ಸೋಲಾಪುರ: ಉಜಿನಿ ಜಲಾಶಯದಿಂದ ಆ.5 ರಿಂದ ಕಾಲುವೆಗೆ ನೀರು ಹರಿಸಬೇಕು. ಸೋಲಾಪುರ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಸೂಚಿಸಿದರು.
ನಗರದ ಜಿಲ್ಲಾ ಯೋಜನಾ ಭವನದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಉಜಿನಿ ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆ ಇತ್ತು, ಆದ್ದರಿಂದ ನಗರದಲ್ಲಿ 5 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಸದ್ಯ ಉಜಿನಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಒಳಹರಿವು ಆಗುತ್ತಿದೆ. ಕಾರಣ ಸೋಲಾಪುರ ನಗರಕ್ಕೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬೇಕು ಎಂದರು.
ನಗರದ ರಮಾಯಿ ಆವಾಸ ಯೋಜನೆ, ಪ್ರಧಾನಮಂತ್ರಿ ಆವಾಸ ಯೋಜನೆ, ಘರ್‌ಕುಲ ಕಾಮಗಾರಿಯ ಅಹವಾಲು ಬರುವ 8 ದಿನಗಳೊಳಗೆ ಸಾದರ ಪಡಿಸಬೇಕು ಎಂದರು. ಈ ವರ್ಷ ಕೈಗೊಳ್ಳುವ ಅನುಸೂಚಿತ ಜಾತಿ ಹಾಗೂ ಆದಿವಾಸಿ ಬುಡಕಟ್ಟು ಜನರ ಅಭಿವೃದ್ಧಿ ಕಾಮಗಾರಿ ಯೋಜನೆಗಳಿಗೆ ₹858 ಕೋಟಿ ಅನುದಾನ ಮಂಜೂರು ಮಾಡಿದರು.
ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇರುವುದರಿಂದ ಶಾಸಕರು ಆದಷ್ಟು ಬೇಗ ಈ ವರ್ಷದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ತ್ವರಿತ ಪ್ರಗತಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜನಪ್ರತಿನಿಧಿಗಳು ಅನುದಾನದ ಕೊರತೆಯಿಂದ ವಿದ್ಯುತ್ ಶಕ್ತಿ ಸರಬರಾಜು ಕಾಮಗಾರಿ ನಿಂತಿದೆ. ಬೆಳೆವಿಮೆ ಹಣ, ಆರೋಗ್ಯ ಕೇಂದ್ರಕ್ಕೆ ಅನುದಾನ, ವಿದ್ಯುತಶಕ್ತಿ ಭಗೀರಥ ಯೋಜನೆಯಿಂದ ರೈತರಿಗೆ ದೊರೆಯದ ಪ್ರಯೋಜನ, ಭೀಮಾ ನದಿಗೆ ಬ್ಯಾರೆಜ್ ನಿರ್ಮಿಸುವುದು, ಪಂಡರಪುರದ ಮರಾಠಾ ಭವನಕ್ಕಾಗಿ ತಾತ್ಕಾಲಿಕವಾಗಿ ಅನುದಾನ ನೀಡುವುದು, ಅಂಗವಿಕಲರಿಗೆ ನೀಡಿರುವ ಈ-ರಿಕ್ಷಾ ಪಾಸಿಂಗ್ ತೊಂದರೆ ನೀಗಿಸುವುದು, ನಗರದಲ್ಲಿ ನಿಂತಿರುವ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸುವುದು, ವೈದ್ಯರ ಕೊರತೆ ಹೀಗೆ ಸಾಲು ಸಮಸ್ಯೆಗಳನ್ನು ಜನ ಪ್ರತಿನಿಧಿಗಳು ಉಸ್ತುವಾರಿ ಸಚಿವರ ತೆರೆದಿಟ್ಟರು.
ನಗರದಲ್ಲಿ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ನಿರ್ಲಕ್ಷವಹಿಸುತ್ತಿದ್ದಾರೆ. ನಿರ್ಲಕ್ಷವಹಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ನಿಯುಕ್ತಿಗೊಳಿಸಬೇಕು. ನಗರದಲ್ಲಿ ಪ್ರಾರಂಭವಾಗಿರುವ 100 ಬೆಡ್‌ಗಳ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಶಾಸಕ ವಿಜಯಕುಮಾರ ದೇಶಮುಖ ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.