ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರವೇ ಪತನಗೊಳ್ಳುವಾಗ ಪ್ರತಿಪಕ್ಷ ನಾಯಕ ಏಕೆ? -ಬಸನಗೌಡ ಪಾಟೀಲ ಯತ್ನಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ
Published 1 ನವೆಂಬರ್ 2023, 13:39 IST
Last Updated 1 ನವೆಂಬರ್ 2023, 13:39 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದಲ್ಲಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡುವುದರೊಳಗಾಗಿ ಕಾಂಗ್ರೆಸ್ ಸರ್ಕಾರವೇ ಇಲ್ಲದಂತಾಗಬಹುದು. ಹೀಗಾಗಿ ಪ್ರತಿಪಕ್ಷ ನಾಯಕನನ್ನು ಏಕೆ ಮಾಡಬೇಕು?’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ₹1.05 ಲಕ್ಷ ಕೋಟಿ ಹಣ ಬೇಕು. ಅಷ್ಟು ಹಣ ಬಿಡುಗಡೆ ಆಗುವುದರೊಳಗಾಗಿ ಸರ್ಕಾರವೇ ಪತನವಾಗಲಿದೆ. ಶಾಸಕ ರಮೇಶ ಜಾರಕಿಹೊಳಿ ಹೇಳಿದ ಹಾಗೆ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಎಲ್ಲೇ ರಾಜಕೀಯ ಭೂಕಂಪನವಾದರೂ ಮೊದಲು ಬೆಳಗಾವಿ ಜಿಲ್ಲೆಯವರಿಗೆ ಗೊತ್ತಾಗುತ್ತದೆ. ಹಾಗೆಯೇ, ರಮೇಶ ಜಾರಕಿಹೊಳಿಯವರಿಗೆ ಗೊತ್ತಾಗಿದೆ ಅನ್ನಿಸ್ತಿದೆ’ ಎಂದರು.

‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ದೊಡ್ಡ ಷಡ್ಯಂತ್ರ ನಡೆದಿದೆ. ಡಿ.ಕೆ. ಶಿವಕುಮಾರ್‌ಗೆ 70 ಶಾಸಕರ ಬೆಂಬಲ ಇದೆ ಎಂದು ಕಾಂಗ್ರೆಸ್‌ನ ಚನ್ನಗಿರಿ ಶಾಸಕ ಹೇಳಿಕೆ ನೀಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರ ಕಡೆಗೆ 65 ಶಾಸಕರ ಬಲ ಅಷ್ಟೇ ಇದೆ ಎಂದಾಯಿತು’ ಎಂದರು.

‘ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿಲ್ಲ. ಘೋಷಣೆಯಂತೆ 200 ಯುನಿಟ್ ವಿದ್ಯುತ್ ಉಚಿತ ಕೊಡುತ್ತಿಲ್ಲ. ಗೃಹಲಕ್ಷ್ಮಿ ಎಲ್ಲರಿಗೂ ಸಿಕ್ಕಿಲ್ಲ, ಹಣವೂ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ, ಹುಲಿ ಉಗುರು, ಬಸವನಾಡು ನಾಮಕರಣ ಸೇರಿದಂತೆ ಕೆಲಸಕ್ಕೆ ಬಾರದ ವಿಷಯಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದು ದೂರಿದರು.

ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಬೆಂಕಿ ಹಚ್ಚುತ್ತಿರುವ ವಿಷಯವಾಗಿ ಪ್ರತಿಕ್ರಿಯಿಸಿದ ಯತ್ನಾಳ, ‘ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ ಪ್ರಯತ್ನ ಮಾಡಬಾರದು. ಪ್ರಚೋದನೆ ನೀಡುವ ಕೆಲಸ ಖಂಡಿಸುತ್ತೇವೆ’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT