ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಾರಂತ್ಯ ಕರ್ಫ್ಯೂ; ಸಂತೆಯಲ್ಲಿ ಜನವೋ ಜನ!

ವಿಜಯಪುರ, ಸಿಂದಗಿ, ಆಲಮಟ್ಟಿಯಲ್ಲಿ ಸಂತೆ ನಿರಾತಂಕ
Last Updated 16 ಜನವರಿ 2022, 14:55 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಸೋಂಕು ತಡೆಗೆ ವಿಧಿಸಲಾಗಿರುವ ವಾರಂತ್ಯ ಕರ್ಫ್ಯೂ ನಡುವೆಯೂ ಭಾನುವಾರ ವಿಜಯಪುರ, ಸಿಂದಗಿ, ಆಲಮಟ್ಟಿ ಸೇರಿದಂತೆ ವಿವಿಧೆಡೆ ನಡೆದ ಸಂತೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಲೆಕ್ಕಿಸದೇ ಮಾಸ್ಕ್‌ ಧರಿಸಿದೇ, ಪರಸ್ಪರ ಅಂತರ ಕಾಪಾಡಾದೇ ಗ್ರಾಹಕರು, ವ್ಯಾಪಾರಿಗಳು ಸಂತೆಯಲ್ಲಿ ಎಂದಿನಂತೆ ಮೈಮರೆತು ವಹಿವಾಟಿನಲ್ಲಿ ತೊಡಗಿದ್ದರು.

ವಿಜಯಪುರದ ಜಲನಗರ(ಬುದ್ಧ ವಿಹಾರದ ಸಮೀಪ), ಆಶ್ರಮ ರಸ್ತೆಯ ರಾಮಮಂದಿರ ಬಳಿಯಿಂದ ಲಿಂಗದಗುಡಿ ರಸ್ತೆ, ಗೋದಾವರಿ ಹೋಟೆಲ್‌ ಎದುರು, ಕೆ.ಸಿ.ನಗರದಲ್ಲಿ ವಾರದ ಸಂತೆ ನಿರಾತಂಕವಾಗಿ ನಡೆಯಿತು.

ಆಲಮಟ್ಟಿಯಲ್ಲಿ ಭಾನುವಾರ ವಾರದ ಸಂತೆ ಭರ್ಜರಿಯಾಗಿ ನಡೆಯಿತು.ಶನಿವಾರದಿಂದಲೇ ಸಂತೆ ನಡೆಯದಂತೆ ತಡೆಗಟ್ಟಲು ತಾಲ್ಲೂಕು ಆಡಳಿತ ಪ್ರಯತ್ನಿಸಿತ್ತು. ಆದರೂ ವಾರದ ಸಂತೆ ನಿರಾತಂಕವಾಗಿ ಜರುಗಿತು. ಬೆಳಿಗ್ಗೆ 10 ಗಂಟೆಯ ನಂತರ ಆಲಮಟ್ಟಿ ಪೊಲೀಸರು ಸಂತೆಯನ್ನು ಬಂದ್ ಮಾಡಿಸಲು ಪ್ರಯತ್ನಿಸಿದ್ದರು. ಆದರೆ, ಸಂತೆ ಮಾತ್ರ 11 ಗಂಟೆಯವರೆಗೂ ನಡೆಯಿತು. ಸಹಸ್ರಾರು ಜನರು ಸೇರಿದ್ದರು. ನಿಡಗುಂದಿಯಲ್ಲಿಯೂ ಶನಿವಾರದ ವಾರದ ಸಂತೆಯೂ ಜರುಗಿತು.

ಸಿಂದಗಿ ಪಟ್ಟಣದಲ್ಲಿ ಎರಡನೇ ವಾರಾಂತ್ಯ ಕರ್ಪ್ಯೂಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾನುವಾರ ವಾರದ ಸಂತೆ ಎಂದಿನಂತೆ ನಡೆದಿದೆ.

ಸೋಮಪೂರ ರಸ್ತೆಯಲ್ಲಿ ಸಂತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದು, ಅವರು ಮಾಸ್ಕ್ ಸಹ ಧರಿಸಿರಲಿಲ್ಲ, ಅಂತರವೂ ಕಾಪಾಡಲಿಲ್ಲ. ಇದೇ ರೀತಿ ಟಿಪ್ಪುಸುಲ್ತಾನ್‌ ವೃತ್ತದಿಂದ ಪುರಸಭೆ ಕಾರ್ಯಾಲಯದ ಎದುರಿನ ತೋಂಟದ ಡಾ.ಸಿದ್ಧಲಿಂಗ ಶ್ರೀ ಮುಖ್ಯರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಕಂಡು ಬಂದರು. ಸಂತೆಯಲ್ಲಿ ವಾಹನಗಳು ಬಂದಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಮೊದಲ ವಾರಾಂತ್ಯ ಕರ್ಫ್ಯೂ ದಿನದಂದು ನಡೆದ ಕುರಿ ಸಂತೆ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿದ್ದು, ಎಚ್ಚೆತ್ತುಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಈ ವಾರ ಕುರಿ ಸಂತೆ ಸಂಪೂರ್ಣ ಬಂದ್ ಮಾಡಲಾಗಿತ್ತು.

‘ವಾರದ ಸಂತೆಯಂತೆ ಇದ್ದುದು ನಿಜ. ಮಾಸ್ಕ್ ಧರಿಸದವರಿಂದ ₹ 2 ಸಾವಿರ ದಂಡ ವಸೂಲಿಯಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಾದುಗೋಳಕರ ತಿಳಿಸಿದ್ದಾರೆ.

‘ವಾರದ ಸಂತೆ ವಿಷಯವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸುತ್ತೇನೆ’ ಎಂದು ತಹಶೀಲ್ದಾರ್‌ ಸಂಜೀವಕುಮಾರ ದಾಸರ ತಿಳಿಸಿದ್ದಾರೆ.

****

ಸೊಪ್ಪು ರಸ್ತೆಗೆ ಎಸೆದ ರೈತ

ವಿಜಯಪುರ: ಇಲ್ಲಿನ ಗೋದಾವರಿ ಹೋಟೆಲ್‌ ಸಮೀಪ ಭಾನುವಾರ ನಡೆದ ಸಂತೆಯಲ್ಲಿ ಸೊಪ್ಪು ಮಾರಲು ಪೊಲೀಸರು ತಡೆವೊಡ್ಡಿದರು ಎಂದು ಆರೋಪಿಸಿರೈತರೊಬ್ಬರು ತಾವು ತಂದಿದ್ದ ಕೊತ್ತಂಬರಿ, ಮೆಂತೆ, ರಾಜಗಿರಿ, ಪಾಲಕ್‌ ಸೊಪ್ಪನ್ನು ರಸ್ತೆ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಡೋಮನಾಳದಿಂದ ಬಂದಿದ್ದ ರೈತಭೀಮನಗೌಡ ಬಿರಾದಾರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಮಾರು ₹ 2 ಸಾವಿರ ಮೊತ್ತದ ಸೊಪ್ಪನ್ನು ಎಸೆದು, ಆಕ್ರೋಶ ವ್ಯಕ್ತಪಡಿಸಿದರು.‌ ರೈತನ ಆಕ್ರೋಶ ಕಂಡು ಸಂತೆಗೆ ಬಂದಿದ್ದ ನೂರಾರು ಗ್ರಾಹಕರು ಮರುಗಿದರು.

***

ನಿಲ್ಲದ ಅನಗತ್ಯ ತಿರುಗಾಟ

ನಾಲತವಾಡ: ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಜೋರಾಗಿದೆ. ಅದರ ಭೀಕರತೆ ತಡೆಗೆ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ವೀಕೆಂಡ್, ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶಿಸಿದೆ. ಆದರೆ, ರಸ್ತೆಯಲ್ಲಿ ಜನರ ಅನಗತ್ಯ ತಿರುಗಾಟ ಮಾತ್ರ ಇನ್ನು ನಿಂತಿಲ್ಲ.

ನಾಲತವಾಡ ಹೊರವಲಯದ ಪೊಲೀಸ್‌ ಠಾಣಿಯ ಹವಾಲ್ದಾರ್ ಪಿ.ಎಸ್.ಪಾಟೀಲ ನೇತೃತ್ವದಲ್ಲಿ ಬಸವರಾಜ ಚಿಂಚೋಳಿ, ಬಸವರಾಜ ಹಿಪ್ಪರಗಿ, ಹನುಮಂತ ಹೆಬ್ಬುಲಿ ಟೀಂ ಶುಕ್ರವಾರ ರಾತ್ರಿಯಿಂದಲೆ ಜನರಲ್ ಸ್ಟೋರ್, ಬಟ್ಟಿ, ಬಾಂಡೆ ಅಂಗಡಿ ,ಬಾರ್, ಹೋಟೆಲ್, ದಾಬಾಗಳನ್ನು ಮುಚ್ಚಿಸಿದರು.

ಭಾನುವಾರ ಬೆಳಿಗ್ಗೆಯಿಂದ ರಸ್ತೆಗಿಳಿದವರಿಗೆ ಲಾಟಿ ರುಚಿ ತೋರಿಸುವುದರ ಜೊತೆ ಮಾಸ್ಕ್ ಹಾಕಿಕೊಳ್ಳುವಂತೆ ಪೋಲಿಸರು ತಿಳಿಹೇಳಿದರು. ಅಗತ್ಯ ವಸ್ತುಗಳ ಮಾರಾಟಗಾರರಿಗೆ, ಆಸ್ಪತ್ರೆಗಳಿಗೆ ತೆರಳುವವರಿಗೆ ಮಾತ್ರವೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ ಅನಗತ್ಯ ತಿರುಗಾಡದಂತೆ, ಅಂಗಡಿಗಳನ್ನು ತೆರೆಯದಂತೆ ಪೋಲಿಸರು ತಾಕೀತು ಮಾಡಿ ಹೊರಡುತ್ತಿದ್ದಂತೆ, ಇತ್ತ ಕೆಲವರು ಅಂಗಡಿಗಳನ್ನು ತೆರೆದು ವ್ಯಾಪಾರಕ್ಕಿಳಿದರು.

ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ತಿರುಗಾಟ ಮುಂದುವರೆದಿದ್ದು, ಅನಾವಶ್ಯಕವಾಗಿ ಓಡಾಡುವರಿಗೆ ಲಾಟಿ ಏಟು ನೀಡಿದ ಪೊಲೀಸರು, ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿ ಮತ್ತೆ ಕಾಣಿಸದಂತೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT