ ನಿರ್ವಹಿಸುವ ಬಯಕೆ ವ್ಯಕ್ತಪಡಿಸುತ್ತಿದ್ದರು. ಸೇನೆಗೆ ಸೇರುವಂತೆ ಯುವಕರಿಗೆ ಪ್ರೋತ್ಸಾಯಿಸುತಿದ್ದರು ಎಂದು ಹುತಾತ್ಮ ಯೋಧನ ಸಂಬಂಧಿ ರಾಹುಲ ಕಲಗೊಂಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT